ಪಿರಿಯಾಪಟ್ಟಣ: ಶ್ರೀರಾಮ ಬಿಜೆಪಿಯವರಿಗೆ ಮಾತ್ರ ಸೀಮಿತಗೊಂಡಿಲ್ಲ. ಪಕ್ಷಾತೀತವಾಗಿ ಎಲ್ಲ ಹಿಂದುಗಳು ಪೂಜಿಸುತ್ತಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ತಾಲೂಕಿನ ಪಂಚವಳ್ಳಿ ಗ್ರಾಮದ ಶ್ರೀ ಈಶ್ವರ ಸೇವಾ ಸಮಿತಿ ಮತ್ತು ಶ್ರೀರಾಮ ಭಕ್ತ ಮಂಡಳಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 2ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಶ್ರೀರಾಮ ಭಕ್ತರಿದ್ದಾರೆ, ಪ್ರತಿಯೊಬ್ಬ ಹಿಂದು ಶ್ರೀರಾಮನ ಭಕ್ತರೇ ಆಗಿರುತ್ತಾರೆ. ಅವರವರ ಭಾವನೆಗಳಿಗೆ ತಕ್ಕಂತೆ ಶ್ರೀರಾಮನನ್ನು ಪೂಜಿಸುತ್ತಾರೆ. ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಗಳಿಗೂ ದೇವರ ಅನುಗ್ರಹ ಇದ್ದಲ್ಲಿ ಎಲ್ಲವೂ ಒಳಿತಾಗಲಿದೆ ಎಂದರು. ಮುಂದಿನ ದಿನಗಳಲ್ಲಿಯೂ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ನನ್ನ ಸಹಕಾರವಿರುತ್ತದೆ. ಅದ್ದೂರಿಯಾಗಿ ಇಂತಹ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ಮಾನವನಿಗೆ ಕಷ್ಟಗಳು ಬಂದಾಗ ದೇವರನ್ನು ನೆನೆದು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ನಮ್ಮ ಕಷ್ಟಕಾರ್ಪಣ್ಯಗಳು ಬಗೆಹರಿಯುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ದೇವರ ಪೂಜೆ ಮತ್ತು ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ . ಈ ಹಿಂದೆ ರೈತರು ಮುಂಜಾನೆ ವೇಳೆ ಸೂರ್ಯೋದಯಕ್ಕೂ ಮೊದಲು ದನಕರುಗಳ ಮುಖವನ್ನು ನೋಡಿದರೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಹೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದನ ಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ನಮ್ಮ ಮುಖಗಳನ್ನು ನಾವೇ ನೋಡಿಕೊಳ್ಳುವಂತ ಪರಿಸ್ಥಿತಿ ಇದೆ ಎಂದು ಬೇಸರಿಸಿದರು.
ಪಂಚವಳ್ಳಿ ಗ್ರಾಮದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಆಚರಿಸುವಂತಾಗಲಿ ಎಂದು ಆಶಿಸಿದರು. ಇದೇ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಈಶ್ವರ ಸೇವಾ ಸಮಿತಿ ಮತ್ತು ಶ್ರೀರಾಮ ಭಕ್ತ ಮಂಡಳಿ ಗೌರವಾಧ್ಯಕ್ಷ ಕೆ.ಪಿ.ರಾಜು, ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷ ಕೆ.ಪಿ.ಶಂಕರ್, ಕಾರ್ಯದರ್ಶಿಗಳಾದ ರವಿಕುಮಾರ್, ಶಿವಕುಮಾರ್, ಸದಸ್ಯರಾದ ಲೋಹಿತ್, ಅರುಣ್ ಕುಮಾರ್, ವಿಜಯ್, ನವೀನ್, ಪ್ರಕಾಶ್, ವೀರಭದ್ರ, ಬಸವರಾಜ್, ದಿನೇಶ್, ಜೀವನ್, ಮಹದೇವ್, ಅಭಿ, ವಾಸು, ಪಿ.ಆರ್.ರಾಜಣ್ಣ, ವಿಜಿ, ಶಿವ , ಪ್ರಕಾಶ್, ಮಲ್ಲೇಶ್, ಹರೀಶ್, ಪ್ರಸನ್ನ ಇತರರು ಇದ್ದರು.