ಬೆಂಗಳೂರು: ಮನಸ್ಸಿನ ನಿಯಂತ್ರಣದಿಂದ ನಿಗದಿತ ಗುರಿ ತಲುಪಲು ಸಾಧ್ಯ. ಅಂತಹ ಮನಸ್ಸಿನ ನಿಯಂತ್ರಣಕ್ಕೆ ಯೋಗ ಮತ್ತು ಅಧ್ಯಾತ್ಮಕ ಸಹಕಾರಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ಬಸವೇಶ್ವರನಗರದ ಶ್ರೀಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀಮಠವು ಹಮ್ಮಿಕೊಂಡಿದ್ದ ಸತ್ಸಂಗ – ಸದ್ವಿಚಾರಗಳ ಸಂಪ್ರೋಕ್ಷಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಧ್ಯಾತ್ಮಕ್ಕೆ ಮನುಷ್ಯನನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಇದೆ. ಯೋಗಕ್ಕೆ ಮನಸ್ಸನ್ನು ನಿಯಂತ್ರಿಸುವ ಶಕ್ತಿ ಇದೆ. ಆದ್ದರಿಂದ ಯೋಗ ಮತ್ತು ಅಧ್ಯಾತ್ಮ ವ್ಯಕ್ತಿಯ ಬದುಕನ್ನು ಉತ್ತಮಗೊಳಿಸಲು ಸಹಕಾರಿಯಾಗಿವೆ. ದೋಣಿ ಮುಂದೆ ಸಾಗಬೇಕಾದರೆ ಕಟ್ಟಿರುವ ಹಗ್ಗವನ್ನು ಬಿಚ್ಚಿ ನಂತರ ಹುಟ್ಟನ್ನು ಹಾಕಬೇಕು. ಇಲ್ಲದೇ ಇದ್ದರೆ ಎಲ್ಲ ಶ್ರಮ ವ್ಯರ್ಥವಾಗುತ್ತದೆ. ಹಾಗೆ ಸಾಧನೆಗೆ ಮುನ್ನ ಮನಸ್ಸು ಶುದ್ಧವಾಗಿರಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಶಾಖಾಮಠದ ಶ್ರೀಸೌಮ್ಯನಾಥ ಸ್ವಾಮೀಜಿ, ಮಾಜಿ ಸಚಿವ ಗೋಪಾಲಯ್ಯ, ಬಿಜೆಪಿ ಮುಖಂಡ ಡಾ.ಅರುಣ್ ಸೋಮಣ್ಣ, ಬಿಬಿಎಂಪಿ ಮಾಜಿ ಸದಸ್ಯ ಕೆ.ಉಮೇಶ್ ಶೆಟ್ಟಿ, ಗೋವಿಂದರಾಜನಗರ ಬಿಜೆಪಿ ಮುಖಂಡ ವಿಶ್ವನಾಥಗೌಡ ಮತ್ತಿತರರು ಪಾಲ್ಗೊಂಡಿದ್ದರು.