ಯೂರೋಪ್​ನಲ್ಲಿ ಭರಾಟೆ ಸೌಂಡು!

ಬೆಂಗಳೂರು: ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ ‘ಭರಾಟೆ’ ಸಿನಿಮಾ ಸದ್ದು ಮಾಡುತ್ತಿದೆ. ಮೊದಲ ಫೋಟೋಶೂಟ್​ನಿಂದ ಹಿಡಿದು ಬೃಹತ್ ಸೆಟ್​ಗಳಲ್ಲಿ ಚಿತ್ರೀಕರಣ ಮತ್ತು ತಾರಾಗಣದ ವಿಚಾರವಾಗಿ ‘ಭರಾಟೆ’ ಸುದ್ದಿಯಾಗುತ್ತಲೇ ಇತ್ತು. ಈಗ ಚಿತ್ರಕ್ಕಾಗಿ ಕಾತರದಿಂದ ಕಾದಿರುವ ಅಭಿಮಾನಿಗಳಿಗೆ ಸಿನಿಮಾ ಬಿಡುಗಡೆಯ ಬಗ್ಗೆ ನಿರ್ದೇಶಕ ಚೇತನ್​ಕುಮಾರ್ ಮಾಹಿತಿ ನೀಡಿದ್ದಾರೆ. ಎಲ್ಲವೂ ಪ್ಲಾ್ಯನ್ ಪ್ರಕಾರ ನಡೆದರೆ ಗಣೇಶ ಚೌತಿಗೆ ‘ಭರಾಟೆ’ ಆಗಮಿಸುವುದು ಬಹುತೇಕ ಖಚಿತವಂತೆ. ಹೌದು, ಮೂರು ದಿನಗಳ ಹಿಂದಷ್ಟೇ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ ‘ಭರಾಟೆ’ ಬಳಗ, ಸದ್ಯ ಡಬ್ಬಿಂಗ್ ಕೆಲಸಗಳಿಗೆ ಚಾಲನೆ ನೀಡಲಿದೆ. ಇನ್ನುಳಿದಂತೆ ಎರಡು ಹಾಡಿನ ಶೂಟಿಂಗ್ ಬಾಕಿ ಇದ್ದು, ಅವುಗಳ ಚಿತ್ರೀಕರಣಕ್ಕೂ ಮುನ್ನ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರ್ದೇಶಕರು ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಆ ಹಾಡುಗಳ ಶೂಟಿಂಗ್ ಎಲ್ಲಿ ನಡೆಯಲಿದೆ? ‘ಸದ್ಯ ಬಾಕಿ ಇರುವ ಎರಡು ಹಾಡುಗಳ ಚಿತ್ರೀಕರಣ ಪೂರ್ಣಗೊಂಡರೆ ಸಿನಿಮಾ ಮುಗಿದಂತೆ. ಯೂರೋಪ್​ನ ಹಲವೆಡೆ ಹಾಡುಗಳ ಶೂಟಿಂಗ್​ಗೆ ಪ್ಲಾ್ಯನ್ ರೂಪಿಸಿದ್ದೇವೆ. ಅದರಲ್ಲೂ ಬಲ್ಗೇರಿಯಾ, ಗ್ರೀಸ್​ನ ಕೆಲವೊಂದಿಷ್ಟು ಲೊಕೇಷನ್​ಗಳನ್ನು ಆಯ್ದುಕೊಂಡಿದ್ದೇವೆ. ಕಲರ್​ಫುಲ್ ಆಗಿ, ಹೊಸ ರೀತಿಯಲ್ಲಿ ಹಾಡನ್ನು ತೆರೆಮೇಲೆ ತರುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಜುಲೈನಲ್ಲಿ ಅಲ್ಲಿಗೆ ತೆರಳಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಚೇತನ್. ಅರ್ಜುನ್ ಜನ್ಯ ಸಂಗೀತ ನೀಡಿರುವ ಎಲ್ಲ ಹಾಡುಗಳಿಗೆ ಸ್ವತಃ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ನೃತ್ಯ ನಿರ್ದೇಶನದ ಜವಾಬ್ದಾರಿ ಎ. ಹರ್ಷ ವಹಿಸಿಕೊಂಡಿದ್ದಾರೆ. ಒಟ್ಟು ಒಂದು ವಾರದ ಅವಧಿಯಲ್ಲಿ ಎರಡು ಹಾಡುಗಳ ಶೂಟಿಂಗ್ ಮುಗಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸುಪ್ರೀತ್ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *