ದೆಹಲಿ: ಶ್ರೀಲಂಕಾದ ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಏಕದಿನ ಕ್ರಿಕೆಟ್‌ನಲ್ಲಿ ಟೈಮ್ಡ್ ಔಟ್ (ಸಮಯ ಮೀರಿದ) ನೊಂದಿಗೆ ವಿಕೆಟ್ ನೀಡಿದ ಮೊದಲ ಬ್ಯಾಟರ್ ಎನಿಸಿದರು. ಶ್ರೀಲಂಕಾ ತಂಡದ ಬ್ಯಾಟಿಂಗ್ ವೇಳೆ 24ನೇ ಓವರ್‌ನ 2ನೇ ಎಸೆತದಲ್ಲಿ ಸಧೀರ ಸಮರವಿಕ್ರಮ (41) ಔಟಾದರು. ಬಳಿಕ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ 36 ವರ್ಷದ, ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಸಿದ್ಧತೆ ನಡೆಸಿದರು. ಆದರೆ ಹೆಲ್ಮೆಟ್‌ನಲ್ಲಿ ಕೆಲ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಬದಲಿ ಹೆಲ್ಮೆಟ್‌ಗೆ ಡಗೌಟ್‌ನತ್ತ ಸನ್ನೆ ಮಾಡಿದರು. ಇದರ ಬೆನ್ನಲ್ಲೇ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅಂಪೈರ್‌ಗಳ ಬಳಿ ಟೈಮ್ಡ್ ಔಟ್‌ಗೆ ಮನವಿ ಸಲ್ಲಿಸಿದರು. ಬಳಿಕ ಅಂಪೈರ್ ಮರೈಸ್ ಎರಾಸ್ಮಸ್ ಮತ್ತು ರಿಚಡ್ ಇಲಿಂಗ್‌ವರ್ಥ್ ಅವರೊಂದಿಗೆ ಚರ್ಚೆ ನಡೆಸಿದ ಮ್ಯಾಥ್ಯೂಸ್ ಹೆಲ್ಮೆಟ್ ಸ್ಟ್ರಾಪ್‌ನಲ್ಲಿ ಕೆಲವು ಸಮಸ್ಯೆಗಳಿವೆ ಎಂದು ವಿವರಿಸಿದರು. ಆದರೆ ಐಸಿಸಿ ನಿಯಾಮವಳಿ ಪ್ರಕಾರ ಮ್ಯಾಥ್ಯೂಸ್ ಅವರನ್ನು ಅಂಪೈರ್‌ಗಳ ಔಟ್ ಎಂದು ತೀರ್ಪಿತ್ತರು. ಇದರೊಂದಿಗೆ ಒಂದು ಎಸೆತ ಎದುರಿಸದ ಮ್ಯಾಥ್ಯೂಸ್ ಅಸಮಾಧಾನ ವ್ಯಕ್ತಪಡಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಈ ನಿಯಮಕ್ಕೆ ಹಲವು ಕ್ರಿಕೆಟಿಗರು ಪರ-ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಟೈಮ್ಡ್ ಔಟ್ ? : ಐಸಿಸಿ ನಿಯಮದ ಆರ್ಟಿಕಲ್ 40.1.1 ರ ಪ್ರಕಾರ, ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ನಿವೃತ್ತಿಯಾದ ಬಳಿಕ ಮುಂದಿನ ಬ್ಯಾಟರ್ ನಿಗದಿತ ಸಮಯದಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಅಂದರೆ, ಬ್ಯಾಟರ್ ಔಟಾದ ಅಥವಾ ಗಾಯದಿಂದ ನಿವೃತ್ತಿಗೊಂಡ 2 ನಿಮಿಷದ ಒಳಗೆ ಮುಂದಿನ ಎಸೆತ ಎದುರಿಸಲು ಸಜ್ಜಾಗಿರಬೇಕು. ಒಂದು ವೇಳೆ ಈ ಸಮಯವನ್ನು ಬ್ಯಾಟರ್‌ಗಳು ಮೀರಿದರೆ ಟೈಮ್ಡ್ ಔಟ್(ಸಮಯ ಮೀರಿದ) ಎಂದು ಪರಿಗಣಿಸಲಾಗುತ್ತದೆ. ಆರ್ಟಿಕಲ್ 40.1.2 ಪ್ರಕಾರ, ಮ್ಯಾಥ್ಯೂಸ್ ವಿಕೆಟ್ ಯಾವುದೇ ಬೌಲರ್‌ಗಳಿಗೆ ದೊರೆಯವುದಿಲ್ಲ.