ಸುಸ್ತು ಎಂದು ಮನೆಯಲ್ಲಿ ಮಲಗಿ ಸಾವಿನಿಂದ ಬಚಾವಾದ ಶ್ರೀಲಂಕಾ ಕ್ರಿಕೆಟರ್​

ಕೊಲಂಬೋ: ಸುಸ್ತಾಗುತ್ತಿದೆ ಎಂದು ಚರ್ಚ್​ಗೆ ಈಸ್ಟರ್​ ಪ್ರಾರ್ಥನೆಗಾಗಿ ತೆರಳದೆ ಮನೆಯಲ್ಲೇ ಉಳಿದ ಶ್ರೀಲಂಕಾ ಕ್ರಿಕೆಟ್​ ಆಟಗಾರ ದಸುನ್​ ಶನಕ ಸಾವಿನಿಂದ ಬಚಾವಾಗಿದ್ದಾರೆ.

ಭಾನುವಾರ ನಡೆದ ಘಟನೆಯ ಕುರಿತು ವೆಬ್​ಸೈಟ್​ ಒಂದಕ್ಕೆ ಶ್ರೀಲಂಕಾ ಕ್ರಿಕೆಟ್​ ತಂಡದ ಆಲ್ರೌಂಡರ್​ ದಸುನ್​ ಶನಕ ಸಂದರ್ಶನ ನೀಡಿದ್ದು, ಭಾನುವಾರ ನಡೆದ ಬಾಂಬ್​ ಸ್ಫೋಟದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿನ ದಿನ ಸುದೀರ್ಘ ಪ್ರಯಾಣ ಮಾಡಿದ್ದರಿಂದ ದಣಿದಿದ್ದೆ, ಹಾಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಆದರೆ ತಾಯಿ ಮತ್ತು ಅಜ್ಜಿ ನೆಗೊಂಬೋದ ಚರ್ಚ್​ಗೆ ತೆರಳಿದ್ದರು. ಅವರು ಚರ್ಚ್​ನಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಬಾಂಬ್​ ಸ್ಫೋಟಗೊಂಡಿದೆ ಎಂದು ಅಂದಿನ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

ನಾನು ಮನೆಯಲ್ಲಿದ್ದಾಗ ಬಾಂಬ್​ ಸ್ಫೋಟದ ಶಬ್ದ ಕೇಳಿಸಿತು. ಇದೇ ಸಂದರ್ಭದಲ್ಲಿ ಜನರು ಚರ್ಚ್​ನಲ್ಲಿ ಬಾಂಬ್​ ಸ್ಫೋಟಗೊಂಡಿದೆ ಎಂದು ತಿಳಿಸಿದರು. ನಾನು ತಕ್ಷಣ ಸ್ಥಳಕ್ಕೆ ತೆರಳಿದೆ. ಅಲ್ಲಿನ ದೃಶ್ಯಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಚರ್ಚ್​ ಸಂಪೂರ್ಣವಾಗಿ ಧ್ವಂಸಗೊಂಡಿತ್ತು. ಮೃತದೇಹಗಳನ್ನು ಜನರು ಹೊರಗೆ ಎಳೆದು ಹಾಕುತ್ತಿದ್ದರು. ಅದೃಷ್ಟವಶಾತ್​ ತಾಯಿ ಸುರಕ್ಷಿತವಾಗಿದ್ದರು. ಆದರೆ ಅಜ್ಜಿಯ ತಲೆಗೆ ಯಾವುದೋ ವಸ್ತು ಬಡಿದು ಅವರಿಗೆ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು ಎಂದು ದಸುನ್​ ಶನಕ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *