ಅಗ್ರಸ್ಥಾನದ ಮೇಲೆ ಕಿವೀಸ್ ಕಣ್ಣು: ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಭಾರತವನ್ನು ಹಿಂದಿಕ್ಕುವ ಅವಕಾಶ

ಗಾಲೆ: ಕೂದಲೆಳೆ ಅಂತರದಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್​ಪಟ್ಟ ತಪ್ಪಿಸಿಕೊಂಡ ನ್ಯೂಜಿಲೆಂಡ್ ತಂಡಕ್ಕೀಗ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವ ನಂ.1 ಪಟ್ಟ ಅಲಂಕರಿಸುವ ಅವಕಾಶ ಒದಗಿ ಬಂದಿದೆ. ವಿಶ್ವಕಪ್ ರನ್ನರ್​ಅಪ್ ನ್ಯೂಜಿಲೆಂಡ್ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳು ಬುಧವಾರದಿಂದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿ ಆಗಲಿವೆ. ಇದು ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನ ಭಾಗವಾಗಿದ್ದು, ಪ್ರತಿ ಪಂದ್ಯದ ಗೆಲುವಿಗೆ 60 ಅಂಕ ಸಿಗಲಿದೆ. ಅಲ್ಲದೆ ಉಭಯ ತಂಡಗಳ ಆಟಗಾರರು ಇದೇ ಮೊದಲ ಬಾರಿಗೆ ಜೆರ್ಸಿ ನಂಬರ್​ನೊಂದಿಗೆ ಟೆಸ್ಟ್ ಪಂದ್ಯ ಆಡಲಿದ್ದಾರೆ.

ನ್ಯೂಜಿಲೆಂಡ್ ತಂಡ 2-0ಯಿಂದ ಸರಣಿ ವಶಪಡಿಸಿಕೊಂಡರೆ ವಿಶ್ವ ನಂ.1 ಪಟ್ಟದಲ್ಲಿರುವ ಭಾರತ ತಂಡವನ್ನು ಹಿಂದಿಕ್ಕಲಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ 109 ಅಂಕಗಳೊಂದಿಗೆ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದ್ದರೆ, 113 ಅಂಕಗಳೊಂದಿಗೆ ಭಾರತ ನಂ.1 ಸ್ಥಾನದಲ್ಲಿದೆ. ಭಾರತ ತಂಡಕ್ಕೂ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0ಯಿಂದ ಗೆದ್ದರೆ ನಂ. 1 ಪಟ್ಟ ಮರಳಿ ಪಡೆಯುವ ಅವಕಾಶವಿದೆ.

ಉಪಖಂಡದ ಪಿಚ್​ಗಳ ಮರ್ಮ ಅರಿತಿರುವ ನ್ಯೂಜಿಲೆಂಡ್ ತಂಡ ಸ್ಪಿನ್ ವಿಭಾಗಕ್ಕೆ ಹೆಚ್ಚು ಒತ್ತು ನೀಡಿದೆ. ಭಾರತ ಮೂಲದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್, ಲೆಗ್​ಸ್ಪಿನ್ನರ್ ಟೊಡ್ ಆಶ್ಲೆ ಪ್ರಮುಖ ಅಸ್ತ್ರವಾಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಈ ಜೋಡಿ ಗಮನಾರ್ಹ ನಿರ್ವಹಣೆ ತೋರಿದ್ದು, ತಂಡದ ನೆಮ್ಮದಿ ಹೆಚ್ಚಿಸಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್ ಮೊದಲ ಆಯ್ಕೆಯಾದರೆ, ಟಿಮ್ ಸೌಥಿ ಅಥವಾ ನೀಲ್ ವಾಗ್ನರ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಲಿದ್ದಾರೆ. 1983-84ರ ಚೊಚ್ಚಲ ಲಂಕಾ ಪ್ರವಾಸದ ಬಳಿಕ ನ್ಯೂಜಿಲೆಂಡ್ ತಂಡ ಅಲ್ಲಿ ಟೆಸ್ಟ್ ಸರಣಿ ಜಯಿಸಿಲ್ಲ.

ವಿಶ್ವಕಪ್​ಗೆ ಮುನ್ನ ದಕ್ಷಿಣ ಆಫ್ರಿಕಾ ನೆಲದಲ್ಲಿ 2-0ಯಿಂದ ಲಂಕಾ ತಂಡ ಟೆಸ್ಟ್ ಸರಣಿ ಜಯಿಸಿತ್ತು. ಆಫ್ರಿಕಾ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯಾ ತಂಡ ಎನಿಸಿಕೊಂಡಿತ್ತು. ವಿಶ್ವಕಪ್​ನಲ್ಲಿ ಹೀನಾಯ ಸೋಲಿನಿಂದಾಗಿ ಮುಖ್ಯ ಕೋಚ್ ಚಂಡಿಕಾ ಹತುರುಸಿಂಘಾರನ್ನು ವಜಾ ಮಾಡಲಾಗಿದ್ದು, ರಮೇಶ್ ರತ್ನಾಯಕೆ ಹಂಗಾಮಿ ಕೋಚ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಮಿಂಚಿದ್ದ ಓಶಾದ ಫೆರ್ನಾಂಡೋ, ಜತೆಗೆ ಸುರಂಗಾ ಲಕ್ಮಲ್ ಹಾಗೂ ವಿಶ್ವ ಫೆರ್ನಾಂಡೋ ಒಳಗೊಂಡ ಲಂಕಾ ಪಡೆ ಕಿವೀಸ್ ಸವಾಲಿಗೆ ಸಜ್ಜುಗೊಂಡಿದೆ. -ಏಜೆನ್ಸೀಸ್

06- ನ್ಯೂಜಿಲೆಂಡ್ ತಂಡ ನಂ. 1 ಸ್ಥಾನಕ್ಕೇರಿದರೆ, ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಈ ಸಾಧನೆ ಮಾಡಿದ 6ನೇ ತಂಡ ಎನಿಸಲಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಇದುವರೆಗಿನ 5 ತಂಡಗಳು.

ಇಂದಿನಿಂದ 2ನೇ ಆಶಸ್ ಟೆಸ್ಟ್

ಲಂಡನ್: ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮದ ನಡುವೆಯೂ ತವರು ನೆಲದಲ್ಲೇ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ಇಂಗ್ಲೆಂಡ್ ತಂಡ ಸೇಡಿನ ತವಕದೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಹೋರಾಟಕ್ಕೆ ಸಜ್ಜುಗೊಂಡಿದೆ. 18 ವರ್ಷಗಳ ಬಳಿಕ ತವರಿನ ಹೊರಗೆ ಮೊದಲ ಬಾರಿಗೆ ಆಶಸ್ ಸರಣಿಯಲ್ಲಿ ಮೊದಲ ಪಂದ್ಯ ಜಯಿಸಿದ ವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ಮುನ್ನಡೆ ಕಾಯ್ದು ಕೊಳ್ಳುವ ತವಕದಲ್ಲಿದೆ. ಒಂದು ತಿಂಗಳ ಹಿಂದಷ್ಟೇ ವಿಶ್ವಕಪ್ ಜಯಿಸಿದ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಸರಣಿ ಸಮಬಲಕ್ಕಾಗಿ ಹೋರಾಡಲಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧದ ಬಳಿಕ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಕ್ರಮವಾಗಿ 144 ಹಾಗೂ 142 ಪೇರಿಸಿದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಪ್ರವಾಸಿ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಮೊದಲ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವ ಜೇಮ್್ಸ ಆಂಡರ್​ಸನ್ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದು, ವಿಂಡೀಸ್ ಮೂಲದ ಜೋಫ್ರಾ ಆರ್ಚರ್ ಟೆಸ್ಟ್ ಪದಾರ್ಪಣೆ ನಿರೀಕ್ಷೆ ಇದೆ. 251 ರನ್​ಗಳಿಂದ ಹೀನಾಯ ಸೋಲು ಕಂಡಿರುವ ಜೋ ರೂಟ್ ಬಳಗಕ್ಕೆ ಈ ಪಂದ್ಯ ಸರಣಿಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ ತಂಡದಲ್ಲಿ ಜೇಮ್್ಸ ಪ್ಯಾಟಿನ್ಸನ್ ಬದಲಿಗೆ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಅಥವಾ ಜೋಸ್ ಹ್ಯಾಸಲ್​ವುಡ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. -ಪಿಟಿಐ

Leave a Reply

Your email address will not be published. Required fields are marked *