ಶ್ರೀಲಂಕಾ ಸರಣಿ ಬಾಂಬ್‌ ಸ್ಫೋಟ: ತನ್ನಿಬ್ಬರು ಸ್ನೇಹಿತರ ಸಾವಿಗೆ ಸಂತಾಪ ಸೂಚಿಸಿದ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌

ಬೆಂಗಳೂರು: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 300 ಜನರು ಮೃತಪಟ್ಟು, 500ಕ್ಕೂ ಅಧಿಕ ಜನರು ಗಾಯಗೊಂಡಿದ್ದರೆ ಮೃತರಲ್ಲಿ ಸ್ಯಾಂಡಲ್‌ವುಡ್‌ ನಟ ಗಣೇಶ್‌ ಅವರ ಇಬ್ಬರು ಮಿತ್ರರು ಸೇರಿದ್ದಾರೆ.

ಈ ಕುರಿತು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಣೇಶ್‌ ಅವರು, ನೀವು ನನ್ನೊಂದಿಗಿಲ್ಲ ಎನ್ನುವುದನ್ನು ನಂಬಲು ಆಗುತ್ತಿಲ್ಲ. ದುಖಃವನ್ನು ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ನನ್ನಿಬ್ಬರು ಸ್ನೇಹಿತರಾದ ಪುಟ್ಟರಾಜು ಮತ್ತು ಮಾರೇಗೌಡ(ಅಪ್ಪಿ)ನನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಹಾನುಭೂತಿಯಿದೆ. ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸ್ನೇಹಿತರ ಫೋಟೊ ಪ್ರಕಟಿಸಿ ಬರೆದುಕೊಂಡಿದ್ದಾರೆ.

ಚರ್ಚ್‌ ಮತ್ತು ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 8 ಜನ ಭಾರತೀಯರು ಸೇರಿದಂತೆ 12 ಜನ ವಿದೇಶಿಯರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್)