ಶ್ರೀಲಂಕಾದಲ್ಲಿ ಮರಣದಂಡನೆ ಶಿಕ್ಷೆ ಮರುಜಾರಿ: ಗಲ್ಲಿಗೇರಿಸುವವರಿಗಾಗಿ ಅರ್ಜಿ ಆಹ್ವಾನ

ಕೊಲಂಬೋ: ಶ್ರೀಲಂಕಾದಲ್ಲಿ 42 ವರ್ಷಗಳ ಬಳಿಕ ಮರಣದಂಡನೆ ಶಿಕ್ಷೆ ಮರುಜಾರಿಯಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಇನ್ನೆರಡು ತಿಂಗಳಲ್ಲಿ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ಶ್ರೀಲಂಕಾ ಅಧಿಕಾರಿಗಳು ಅಗತ್ಯವಾದ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀಲಂಕಾದ ಜೈಲು ಆಯುಕ್ತ ಪಿಎನ್​ಎಂ ಧಾನಾಸಿಂಘೆ, ಅಪರಾಧಿಗಳನ್ನು ಗಲ್ಲಿಗೇರಿಸಲು ಇಬ್ಬರನ್ನು ನೇಮಿಸಿಕೊಳ್ಳಲು ನಿರ್ಧರಿಸಿ, ಅರ್ಜಿಗಳನ್ನು ಆಹ್ವಾನಿಸಲಾಗಿದೆ. 1976ರಲ್ಲಿ ಮರಣ ದಂಡನೆ ಶಿಕ್ಷೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಆನಂತರದಲ್ಲಿ ಕೆಲಸವಿಲ್ಲದಾಗಿ ಗಲ್ಲಿಗೇರಿಸುವವರು ಕೆಲಸ ಬಿಟ್ಟು ಹೋಗಿದ್ದಾರೆ. ಆದ್ದರಿಂದ, ಹೊಸದಾಗಿ ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ, ಸೋಮವಾರ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾದಕವಸ್ತು ನಿರ್ಬಂಧಕ್ಕೆ ಈ ಕ್ರಮ: ಶ್ರೀಲಂಕಾದಲ್ಲಿ ಮಾದಕವಸ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆದರೂ ಕೆಲ ದುಷ್ಕರ್ಮಿಗಳು ಮಾದಕವಸ್ತು ಕಳ್ಳಸಾಗಣೆ ಮಾಡಿ, ಮಾರಾಟ ಮಾಡುತ್ತಿದ್ದಾರೆ. ಇಂತಹ ಅಕ್ರಮ ಎಸಗಿದವರನ್ನು ಈಗಾಗಲೆ ಬಂಧಿಸಲಾಗಿದೆ. ಅವರೆಲ್ಲರಿಗೂ ಮರಣದಂಡನೆ ಶಿಕ್ಷೆ ವಿಧಿಸಿ, ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಸಿರಿಸೇನಾ ಕೆಲದಿನಗಳ ಹಿಂದೆ ಸಂಸತ್​ನಲ್ಲಿ ಹೇಳಿಕೆ ನೀಡಿದ್ದರು.

ಈಗಾಗಲೆ ಮಾದಕವಸ್ತುಗಳನ್ನು ಮಾರಾಟ ಮಾಡುತ್ತ ಸಿಕ್ಕಿಬಿದ್ದ 48 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ 30 ಜನರು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆಯ ವಿವಿಧ ಹಂತದಲ್ಲಿದೆ. ಇನ್ನುಳಿದ 18 ಜನರನ್ನು ಗಲ್ಲಿಗೇರಿಸುವುದು ಖಚಿತವಾಗಿದೆ. (ಏಜೆನ್ಸೀಸ್​)