ಸಿಂಹಳೀಯರ ಬೌಲಿಂಗ್​ ದಾಳಿಗೆ ಭಾರತ ತತ್ತರ: ಶ್ರೀಲಂಕಾಕ್ಕೆ ಸಾಧಾರಣ ಗುರಿ

<< ಅರ್ಧ ಶತಕ ಗಳಿಸಿದ ಮಹೇಂದ್ರ ಸಿಂಗ್​ ಧೋನಿ >>

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ, ಶ್ರೀಲಂಕಾ ಬೌಲಿಂಗ್​ ದಾಳಿಗೆ ತತ್ತರಿಸಿ ಅಲ್ಪ ಮೊತ್ತದ ಗುರಿ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ 38.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 112 ರನ್ ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಮೂಲಕ ಶ್ರೀಲಂಕಾ ತಂಡದ ಗೆಲವಿಗೆ 113​ ರನ್​ಗಳು ಸಾಧಾರಣ ಗುರಿ ನೀಡಿದೆ.

ಸಿಹಂಳೀಯರ ಬೌಲಿಂಗ್​ ದಾಳಿಗೆ ಪತರಗುಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಭರವಸೆಯ ಆಟಗಾರ ಶಿಖರ್​ ಧವನ್​ ಯಾವುದೇ ರನ್​ ಖಾತೆ ತೆರೆಯದೇ ಮ್ಯಾಥ್ಯೂಸ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆ ಬಿದ್ದರು.

ಇದರ ಬೆನ್ನಲ್ಲೆ ವಿರಾಟ್​ ಅನುಪಸ್ಥಿತಿಯಲ್ಲಿ ತಂಡದ ಜವಬ್ದಾರಿ ವಹಿಸಿಕೊಂಡಿದ್ದ ನಾಯಕ ರೋಹಿತ್​ ಶರ್ಮಾ ಜವಬ್ದಾರಿಯುತ ಆಟವಾಡದೇ ಕೇವಲ 2 ರನ್​ ಗಳಿಸಿ ಲಕ್ಮಲ್​ ಓವರ್​​ನಲ್ಲಿ ಡಿಕ್​ವೆಲ್ಲಾರಿಗೆ ಕ್ಯಾಚ್​ ನೀಡಿ ಪೆವಲಿಯನ್​ಗೆ ವಾಪಸ್ಸಾದರು. ಇದರ ಹಿಂದೆಯೇ ದಿನೇಶ್​ ಕಾರ್ತಿಕ್​ ಕೂಡ ಬಂದಷ್ಟೇ ವೇಗದಲ್ಲಿ ಸೊನ್ನೆ ಸುತ್ತಿ ಲಕ್ಮಲ್​ ಬೌಲಿಂಗ್​ನಲ್ಲಿ ಎಲ್​ಬಿಗೆ ಆಹುತಿಯಾದರು.

ನಂತರ ಬಂದ ಕನ್ನಡಿಗ ಮನೀಷ್​ ಪಾಂಡೇ ಸಿಕ್ಕ ಅವಕಾಶ ಉಪಯೋಗಪಡಿಸಿಕೊಳ್ಳದೆ ಕೇವಲ 2 ರನ್​​ ಗಳಿಸಿ ಲಕ್ಮಲ್​ಗೆ ಔಟಾದರೆ, 9 ರನ್​ ಗಳಿಸಿದ್ದ ಶ್ರೇಯಸ್​​ ಅಯ್ಯರ್​ ನುವಾನ್​ ಪ್ರದೀಪ್​ ಎಸೆತಕ್ಕೆ ಬೌಲ್ಡಾಗಿ ನಿರ್ಗಮಿಸಿದರು.

ಹಾರ್ದಿಕ್​ ಪಾಂಡ್ಯ ಈ ಬಾರಿ ಸ್ಫೋಟಿಸದೇ ಕೇವಲ 10 ರನ್​ ಗಳಿಸಿ ನುವಾನ್​ ಪ್ರದೀಪ್​ಗೆ ಎಸೆತದಲ್ಲಿ ಔಟಾದರು. ಇದರ ಹಿಂದೆಯೇ ಭುವನೇಶ್ವರ್​ ಕುಮಾರ್ ಸೊನ್ನೆ ಸುತ್ತಿ ಲಕ್ಮಲ್​ ಓವರ್​ನಲ್ಲಿ ಪೆವಲಿಯನ್​ಗೆ ಮರಳಿದರು.

ಈ ಮಧ್ಯೆ ಧೋನಿ ಮತ್ತು ಕುಲದೀಪ್​ ಯಾದವ್​ ಕ್ಷಣ ಹೊತ್ತು ತಾಳ್ಮೆಯಾಟವಾಡಿ ತಂಡಕ್ಕೆ ಕೊಂಚ ಭರವಸೆ ಮೂಡಿಸಿದ್ದರು. ಆದರೆ, ಕುಲದೀಪ್​ 19 ರನ್​ ಗಳಿಸಿದ್ದ ವೇಳೆ ಧನಂಜಯಗೆ ಔಟಾಗುವ ಮೂಲಕ ನಿರಾಶೆಗೊಳಿಸಿದರು. ಇದರ ಬೆನ್ನಲ್ಲೆ ಜಸ್ಪ್ರಿತ್​ ಬೂಮ್ರಾ ಯಾವುದೇ ರನ್​ ಖಾತೆ ತೆರೆಯದೇ ಸಚಿತ್​ ಪಥಿರಾಣಾ ಬೌಲಿಂಗ್​ನಲ್ಲಿ ಬೌಲ್ಡಾದರು.

ಇತ್ತ ಹೆಚ್ಚು ಸಮಯದವರೆಗೆ ಕ್ರೀಸ್​ನಲ್ಲಿ ಉಳಿದಿದ್ದ ಧೋನಿಗೆ ತಂಡದ ಯಾರೋಬ್ಬರು ಸಾಥ್​ ನೀಡಲಿಲ್ಲ. ಉತ್ತಮ ಆಟವಾಡಿದ ಧೋನಿ 65 ರನ್​ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿ ತಿಸಾರ ಪೆರೇರ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿದರು. ಯಜುವೇಂದ್ರ ಚಹಾಲ್​ ಖಾತೆ ತೆರೆಯದೆ ಅಜೇಯರಾಗಿ ಉಳಿದರು.

ಶ್ರೀಲಂಕಾ ಪರ ಮಿಂಚಿನ ಬೌಲಿಂಗ್​ ದಾಳಿ ನಡೆಸಿದ ಸುರಂಗ ಲಕ್ಮಲ್​ ಪ್ರಮುಖ 4 ವಿಕೆಟ್​ ಕಬಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ನುವಾನ್​ ಪ್ರದೀಪ್​ 2 ವಿಕೆಟ್​ ಕಬಳಿಸಿದರೆ, ಏಂಜೆಲೋ ಮ್ಯಾಥ್ಯೂಸ್, ಅಕಿಲಾ ಧನಂಜಯ, ತಿಸಾರ ಪೆರೇರ ಮತ್ತು ಸಚಿತ್​ ಪಥಿರಾಣಾ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *