ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಲಂಕಾ ಕ್ರಿಕೆಟಿಗ!

ಕೊಲೊಂಬೊ(ಶ್ರೀಲಂಕಾ): ಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರು ಉಳಿದುಕೊಂಡಿದ್ದ ಹೋಟೆಲ್​ನಲ್ಲಿ ನಡೆದಿದ್ದ ನಾರ್ವೇಯಿನ್​ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಣತಿಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಗುಣತಿಲಕ ಅವರು ವೈಯಕ್ತಿಕವಾಗಿ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ಆದರೆ, ಪ್ರಕರಣ ಸಂಬಂಧ ಆವರ ಸ್ನೇಹಿತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಳೆದ ಶನಿವಾರ ರಾತ್ರಿ ಅತ್ಯಾಚಾರ ನಡೆದಿರುವ ಬಗ್ಗೆ ನಾರ್ವೇಯಿನ್​ ಮಹಿಳೆ ದೂರು ನೀಡಿದ್ದು, ಘಟನೆ ನಡೆದ್ದುದ್ದರ ಬಗ್ಗೆ ಗುಣತಿಲಕ ಅವರಿಗೆ ಯಾವುದೇ ಅರಿವಿಲ್ಲ. ಆದರೆ, ಆತನ ಸ್ನೇಹಿತ ಸಂದೀಪ್​ ಜೂಡ್​ ಸೆಲ್ಲಿಯ(26) ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ರಾತ್ರಿ ಗುಣತಿಲಕ ಅವರು ಶ್ರೀಲಂಕಾ ಕ್ರಿಕೆಟ್​ ತಂಡದ ನಿಯಮವನ್ನು ಉಲ್ಲಂಘಿಸಿ ಹೋಟೆಲ್​ನಲ್ಲಿ ಎರಡು ಕೊಠಡಿಗಳನ್ನು ಬುಕ್​ ಮಾಡಿ ಹೆಚ್ಚು ಸಮಯ ಹೊರಗುಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿರುವ ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್​ನಿಂದ​ ಅಮಾನತ್ತು ಮಾಡಲಾಗಿದ್ದು, ಶನಿವಾರದಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಏಕದಿನ ಸರಣಿಯಿಂದ ಕೈಬಿಡಲಾಗಿದೆ.

ಪೊಲೀಸ್​ ಕಸ್ಟಡಿಯಲ್ಲಿರುವ ಗುಣತಿಲಕ ಅವರ ಸ್ನೇಹಿತನ್ನು ನಾಳೆ ನಡೆಯುವ ನ್ಯಾಯಾಲಯ ವಿಚಾರಣೆಗೆ ಒಳಪಡಿಸಲಾಗುತ್ತಿದೆ. (ಏಜೆನ್ಸೀಸ್​)