ಲಂಕಾದಲ್ಲಿ ಇಬ್ಬರು ಮೌಲ್ವಿ ಸೆರೆ

ಕಟ್ಟಂಕುಡಿ (ಶ್ರೀಲಂಕಾ): ಈಸ್ಟರ್ ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯ ಆತ್ಮಾಹುತಿ ಬಾಂಬರ್ ಆಗಿದ್ದ ಜಹ್ರಾನ್ ಹಾಶಿಂನೊಂದಿಗೆ ಸಂಪರ್ಕದಲ್ಲಿದ್ದ ಸೌದಿ ವ್ಯಕ್ತಿ ಹಾಗೂ ಕಟು ಧಾರ್ವಿುಕ ಮೂಲಭೂತವಾದ ಪ್ರಚಾರಕ ಮೌಲ್ವಿಯನ್ನು ಭದ್ರತಾ ಪಡೆಗಳು ಶನಿವಾರ ಬಂಧಿಸಿವೆ.

ಸೌದಿಯಲ್ಲಿ ಉನ್ನತ ಶಿಕ್ಷಣ ಪಡೆದಿರುವ ಮೊಹಮ್ಮದ್ ಅಲಿಯಾರ್(60) ಬಂಧಿತನಾಗಿದ್ದು, ಜಹ್ರಾನ್​ನ ಹುಟ್ಟೂರು ಕಟ್ಟಂಕುಡಿಯಲ್ಲಿ ಸೆಂಟರ್ ಫಾರ್ ಇಸ್ಲಾಮಿಕ್ ಗೈಡೆನ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದ. ಇದರ ಮೂಲಕ ಮಸೀದಿ, ಧಾರ್ವಿುಕ ಶಾಲೆ ಮತ್ತು ಗ್ರಂಥಾಲಯವನ್ನು ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಜಹ್ರಾನ್​ಗೆ ಅಲಿಯಾರ್ ಆತ್ಮೀಯನಾಗಿದ್ದು, ಹಣಕಾಸು ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ. ಬಾಂಬ್ ದಾಳಿಯ ಆತ್ಮಾಹುತಿ ಬಾಂಬರ್​ಗಳ ಒಂದು ತಂಡಕ್ಕೆ ತರಬೇತಿ ನೀಡುವ ಕಾರ್ಯವನ್ನು ಮಾಡುತ್ತಿದ್ದ ಎನ್ನಲಾಗಿದೆ.

ಜಹ್ರಾನ್ ಮೇಲೆ ಸಲಫಿ ಪ್ರಭಾವ: ಈತನ ವಿಚಾರಣೆ ಸಮಯದಲ್ಲಿ ಇನ್ನಷ್ಟು ಆತಂಕಕಾರಿ ವಿಚಾರಗಳು ಬೆಳಕಿಗೆ ಬಂದಿದ್ದು, ಶ್ರೀಲಂಕಾದಲ್ಲಿ ಸಲಫಿ- ವಹಾಬಿ ಇಸ್ಲಾಂನ ಪ್ರಭಾವ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಸಲಫಿ-ವಹಾಬಿ ಇಸ್ಲಾಂನಿಂದ ಜಹ್ರಾನ್ ಪ್ರಭಾವಿತನಾಗಿದ್ದ. ಜಹ್ರಾನ್​ನ ಪರಿಚಿತರು ನೀಡುವ ಮಾಹಿತಿಯಂತೆ ಆತ ಅಲಿಯಾರ್​ನ ಸೆಂಟರ್ ಫಾರ್ ಇಸ್ಲಾಮಿಕ್ ಗೈಡೆನ್ಸ್ ಸೆಂಟರ್​ನಲ್ಲಿನ ಗ್ರಂಥಾಲಯಕ್ಕೆ ಭೇಟಿ ನೀಡಿದ ಮೇಲೆಯೇ ಇಷ್ಟು ಪ್ರಮಾಣದಲ್ಲಿ ಬದಲಾಗಿದ್ದ. ಅಲ್ಲಿದ್ದ ಸೌದಿಯ ಪುಸ್ತಕಗಳು ಆತನ ಮೇಲೆ ಪ್ರಭಾವ ಬೀರಿದ್ದವು. ಹೀಗಾಗಿ ಆತ ಎಲ್ಲ ಸಮಸ್ಯೆಗಳಿಗೂ ದೇವರಲ್ಲಿ ಪರಿಹಾರ ಕೇಳಿಕೊಳ್ಳುವುದನ್ನು ವಿರೋಧಿಸುತ್ತಿದ್ದ. ಇದು ಸಲಫಿ ಇಸ್ಲಾಂನ ಧೋರಣೆಯಾಗಿದೆ. ಹೀಗಾಗಿ ಜಹ್ರಾನ್​ನಂತೆಯೇ ಇನ್ನಷ್ಟು ಯುವಕರು ಸಲಫಿ- ವಹಾಬಿ ಇಸ್ಲಾಂನಿಂದ ಪ್ರಭಾವಿತರಾಗಿರಬಹುದೆಂದು ಶಂಕಿಸಲಾಗಿದೆ.

ಮೊದಲ ಸಾಮೂಹಿಕ ಪ್ರಾರ್ಥನೆ

ಸರಣಿ ಬಾಂಬ್ ದಾಳಿ ನಡೆದ ಬಳಿಕ ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್​ಗಳಲ್ಲಿ ಭಾನುವಾರ ಮೊದಲ ಬಾರಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಗಿತ್ತು. ಸೇನಾ ಪಡೆ ಮತ್ತು ಪೊಲೀಸರ ಭದ್ರತೆಯಲ್ಲಿ ಪ್ರಾರ್ಥನೆ ನಡೆಸಲಾಗಿದ್ದು, ಚರ್ಚ್ ಆವರಣ ಪ್ರವೇಶಿಸುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿತ್ತು. ಮೇ 5ರಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ, ಇನ್ನಷ್ಟು ದಾಳಿ ನಡೆಯಲಿದೆ ಎಂಬ ಎಚ್ಚರಿಕೆ ಹಿನ್ನೆಲೆ ಮುಂದೂಡಲಾಗಿತ್ತು.

ಮೆಕ್ಕಾ ಪ್ರವಾಸ ಆಯೋಜಕ

ಧಾರ್ವಿುಕ ಮೂಲಭೂತವಾದ ಪ್ರಚಾರ ಮಾಡುತ್ತಿದ್ದ ಆರೋಪದಲ್ಲಿ ಮೌಲ್ವಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೆಕ್ಕಾದಿಂದ ಆಗಮಿಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ವಾವುನಿಯಾ ನಿವಾಸಿ 47 ವರ್ಷದ ಮೌಲ್ವಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಈತ ಮೆಕ್ಕಾಗೆ ಪ್ರವಾಸಗಳನ್ನು ಆಯೋಜಿಸುತ್ತಿದ್ದ ಎನ್ನಲಾಗಿದ್ದು, ಮೇ 14ರವರೆಗೆ ವಶಕ್ಕೆ ಪಡೆಯಲಾಗಿದೆ.

ಚರ್ಚ್​ಗಳಲ್ಲಿ ಎಚ್ಚರಿಕೆ

ಬೆಂಗಳೂರು: ಶ್ರೀಲಂಕಾ ಚರ್ಚ್​ನಲ್ಲಿ ಉಗ್ರರ ಆತ್ಮಹತ್ಯಾ ದಾಳಿ ಬಳಿಕ ರಾಜ್ಯದ ಚರ್ಚ್​ಗಳು ಎಚ್ಚೆತ್ತುಕೊಳ್ಳುವ ಹಾದಿಯಲ್ಲಿವೆ. ಆರ್ಚ್​ಬಿಷಪ್ ಪೀಟರ್ ಮಚಾಡೊ ಚರ್ಚ್​ಗಳಿಗೆ ಸುತ್ತೋಲೆ ಕಳಿಸಿದ್ದು, ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

ಬೆಂಗಳೂರು ಮತ್ತು ನಗರದ ಸುತ್ತಮುತ್ತ, ನೆರೆ ರಾಜ್ಯಗಳಲ್ಲಿ ಇಂಥ ಘಟನೆ ನಡೆಯಬಹುದೆಂದು ಪೊಲೀಸರು ಮತ್ತು ಗುಪ್ತದಳಕ್ಕೆ ಮಾಹಿತಿ ಬಂದಿದೆ. ಈ ಕಾರಣಕ್ಕೆ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಚರ್ಚ್​ಗಳ ಮುಖ್ಯಸ್ಥರಿಗೆ ಸಲಹೆ ನೀಡಿದ್ದಾರೆ.

ಭದ್ರತೆ ಬಗ್ಗೆ ಅರಿವು, ಅಗತ್ಯ ಕ್ರಮಕ್ಕಾಗಿ ಚರ್ಚೆ, ಸುತ್ತುಮುತ್ತಲ ವಾತಾವರಣದಲ್ಲಿ ಎಲ್ಲವೂ ಸಹಜವಾಗಿದೆಯೇ ಎಂಬುದರ ಬಗ್ಗೆ ಜಾಗೃತರಾಗಿ ಇರುವುದು, ಸಿಸಿ ಕ್ಯಾಮರಾ ಅಳವಡಿಕೆ, ಭದ್ರತಾ ಸಿಬ್ಬಂದಿಯ ನಿಯೋಜನೆ, ಅಪರಿಚಿತ ವಸ್ತು, ವ್ಯಕ್ತಿಗಳ ಬಗ್ಗೆ ನಿಗಾ ವಹಿಸುವುದು ಸೇರಿ 20 ಅಂಶಗಳ ಎಚ್ಚರಿಕೆ ಮಾರ್ಗಸೂಚಿಯನ್ನು ಎಲ್ಲ ಚರ್ಚ್​ಗಳ ಮುಖ್ಯಸ್ಥರಿಗೆ ಕಳುಹಿಸಿಕೊಡಲಾಗಿದ್ದು, ತಡ ಮಾಡದೇ ಅನುಷ್ಠಾನ ಮಾಡುವಂತೆಯೂ ಸೂಚಿಸಿದ್ದಾರೆ.

ಮಸೀದಿ ತೆರಿಗೆಗೆ ಜರ್ಮನಿ ಚಿಂತನೆ

ಬರ್ಲಿನ್: ಮಸೀದಿಗಳು ವಿದೇಶಿ ನೆರವು ಪಡೆಯುವುದನ್ನು ತಪ್ಪಿಸಲು ‘ಮಸೀದಿ ತೆರಿಗೆ’ ವಿಧಿಸಲು ಜರ್ಮನಿ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆ ನಡೆಯುತ್ತಿದೆ. ಮಸೀದಿಗಳ ಆರ್ಥಿಕ ಸ್ವಾವಲಂಬನೆ ಹಾಗೂ ವಿದೇಶಿ ಮೂಲಭೂತವಾದಿ ಶಕ್ತಿಗಳ ನೆರವು ಪಡೆಯುವುದನ್ನು ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಜರ್ಮನಿಯ 16 ರಾಜ್ಯಗಳು ಕೂಡ ತಾತ್ವಿಕವಾಗಿ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡಿವೆ ಎಂದು ತಿಳಿದು ಬಂದಿದೆ.