ನರಗುಂದ: ಪಟ್ಟಣದ ಎಸ್ಎಂವಿ ಸಿಬಿಎಸ್ಇ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. 1ರಿಂದ 5ನೇ ತರಗತಿ ವಿದ್ಯಾರ್ಥಿಗಳು ರಾಧೆ-ಕೃಷ್ಣ ಹಾಗೂ ಅವರ ತಾಯಂದಿರು ಯಶೋದೆಯ ವೇಷಭೂಷಣ ಧರಿಸಿ ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ಬೆಣ್ಣೆ ಕದಿಯುವ ಕೃಷ್ಣನ ಕಥಾಹಂದರ ಅನುಕರಿಸಿ ಸ್ಪರ್ಧಾ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶ ಪಾಟೀಲ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು. ಕೃಷ್ಣ ಜನ್ಮಾಷ್ಟಮಿಯನ್ನು ಅನೇಕ ವರ್ಷಗಳಿಂದ ಭಾರತದಲ್ಲಿ ಆಚರಿಸಲಾಗುತ್ತಿದೆ. ಹೀಗಾಗಿ, ಈ ಆಚರಣೆ ಎಲ್ಲ ಕಡೆಗಳಲ್ಲಿಯೂ ಬಹಳ ಪ್ರಚಲಿತದಲ್ಲಿದೆ ಎಂದರು.
ಮುಖ್ಯಾಧ್ಯಾಪಕಿ ಜ್ಯೋತಿ ದಾಸೋಗ ಮಾತನಾಡಿದರು. 6 ರಿಂದ 10ನೇ ತರಗತಿ ಮಕ್ಕಳಿಗೆ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಜರುಗಿತು. ಪಿರಾಮಿಡ್ ರಚನೆ ಮಾಡುವ ಮೂಲಕ ಮಕ್ಕಳು ಮೊಸರು ಗಡಿಗೆ ಒಡೆದು ಕಾರ್ಯಕ್ರಮದಲ್ಲಿ ರಂಜಿಸಿದರು. ಸುಪ್ರೀತಾ, ಶ್ವೇತಾ ಹಿರೇಮಠ ಹಾಗೂ ಶೀಶೈಲ ಎನ್.ಕಾರ್ಯಕ್ರಮ ನಿರ್ವಹಿಸಿದರು.