More

    ಶ್ರೀಆದಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ

    ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ರಥಸಪ್ತಮಿಯ ಪ್ರಯುಕ್ತ ಕ್ಷೇತ್ರಪಾಲಕ ಶ್ರೀಆದಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ವರ್ಣರಂಜಿತವಾಗಿ ಭವ್ಯರಥ ಅಲಂಕೃತಗೊಂಡಿತ್ತು. ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನಾಥಸ್ವಾಮಿಯ ಪಂಚಲೋಹದ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಹೆಗಲಮೇಲೆ ಹೊತ್ತು ತಂದು ಪ್ರತಿಷ್ಠಾಪಿಸಲಾಯಿತು. ವಿಷ್ಣು ಸಹಸ್ರನಾಮ ಪಠಿಸಲಾಯಿತು. ಬಳಿಕ ಆಗಸದಲ್ಲಿ 3 ಸುತ್ತು ಗರುಡನ ಪ್ರದಕ್ಷಿಣೆಯಾಗುತ್ತಿದಂತೆ ಮಧ್ಯಾಹ್ನ 3.10ರ ಅಭಿಜಿನ್ ಲಗ್ನದಲ್ಲಿ ದೇವಾಲಯದ ಇಒ ಉಮಾ ಅವರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ವಿಜಯಸಾರಥಿ, ಪ್ರಸನ್ನ, ಖ್ಯಾತ ಜ್ಯೋತಿಷಿ ವೇದಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಪಟ್ಟಣದ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ, ರೂಪಾ ಎಂ.ಡಿ,ಮಹದೇವಪ್ಪ, ವೈ.ಎಚ್.ದೇವರಾಜ್ ಅವರೊಂದಿಗೆ ಚಾಲನೆ ನೀಡಲಾಯಿತು.

    ರಥಸಪ್ತಮಿ ಮುಂಜಾನೆ ಶ್ರೀಆದಿರಂಗನಾಥ ಸ್ವಾಮಿಗೆ ಪ್ರಧಾನ ಅರ್ಚಕರಾದ ವಿಜಯಸಾರಥಿ ಹಾಗೂ ಪ್ರಸನ್ನ ನೇತೃತ್ವದಲ್ಲಿ ಸುಪ್ರಭಾತ ಸೇವೆ, ನಿತ್ಯ ಸೇವೆ, ತಿರುಪಾವೈ, ಜತೆಗೆ ಸುಗಂಧ ದ್ರವ್ಯಗಳ ಹೋಮ, ಬಲಿಪ್ರಧಾನ ಅರ್ಪಣೆ ಬಳಿಕ ಶಾತಮೊರೈ ಪೂಜೆ ಸಲ್ಲಿಸಲಾಯಿತು. ಬಳಿಕ ಸೂರ್ಯ ಮಂಡಲ ಹಾಗೂ ಗಜಲಕ್ಷ್ಮೀ ರಥಗಳಿಗೆ ವಿಶೇಷ ಪೂಜೆ ಅರ್ಪಿಸಿ, ಶ್ರೀರಂಗಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಅವಳಿ ರಥಗಳಿಗೆ ಪುರಜನರು ದಾರಿಯುದ್ದಕ್ಕೂ ಕರ್ಪೂರದ ಜ್ಯೋತಿ ಬೆಳಗಿ ವಿಶೇಷ ಪೂಜೆ ನೆರವೇರಿಸಿದರು. ಮಧ್ಯಾಹ್ನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ರಥೋತ್ಸವ ಪೂರ್ವ ಹೋಮ-ಹವನ, ರಥ ಪ್ರತಿಷ್ಠೆ, ಕಲಶ ಪ್ರತಿಷ್ಟೆ, ಯಾತ್ರ ದಾನ, ವಿವಿಧ ಧಾನ್ಯಗಳ ಪೂಜೆ ಬಳಿಕ ಮಂಟಪೋತ್ಸವ ಮೂಲಕ ಯಾತ್ರದಾನ ನಡೆಸಿ ಬ್ರಹ್ಮರಥಕ್ಕೆ ದೇವರನ್ನು ಪ್ರತಿಷ್ಠಾಪಿಸಲಾಯಿತು.

    ಬ್ರಹ್ಮರಥೋತ್ಸವದ ವೇಳೆ ಶ್ರೀರಂಗ, ಆದಿರಂಗ, ಶ್ರೀಮನ್ ನಾರಾಯಣ, ಗೋವಿಂದ ಎಂಬ ಜಯಘೋಷ ಮೊಳಗಿತ್ತು. ಸಹಸ್ರಾರು ಭಕ್ತರು ತೇರನ್ನು ದೇಗುಲದ ಸುತ್ತಲು ಎಳೆದು ಭಕ್ತಿ ಮೆರೆದರು. ನವ ವಿವಾಹಿತರು, ಅಪಾರ ಭಕ್ತರು ತೇರಿಗೆ ಹಣ್ಣು-ಧವನ ಎಸೆದು ಭಕ್ತಿ ಸಮರ್ಪಿಸಿದರು. ಸುಡು ಬಿಸಿನಲ್ಲೇ ಜಮಾಯಿಸಿದ್ದ ಭಕ್ತರಿಗೆ ಅಲ್ಲಲ್ಲಿ ಕಲ್ಲಂಗಡಿ, ಕರ್ಬೂಜ, ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ರಥೋತ್ಸವದ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ಪೊಲೀಸರು ಭಿಗಿ ಭದ್ರತೆ ಕೈಗೊಂಡಿದ್ದರು.

    ಶ್ರೀರಂಗಪಟ್ಟಣ, ಸುತ್ತಮುತ್ತಲ ಹಳ್ಳಿಗಳು ಹಾಗೂ ರಾಜ್ಯದ ವಿವಿಧೆಡೆ ಸೇರಿದಂತೆ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳದಿಂದ ಶ್ರೀರಂಗನ ಭಕ್ತರು ಪಟ್ಟಣಕ್ಕೆ ಮುಂಜಾನೆಯೇ ಆಗಮಿಸಿ, ಹರಕೆ ಮುಡಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts