ಅಪರೇಷನ್‌ ಕಮಲ: ಮುಖ್ಯಮಂತ್ರಿ ಮಿಮಿಕ್ರಿ ಟೇಪ್‌ ಬಿಡುಗಡೆ ಮಾಡಿದ್ದಾರೆ ಎಂದ ಶ್ರೀರಾಮುಲು

ಎಚ್​ಡಿಕೆ ಆಡಿಯೋ ಬಾಂಬ್ ಅನ್ನು ಸಾರಾಸಗಟು ತಿರಸ್ಕರಿಸಿದ ಬಿಜೆಪಿ ನಾಯಕರು

ಬೆಂಗಳೂರು: ಬಿಜೆಪಿಯು ಆಪರೇಷನ್‌ ಕಮಲ ಮಾಡುತ್ತಿದ್ದ ಹಣದ ಆಮಿಷವನ್ನು ನಮ್ಮ ಶಾಸಕರಿಗೆ ಒಡ್ಡುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಮತ್ತು ಶರಣಗೌಡ ಅವರ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಟೇಪ್‌ ಬಿಡುಗಡೆ ಮಾಡಿದ್ದು, ಬಿಜೆಪಿ ನಾಯಕರು ಇದನ್ನು ಅಲ್ಲಗಳೆದಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಒಂದು ಗೌರವ ಘನತೆ ಇದೆ. ಸಿಎಂ ಒಂದು ಮಿಮಿಕ್ರಿ ಟೇಪ್ ಬಿಡುಗಡೆ ಮಾಡಿದ್ದಾರೆ. ಸಿಎಂ ಕಾಲ್‌ಟ್ಯಾಪ್ ಮಾಡಿದ್ದಾರೆ. ನಾನೇ ಟ್ಯಾಪ್ ಮಾಡುವುದಕ್ಕೆ ಹೇಳಿದ್ದೇನೆ ಅಂದಿದ್ದಾರೆ. ಸಿಎಲ್‌ಪಿ ಮೀಟಿಂಗ್‌ಗೆ 20ಕ್ಕೂ ಹೆಚ್ಚು ಜನ ಗೈರಾಗಿದ್ದಾರೆ. ಬಿಜೆಪಿ ಆಪರೇಷನ್ ಮಾಡಿಲ್ಲ. ಯಾರನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದರು.

ಬಜೆಟ್ ಮಂಡನೆ ಮಾಡುವುದಕ್ಕೆ ಬಿಡುವುದಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಿಮಿಕ್ರಿ ಟೇಪ್ ಬಿಡುಗಡೆ ಮಾಡಿದ್ದಾರೆ. ಕುರ್ಚಿಗಾಗಿ ಭಯಬಿದ್ದು ಅವರೇ ಪರಿಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಪತ್ರಕರ್ತರ ಮೊಬೈಲ್, ಶಾಸಕರ ಮೊಬೈಲ್ ಟ್ಯಾಪ್ ಮಾಡುವುದು ಎಷ್ಟು ಸರಿ? ಮುಖ್ಯಮಂತ್ರಿಗಳು ಮಾಡಿರುವ ಅಪರಾಧ ಇದು ಎಂದು ಕಿಡಿಕಾರಿದರು.

ಈ ಕುರಿತಂತೆ ಬಿಜೆಪಿ ನಾಯಕ ಆರ್‌ ಅಶೋಕ್‌ ಮಾತನಾಡಿ, ಕುಮಾರಸ್ವಾಮಿ ಸಿನಿಮಾದಿಂದ ಬಂದವರು. ಇದನ್ನು ಎಡಿಟ್ ಮಾಡೋ ಅಭ್ಯಾಸ ಇದೆ. ನಮ್ಮ ಶಾಸಕರ ಜತೆ ಗೋವಾದಲ್ಲಿ ಒಂದು ವಾರ ವಾಸವಿದ್ದರು. ಮಿಮಿಕ್ರಿ ಆರ್ಟಿಸ್ಟ್ ಬಳಕೆ ಮಾಡಿ ಟೇಪ್ ಮಾಡಿಸಿದ್ದಾರೆ. ಪೋನ್ ಟ್ಯಾಪ್ ಮಾಡುವುದು ಒಳ್ಳೆಯದಲ್ಲ. ಸುಳ್ಳು ಸುದ್ದಿ ಬಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಫೋನ್ ಟ್ಯಾಪ್ ಮಾಡಿರುವುದು ಶೇ. 100 ರಷ್ಟು ನಿಜ. ಈ ರೀತಿ ಹೇಳಿಕೆಗಳನ್ನು ಕೊಡದೆ ಸರ್ಕಾರ ನ್ಯಾಯವಾಗಿ ನಡೆಸುವುದನ್ನು ಕಲಿಯಲಿ. ಸರ್ಕಾರ ಬೀಳುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. (ದಿಗ್ವಿಜಯ ನ್ಯೂಸ್)