ಹುಮನಾಬಾದ್: ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಥೇರ್ ಮೈದಾನದಲ್ಲಿರುವ ಅಗ್ನಿ ಕುಂಡಕ್ಕೆ ಗುರುವಾರ ಮಹಿಳೆಯರು ನೀರೆರೆದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.
ಶುಕ್ರವಾರ ನಸುಕಿನ ಜಾವದಿಂದ ಅಗ್ನಿ ತುಳಿಯುವ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಪ್ರತಿ ಮನೆ ಮಹಿಳೆಯರು ತುಂಬಿದ ಕೊಡದಲ್ಲಿ ನೀರು ತರುವ ಮೂಲಕ ಅಗ್ನಿಕುಂಡ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ನೈವೇದ್ಯ ಅರ್ಪಿಸಿ ದರ್ಶನ ಪಡೆಯಲು ಸರದಿ ನಿಂತಿರುವ ದೃಶ್ಯ ಕಂಡಿತು.
ಮಹಿಳೆಯರು ನಾಗರ ಪಂಚಮಿ ಹಬ್ಬಕ್ಕೆ ತವರು ಮನೆಗೆ ಆಗಮಿಸುವಂತೆ ಮದುವೆಯಾಗಿ ಗಂಡನ ಮನೆಗೆ ಹೋದವರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ. ರಾಜ್ಯ ಸೇರಿ ಮಹಾರಾಷ್ಷ್ಟ್ರ, ತೆಲಂಗಾಣಗಳಿಂದ ಅಸಂಖ್ಯ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಗುರುವಾರ ಬೆಳಗ್ಗಿನ ಜಾವದಿಂದ ರಾತ್ರಿವರೆಗೆ ಪೂಜೆ ಸಲ್ಲಿಸಲು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.
ಭಕ್ತರಿಗೆ ದಾಸೋಹ ವ್ಯವಸ್ಥೆ: ಭಕ್ತರಿಗಾಗಿ ಪಟ್ಟಣದ ಹಲವೆಡೆ ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳಿಂದ ಏರ್ಪಡಿಸುವ ದಾಸೋಹ ಈ ಜಾತ್ರೆಯ ವಿಶೇಷತೆಯಲ್ಲಿ ಒಂದು. ದೇಸಿ ಅಡುಗೆಗಳಾದ ಹುಗ್ಗಿ, ಅಂಬಲಿ, ಭಜ್ಜಿ, ಮಿರ್ಚಿ ಭಜ್ಜಿ, ಜೋಳ ಹಾಗೂ ಸಜ್ಜಿರೊಟ್ಟಿ, ಚಪಾತಿ, ಪೂರಿ, ಬಾನದಹಿಟ್ಟು, ಉದ್ದಿನ ಹಪ್ಪಳ ಇತರ ಖಾದ್ಯಗಳ ತಯಾರಿ ಗುರುವಾರ ಬೆಳಗ್ಗೆ ಆರಂಭಗೊಂಡಿದೆ. ಇದಕ್ಕಾಗಿ ಹಲವಾರು ದಾನಿಗಳು ಸಹಕಾರ ನೀಡುತ್ತಿದ್ದಾರೆ. ಇದರೊಂದಿಗೆ ಪಟ್ಟಣದ ಹಲವಾರು ಕಡೆ ದಾಸೋಹ ವ್ಯವಸ್ಥೆ ಸಿದ್ಧತೆಯಲ್ಲಿ ದಾಸೋಹಿಗಳು ತೊಡಗಿದ್ದಾರೆ. ಒಟ್ಟಿನಲ್ಲಿ ಶುಕ್ರವಾರ ಪಟ್ಟಣದ ಹಲವೆಡೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್: ಜಾತ್ರೋತ್ಸವ ಸುಸೂತ್ರ ನಡೆಯುವಂತೆ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲೆಡೆ ನಿಗಾ ಇಡಲು ಎರಡು ಡ್ರೋನ್ ಕ್ಯಾಮರಾ ಹಾಗೂ ಆಯಾ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ ತಿಳಿಸಿದ್ದಾರೆ. ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪಹರೆ ನಡೆಸುತ್ತಿದ್ದಾರೆ. ಕೆಲವೆಡೆ ವಿಶೇಷ ಬಾಂಬ್ ಪತ್ತೆ ಯಂತ್ರವನ್ನೂ ಅಳವಡಿಸಲಾಗಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ ೮ ಸಿಪಿಐ, ೩೮ ಪಿಎಸ್‌ಐ, ೮೦ ಎಎಸ್‌ಐ, ಮುಖ್ಯ ಪೇದೆ, ಪೇದೆ, ಮಹಿಳಾ ಮುಖ್ಯಪೇದೆ, ಪೇದೆ, ಗೃಹರಕ್ಷಕರು ಸೇರಿ ೧೨೫೧ ಸಿಬ್ಬಂದಿ ಹಾಗೂ ೩ ಕೆಎಸ್‌ಆರ್‌ಪಿ, ೫ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ದೇವಸ್ಥಾನ, ಅಗ್ನಿಕುಂಡ ಹಾಗೂ ದೇವಸ್ಥಾನ ಹತ್ತಿರ ೪ ತಾತ್ಕಾಲಿಕ ಹೊರ ಠಾಣೆ ತೆರೆಯಲಾಗಿದೆ. ದೇವಸ್ಥಾನದ ದ್ವಾರ ಬಾಗಿಲಿನಲ್ಲಿ ಬಾಂಬ್ ಪತ್ತೆ ಯಂತ್ರ ಆಳವಡಿಸಲಾಗಿದೆ. ಬೀದರ್‌ನಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಅಲ್ಲದೆ ಮಹಾರಾಷ್ಟ್ರದ ಉಸ್ಮಾನಾಬಾದ್, ಸೊಲ್ಲಾಪುರ, ತೆಲಂಗಾಣದ ಮೇದಕ್ ಮತ್ತು ಕಲಬುರಗಿ ಸೇರಿ ನಾನಾ ಕಡೆಯಿಂದ ಅಪರಾಧ ಪತ್ತೆದಳ ಸಿಬ್ಬಂದಿ ಸಹ ಆಗಮಿಸಿದ್ದಾರೆ. ಪಟ್ಟಣದ ವಡ್ಡರ ಗ್ರೌಂಡ್, ತಹಸಿಲ್ ಆವರಣ, ರಾಮ್ ಆ್ಯಂಡ್ ರಾಜ್ ಕಾಲೇಜ್ ಆವರಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಶಾಂತಿಯುತ ಜಾತ್ರೋತ್ಸವ ನಡೆಯಲು ಪೊಲೀಸ್ ಇಲಾಖೆಗೆ ಜನ ಸಹಕರಿಸಬೇಕೆಂದು ಕೋರಿದ್ದಾರೆ.