ಕೊಡಗಿಗೆ ಪ್ರಚಾರಕ್ಕೆ ಬಾರದ ಸಾ.ರಾ.ಮಹೇಶ್

ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕೊಡಗಿಗೆ ಚುನಾವಣಾ ಪ್ರಚಾರಕ್ಕೆ ಬಾರದಿರುವುದು ಜಿಲ್ಲಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾ.ರಾ.ಮಹೇಶ್ ಪ್ರಚಾರಕ್ಕೆ ಬರುವ ನಿರೀಕ್ಷೆಯಿತ್ತು. ಇದೀಗ ನಿರೀಕ್ಷೆ ಹುಸಿಯಾಗಿದೆ.

ಮಂಡ್ಯದಲ್ಲಿ ನೀವು ಕೈ ಕೊಟ್ರೆ, ನಾವು ಮೈಸೂರು-ಕೊಡಗು ಕ್ಷೇತ್ರದಲ್ಲಿ ಕೈ ಕೊಡಬೇಕಾಗುತ್ತದೆ. ನೀವು ಮಂಡ್ಯದಲ್ಲಿ ಒಮ್ಮೆ ಅಪ್ಪಿಕೊಂಡರೆ, ನಾವು ಐದು ಬಾರಿ ಅಪ್ಪಿಕೊಳ್ಳುತ್ತೇವೆ ಎಂದು ಸಾ.ರಾ.ಮಹೇಶ್ ಮೈಸೂರಿನಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು. ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ಕೈ ಕೊಟ್ಟಿರುವುದರಿಂದ ಕೊಡಗಿನಲ್ಲೂ ಜೆಡಿಎಸ್ ಕೈ ಕೊಟ್ಟಿದೆ ಎಂಬ ಮಾತು ಈಗ ಚಾಲ್ತಿಯಲ್ಲಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಬಂಡಾಯ ತೀವ್ರ ಸ್ವರೂಪ ಪಡೆದುಕೊಂಡಿತ್ತು ಮತ್ತು ಅತೃಪ್ತರನ್ನು ನಿಯಂತ್ರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಆಸಕ್ತಿ ವಹಿಸದಿದ್ದರಿಂದ ಜೆಡಿಎಸ್ ನಾಯಕರು ಮನಃಪೂರ್ವಕವಾಗಿ ಕೆಲಸ ಮಾಡಲಿಲ್ಲ. ‘ಕೈ’ಗೆ ಕೈ ಕೊಡಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.

ರೇವಣ್ಣ ಗೈರು: ಕುಶಾಲನಗರದಲ್ಲಿನ ಎಸ್‌ಎಲ್‌ಎನ್ ಮೈದಾನದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರದಲ್ಲಿ ರಾಜ್ಯಮಟ್ಟದ ಯಾವೊಬ್ಬ ಜೆಡಿಎಸ್ ನಾಯಕರು ಪಾಲ್ಗೊಂಡಿರಲಿಲ್ಲ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೂಡ ಆಗಮಿಸಲಿಲ್ಲ. ಆ ಮೂಲಕ ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿನ ಅತೃಪ್ತಿ ಬಹಿರಂಗಗೊಂಡಿತ್ತು.

ರಿಸ್ಕ್ ಬೇಡ: ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ನಮ್ಮ ವಿರುದ್ಧ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ನಿಖಿಲ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಆದ್ದರಿಂದ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಜೆಡಿಎಸ್ ಮುಖಂಡರು ನಮಗೆ ಸಂದೇಶ ನೀಡಿದ್ದರು. ಆದರಂತೆ ನಾವು ನಡೆದುಕೊಂಡಿದ್ದೇವೆ ಎಂದು ಜೆಡಿಎಸ್ ಜಿಲ್ಲಾ ಮುಖಂಡರೊಬ್ಬರು ತಿಳಿಸಿದ್ದಾರೆ.

ಕೆಎಂಬಿ ಕಡೆಗಣನೆ: ಮಾಜಿ ಸಚಿವ ಬಿ.ಎ.ಜೀವಿಜಯ ವಿರೋಧದ ಹಿನ್ನೆಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಹಾಗೂ ಅವರ ಬೆಂಬಲಿಗರನ್ನು ಕಡೆಗಣಿಸಲಾಗಿತ್ತು ಎಂಬ ಅತೃಪ್ತಿ ವ್ಯಕ್ತವಾಗಿ ಗಣೇಶ್ ಮತ್ತು ಅವರ ಬೆಂಬಲಿಗರು ಉತ್ಸಾಹ ಕಳೆದುಕೊಂಡಿದ್ದರು ಎನ್ನಲಾಗಿದೆ.

ಗಣೇಶ್ ಬಣ ತಮ್ಮೊಂದಿಗೆ ಗುರುತಿಸಿಕೊಂಡಲ್ಲಿ ಜೀವಿಜಯ ಬಣಕ್ಕೆ ಬೇಸರವಾಗುತ್ತದೆ ಎಂಬ ಕಾರಣಕ್ಕಾಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಅಂತರ ಕಾಯ್ದುಕೊಂಡಿದ್ದರು. ಇದರಿಂದ ಗಣೇಶ್ ಬಣ ಪ್ರಚಾರದಿಂದ ದೂರ ಸರಿಯುವಂತಾಯಿತು. ಹೀಗಿದ್ದರೂ, ಮೈತ್ರಿ ಧರ್ಮಪಾಲನೆಗಾಗಿ ಮತ ಹಾಕಿರುವುದಾಗಿ ಗಣೇಶ್ ಬಣದವರು ಹೇಳಿಕೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ನೀಡಿದ ಸಂದೇಶದಂತೆ ಅವರ ಶಿಷ್ಯ ಕೆ.ಎಂ.ಗಣೇಶ್ ಕೊನೆ ದಿನಗಳಲ್ಲಿ ತಟಸ್ಥ ನಿಲುವು ಪ್ರದರ್ಶಿಸಿದರು.

ಜೆಡಿಎಸ್ ಕಡೆಗಣನೆ: ಸ್ಥಳೀಯ ಕಾಂಗ್ರೆಸ್ ನಾಯಕರು ನಮ್ಮನ್ನು ಒಟ್ಟಿಗೆ ಸೇರಿಸಿಕೊಂಡು ಪ್ರಚಾರ ಮಾಡಲು ಹಿಂಜರಿದಿದ್ದಾರೆ. ಆದರೆ, ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಚೆನ್ನಾಗಿ ನಡೆದುಕೊಂಡಿದ್ದರು. ಇದರಿಂದ ವೈಯಕ್ತಿಕ ಆಸಕ್ತಿವಹಿಸಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದೇವೆ. ನಮ್ಮಿಂದ ಹೆಚ್ಚಿನ ಮತ ಬರುವಂತೆ ಮಾಡಿದ್ದೇವೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮತೀನ್ ಹೇಳುತ್ತಾರೆ.

ಅಲ್ಪಸಂಖ್ಯಾತರ ನಿರ್ಲಕ್ಷೃ: ಮುಸ್ಲಿಂ ಮತದಾರರು ನಮಗೆ ಮತ ಹಾಕುತ್ತಾರೆಂಬ ಕಾರಣಕ್ಕಾಗಿ ಮುಸ್ಲಿಂರನ್ನು ಕಾಂಗ್ರೆಸ್ಸಿಗರು ಕಡೆಗಣಿಸಿದ್ದರು. ಮತ ಚಲಾಯಿಸಿ ಎಂದು ಯಾರೊಬ್ಬರು ಕೇಳುವ ಗೋಜಿಗೆ ಹೋಗಲಿಲ್ಲ. ಆದರೆ, ಅನಿವಾರ‌್ಯವಾಗಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೊಡಂಗೇರಿ ಯೂಸೂಫ್ ಹೇಳುತ್ತಾರೆ.

ಜಿಲ್ಲಾ ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದ್ದರು. ನಮ್ಮ ವ್ಯಾಪ್ತಿಯಲ್ಲಿ ರಾಜಕೀಯ ಹಿಡಿತ ಇಟ್ಟುಕೊಳ್ಳಬೇಕೆಂಬ ಕಾರಣಕ್ಕಾಗಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್ಸಿನಿಂದ ಜಿಲ್ಲೆಯಲ್ಲಿ ಮೈತ್ರಿ ಧರ್ಮಪಾಲನೆ ಆಗಲಿಲ್ಲ ಎಂದು ಟೀಕಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಕೊಡಗಿನಲ್ಲಿ ಪ್ರಚಾರ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಸಾಧ್ಯವಾಗಲಿಲ್ಲ. ಜತೆಗೆ ತುಮಕೂರು ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರಿಂದ ಕೊಡಗಿಗೆ ಆಗಮಿಸಲು ಸಾಧ್ಯವಾಗಲಿಲ್ಲ.
ಕೆ.ಎಂ.ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ

ಎಷ್ಟು ಅಂತ ಸತ್ಯ ಮುಚ್ಚಿಡೋದು. ಸಾ.ರಾ.ಮಹೇಶ್ ಅವರು ಒಳ್ಳೆಯ ವಿದ್ಯಾರ್ಥಿ ನಾಯಕರಾಗಿದ್ದರು. ಆವಾಗ ನಾನು ಅವರು ಸ್ನೇಹಿತರಾಗಿದ್ವಿ. ಅವರ ಜವಾಬ್ದಾರಿಯನ್ನು ನ್ಯಾಯಯುತವಾಗಿ ಮಾಡುತ್ತಿಲ್ಲ ಅನ್ನೊದಂತು ಸತ್ಯ.
ಐ.ಜಿ.ಚಿಣ್ಣಪ್ಪ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಚಾಲಕ

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಂಡ್ಯಕ್ಕೆ ವಲಸೆ ಹೋಗಿದ್ದಾರೆ. ಮಳೆ ನಂತರ ಕೊಡಗಿಗೆ ಬರ್ತಾರೆ.
ಕಾಳಚಂಡ ಸುಮನ್ ಅಪ್ಪಣ್ಣ, ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ

Leave a Reply

Your email address will not be published. Required fields are marked *