ಮನುಷ್ಯನನ್ನು ಅಟ್ಟಾಡಿಸಿದ ಅಳಿಲು ಮರಿ: ತಲೆಕೆಟ್ಟು ಆತ ಹೀಗಾ ಮಾಡೋದು?

ಜರ್ಮನಿ: ಇಲ್ಲೊಬ್ಬ ಮನುಷ್ಯ ತನ್ನನ್ನು ಅಟ್ಟಿಸಿಕೊಂಡು ಬಂದ ಪುಟಾಣಿ ಅಳಿಲಿನಿಂದ ಕಾಪಾಡುವಂತೆ ಪೊಲೀಸರಿಗೆ ಕರೆ ಮಾಡಿದ್ದಾನೆ. ಕಾರ್ಲ್​ಸುಹೆ ಎಂಬ ಸಿಟಿಯಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ.

ಈ ಬಗ್ಗೆ ಪೊಲೀಸರೇ ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಅಳಿಲಿನ ಮರಿಯೊಂದು ಒಬ್ಬನ ಬೆನ್ನು ಹತ್ತಿತ್ತು. ಅವನು ಎಲ್ಲೇ ಹೋದರೂ ಅವನ ಹಿಂದೆಯೇ ಹೋಗುತ್ತಿತ್ತು. ತಪ್ಪಿಸಿಕೊಳ್ಳಲು ಪರದಾಡಿದ ಆತ ಕೊನೆಗೇ ಪೊಲೀಸರಿಗೆ ಕರೆ ಮಾಡಿ ತನ್ನನ್ನು ಕಾಪಾಡುವಂತೆ ಬೇಡಿಕೊಂಡಿದ್ದಾನೆ. ಅವನ ಕೋರಿಕೆಯನ್ನು ಕೇಳಿ, ನಾವು ಕೂಡಲೇ ಅಲ್ಲಿಗೆ ಸಿಬ್ಬಂದಿಯನ್ನು ಕಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿ ಹೋಗಿ ನೋಡಿದಾಗ ಆ ಮನುಷ್ಯನನ್ನು ಪುಟ್ಟ ಅಳಿಲು ಹಿಡಿದುಕೊಂಡಿತ್ತು. ಅದನ್ನು ಹಿಡಿದ ಪೊಲೀಸರು, ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಆ ಅಳಿಲಿನ ಮರಿ ನಮಗೆ ಶುಭ ತಂದಿದೆ ಎಂದಿದ್ದಾರೆ. ಅಲ್ಲದೆ, ಅದಕ್ಕೆ ಕಾರ್ಲ್​ ಪ್ರೆಡ್​ರಿಚ್​ ಎಂದು ನಾಮಕರಣ ಮಾಡಿದ್ದಾಗಿಯೂ ತಿಳಿಸಿದ್ದಾರೆ.
ಅಳಿಲಿನ ಮರಿ ಆ ಮನುಷ್ಯನನ್ನು ಅಟ್ಟಾಡಿಸಿ ಸುಸ್ತಾಗಿಬಿಟ್ಟಿದೆ. ತಾವು ಹಿಡಿದುಕೊಂಡು ಬಂದ ನಂತರ ಭಯಂಕರವಾಗಿ ನಿದ್ರೆ ಮಾಡುತ್ತಿತ್ತು ಎಂದು ಅಧಿಕಾರಿಗಳು ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ನಂತರ ಅಳಿಲಿನ ಮರಿಯನ್ನು ಇತರ ಅಳಿಲುಗಳೊಂದಿಗೆ ಸೇರಿಸಿದ್ದು, ಅದು ಹೊಸ ಅಮ್ಮನನ್ನು ಹುಡುಕುತ್ತಿತ್ತು ಎಂದಿದ್ದಾರೆ.

ಅಳಿಲು ಮರಿಗಳು ತಮ್ಮ ತಾಯಿಯಿಂದ ದೂರವಾದಾಗ ಬೇರೆಯದನ್ನು ಹುಡುಕಿಕೊಳ್ಳುತ್ತವೆ. ಅಂಥ ಸಂದರ್ಭದಲ್ಲಿ ಮನುಷ್ಯರ ಮೇಲೆ ಹೀಗೆ ಗಮನಹರಿಸಿ ಆಕ್ರಮಣಕ್ಕೆ ಮುಂದಾಗುವುದು ಸಹಜ. ಈ ಅಳಿಲು ಕೂಡ ತಾಯಿಯಿಂದ ದೂರವಾಗಿತ್ತು. ಅದಕ್ಕೆ ಮನೆಯೊಂದನ್ನು ಸೇರಬೇಕಾಗಿತ್ತು. ಹಾಗಾಗೇ ಈತನನ್ನು ಬೆನ್ನಟ್ಟಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.