ಸ್ಪ್ರಿಂಗ್ ಈರುಳ್ಳಿ ಅನುಕೂಲಗಳು

ಹಿಂದಿನ ಅಂಕಣದಲ್ಲಿ ಸ್ಪ್ರಿಂಗ್ ಈರುಳ್ಳಿಯ ಬಗೆಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೆವು. ಇಂದಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿಗಳ ಬಗೆಗೆ ಗಮನ ಹರಿಸೋಣ.

ಸ್ಕಾಲಿಯಾನ್ ಅಥವಾ ಹಸಿರು ಈರುಳ್ಳಿ ಎಂದು ಕರೆಯಲ್ಪಡುವ ಸ್ಪ್ರಿಂಗ್ ಈರುಳ್ಳಿಯು ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದ್ದು, ಶೀತ, ಜ್ವರದ ವಿರುದ್ಧ ಹೋರಾಡುವಲ್ಲಿ ಸಹಕಾರಿ. ಇದರ ಈ ಗುಣವು ಹೊಟ್ಟೆಯ ಅಸ್ವಸ್ಥತೆಗಳನ್ನು ಕಡಿಮೆ ಮಾಡುವಲ್ಲಿ ಅನುಕೂಲಕಾರಿಯಾಗಿದೆ. ಇದರಲ್ಲಿನ ಸಿ ವಿಟಮಿನ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ದೇಹದಲ್ಲಿನ ಫ್ರೀ ರ್ಯಾಡಿಕಲ್ಸ್ ಕಡಿಮೆ ಮಾಡಿ ದೇಹಕ್ಕೆ ಬೇಗನೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುವ ಸಾಮರ್ಥ್ಯ ಇದರದ್ದು.

ಸ್ಪ್ರಿಂಗ್ ಈರುಳ್ಳಿಯು ಪೆಕ್ಟೀನ್ ಎಂಬ ಅಂಶವನ್ನು ಹೊಂದಿದ್ದು, ಕ್ಯಾನ್ಸರ್ ಬರುವಂತಹ ಸಂಭವತೆಯನ್ನು ಕಡಿಮೆ ಮಾಡುವಲ್ಲಿ ಉಪಯುಕ್ತವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕೊಲೊನ್ ಕ್ಯಾನ್ಸರ್ ನಿಯಂತ್ರಣಕ್ಕೆ ಸಹಕಾರಿ. ಆಂಟಿ ಇನ್​ಫ್ಲಮೇಟರಿ ಮತ್ತು ಆಂಟಿ ಹಿಸ್ಟಮಿನ್ ಗುಣಗಳನ್ನು ಇದು ಹೊಂದಿದ್ದು, ಅಲರ್ಜಿಗಳಿಂದ ರಕ್ಷಿಸಲು ಅನುವು ಮಾಡಿಕೊಡುತ್ತದೆ. ಆರ್ಥರೈಟಿಸ್ ಮತ್ತು ಅಸ್ತಮಾ ಇರುವವರ ಆರೋಗ್ಯಕ್ಕೆ ಈ ಸ್ಪ್ರಿಂಗ್ ಈರುಳ್ಳಿ ಬಹಳ ಉತ್ತಮ.

ಕಣ್ಣಿನ ದೋಷ ನಿವಾರಣೆಗೆ ಮತ್ತು ದೃಷ್ಟಿ ಹೆಚ್ಚಳಕ್ಕೆ ಸ್ಪ್ರಿಂಗ್ ಈರುಳ್ಳಿಯ ಸೇವನೆ ಹಿತವಾದುದು. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು, ಉತ್ತಮ ರಕ್ತಸಂಚಾರಕ್ಕೆ, ಫಂಗಲ್ ಸೋಂಕುಗಳಿಂದ ರಕ್ಷಿಸಲು ಸ್ಪ್ರಿಂಗ್ ಈರುಳ್ಳಿ ಸಹಾಯ ಮಾಡುತ್ತದೆ. ಇದರ ಸೇವನೆಯು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ತಿನ್ನಲು ಸಾಮಾನ್ಯ ಈರುಳ್ಳಿಗಿಂತಲೂ ಬಲು ರುಚಿ.