ಸ್ಪ್ರಿಂಗ್ ಈರುಳ್ಳಿ

ಸ್ಪ್ರಿಂಗ್ ಈರುಳ್ಳಿ ಅಥವಾ ಸ್ಪ್ರಿಂಗ್ ಆನಿಯನ್ ಎಂದು ಕರೆಯಲ್ಪಡುವ ತರಕಾರಿ ಎಲೆಗಳೊಂದಿಗೆ ಇರುವ ಸಣ್ಣ ಸಣ್ಣ ಗಡ್ಡೆಗಳಿಂದ ಕೂಡಿದಂತಹ ತರಕಾರಿ. ಬೇರೆ ಬೇರೆ ರೀತಿಯಲ್ಲಿ, ವಿವಿಧ ಬಣ್ಣಗಳಲ್ಲಿ ಬಿಳಿ, ಹಳದಿ, ಕೆಂಪು ಬಣ್ಣಗಳಲ್ಲಿ ಕಂಡುಬರುತ್ತದೆ. ಬಹಳ ರುಚಿಕರವಾದಂತಹ ಹಾಗೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವಂತಹ ಎಲ್ಲರಿಗೂ ಕೈಗೆಟಕಬಹುದಾದಂತಹ ತರಕಾರಿ ಇದು. ಆದರೆ ಇದರ ಬಳಕೆ ಸ್ವಲ್ಪ ಕಡಿಮೆ ಎಂದೇ ಹೇಳಬಹುದು.

ಚೈನೀಸ್ ಸಾಂಪ್ರದಾಯಿಕ ಔಷಧೀಯ ವಸ್ತುವಾಗಿ ಇದನ್ನು ಅನೇಕ ವರ್ಷಗಳಿಂದ ಬಳಸುತ್ತಿದ್ದರು. ಈರುಳ್ಳಿಯಂತೆ ಈ ಸ್ಪ್ರಿಂಗ್ ಈರುಳ್ಳಿಯೂ ಹೆಚ್ಚಿನ ಪ್ರಮಾಣದಲ್ಲಿ ಸಲ್ಪರ್ ಹೊಂದಿರುತ್ತದೆ. ಕಡಿಮೆ ಕ್ಯಾಲೋರಿಯನ್ನು ಹೊಂದಿರುವುದು ಇದರ ವಿಶೇಷತೆ. ವಿಟಮಿನ್ ಸಿ, ವಿಟಮಿನ್ ಬಿ2, ಥೈಮಿನ್​ನ್ನು ಹೊಂದಿರುವುದರ ಜೊತೆಗೆ ವಿಟಮಿನ್ ಎ, ವಿಟಮಿನ್ ಕೆ, ತಾಮ್ರ, ಪಾಸ್ಪರಸ್, ಮೆಗ್ನೇಷಿಯಂ, ಪೊಟ್ಯಾಷಿಯಂ, ಕ್ರೋಮಿಯಂ, ಮ್ಯಾಂಗನೀಸ್ ಮತ್ತು ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಅನುಕೂಲಕಾರಿಯಾಗುತ್ತದೆ.

ಇದು ಕ್ವೆರ್ಸಿಟಿನ್ ಎಂಬ ಫ್ಲೇವನೈಡ್​ನ ಮುಖ್ಯ ಆಗರ. ಹೃದಯದ ಆರೋಗ್ಯಕ್ಕೆ ಸ್ಪ್ರಿಂಗ್ ಆನಿಯನ್ ಅತ್ಯುತ್ತಮವಾದುದು. ಇದು ಕೊಲೆಸ್ಟರಾಲ್ ಆಕ್ಸಿಡೇಶನ್​ನ್ನು ಕಡಿಮೆ ಮಾಡಿ, ಇನ್ನಿತರ ಹೃದಯಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಇದರಲ್ಲಿನ ಸಲ್ಪರ್ ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಅನುಕೂಲಕಾರಿ. ಅಲ್ಲದೆ ನಿಯಂತ್ರಣದಲ್ಲಿರಸಲೂ ಸಹಾಯಕಾರಿ. ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ. ಇದರಲ್ಲಿನ ಕ್ರೋಮಿಯಂ ಸಂಯುಕ್ತವು ಮಧುಮೇಹಿಗಳ ಆರೋಗ್ಯಕ್ಕೆ ಅತ್ಯುತ್ತಮ.