ಮೊದಲು ಅನಾರೋಗ್ಯ ಹರಡಿ ನಂತರ ಚಿಕಿತ್ಸೆ ಕೊಡುವುದೇ ಕಾಂಗ್ರೆಸ್​ ಕೆಲಸ: ಪ್ರಧಾನಿ ಮೋದಿ

ನವದೆಹಲಿ: ರೈತರ ಸಾಲಮನ್ನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಜಮ್ಮುವಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಅಧಿಕಾರಕ್ಕೆ ಬಂದಿರುವ ರಾಜ್ಯಗಳಲ್ಲಿ ಒಂದಷ್ಟು ಜನರು ಮಾತ್ರ ಅದರಿಂದ ಲಾಭವನ್ನು ಅನುಭವಿಸಿದ್ದಾರೆ. 10 ವರ್ಷಗಳ ಹಿಂದೆ ರೈತರ ಸಾಲಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​​ ಅಧಿಕಾರಕ್ಕೆ ಬಂದಿತ್ತು. ಆದರೆ, ಕೊಟ್ಟ ಭರವಸೆಯನ್ನು ಈಡೇರಿಸದೇ ಎಲ್ಲರನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್​ಗಢ ಮೂರು ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಸಾಲಮನ್ನಾ ಭರವಸೆ ಕಾರಣ ಎನ್ನಲಾಗಿದ್ದು, ಕೇಂದ್ರ ಸರ್ಕಾರ ರೈತರ ಮೇಲಿನ ಅಸಮಾಧಾನದಿಂದಾಗಿ ಅವರ ಖಾತೆಗೆ ನೇರವಾಗಿ 6000 ರೂ. ಜಮಾವಣೆ ಮಾಡುವ ಯೋಜನೆಯನ್ನು ಮಧ್ಯಂತರ ಬಜೆಟ್​ನಲ್ಲಿ ತರಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಕಾಂಗ್ರೆಸ್​ ಕೇಂದ್ರದ ಯೋಜನೆಯನ್ನು ವಿರೋಧಿಸಿದ್ದು, ದೇಶದ ವಿವಿಧ ಭಾಗದಲ್ಲಿರುವ ರೈತರ ಸಾಲಮನ್ನಾ ಮಾಡದೇ ಕೇಂದ್ರ ಸರ್ಕಾರ ಸಣ್ಣ ರೈತರ ಖಾತೆಗೆ 6000 ರೂ. ಪುಡಿಗಾಸು ನೀಡಿದೆ ಎಂದು ಟೀಕಿಸಿದೆ. ಕೇಂದ್ರ ಈ ಯೋಜನೆಗಾಗಿ 75,000 ಕೋಟಿ ರೂ. ಮೀಸಲಿಟ್ಟಿದೆ ಎಂಬುದನ್ನು ರಾಜಕೀಯ ಗಿಮಿಕ್​ ಎಂದು ಕಾಂಗ್ರೆಸ್​ ವಿರೋಧಿಸಿದೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಪ್ರಧಾನಿ, ಎಲ್ಲರನ್ನು ಮುರ್ಖರನ್ನಾಗಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ. ಸಾಲಮನ್ನಾಕ್ಕಾಗಿ 6 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದಾಗಿ ಹೇಳಿ, ಕೊನೆಯಲ್ಲಿ 52,000 ಕೋಟಿ ಎಂದು ಹೇಳಿ ಮೋಸ ಮಾಡಿದೆ. ಕಾಂಗ್ರೆಸ್​ ಮೊದಲು ಸಮಸ್ಯೆಯನ್ನು ಉಂಟು ಮಾಡಿ ನಂತರ ಸಲಹೆಯನ್ನು ನೀಡುತ್ತದೆ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.

ಸಾಲಮನ್ನಾ ಯೋಜನೆಯನ್ನು ಆರ್ಥಿಕ ತಜ್ಞರೇ ತಳ್ಳಿ ಹಾಕಿದ್ದು, ಈ ಯೋಜನೆಯಿಂದ ರೈತರ ಸಮಸ್ಯೆಗಳಿಗೆ ನಿಜವಾದ ಪರಿಹಾರವನ್ನು ಒದಗಿಸಿ ಕೊಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಸಾಲಮನ್ನಾ ಕೂಗು ಕೇಳಿಬರುತ್ತದೆ. ಆದರೆ, ಕೇಂದ್ರ ಸರ್ಕಾರ ತೆಲಂಗಾಣ ಹಾಗೂ ಒಡಿಶಾ ಸರ್ಕಾರದ ಮಾದರಿಯಲ್ಲಿ ರೈತರ ಖಾತೆಗೆ ನೇರವಾಗಿ ನಗದು ಜಮಾವಣೆ ಮಾಡುವ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)