ಹೊಸನಗರ: ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮೊದಲ ಬಾರಿ ಚಂಡೆಯ ನಿನಾದ, ಬ್ಯಾಂಡ್ ಸೆಟ್ ಅಬ್ಬರದೊಂದಿಗೆ ಚಿಕ್ಕಪೇಟೆ ಗಣಪತಿ ದೇಗುಲದಲ್ಲಿ ಪೂಜೆ ನೆರವೇರಿಸಿ ಕ್ರೀಡಾಜ್ಯೋತಿ ಮೆರವಣಿಗೆ ಅಪರೂಪವಾಗಿತ್ತು.
ತಾಲೂಕಿನ ನಗರ ಸರ್ಕಾರಿ ಪ್ರೌಢಶಾಲೆ ಆಯೋಜಿಸಿದ್ದ ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಊಟ, ಉಪಾಹಾರ, ತಳಿರು ತೋರಣ, ಬೀದಿ ಬದಿ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ಮಾತನಾಡಿ, ಪಠ್ಯಕ್ಕೆ ಆದ್ಯತೆ ನೀಡಿ ಪಠ್ಯೇತರ ಚಟುವಟಿಕೆಗೆ ನಿರಾಸಕ್ತಿ ತೋರುತ್ತಿರುವ ದಿನದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ ಆಯೋಜಿಸಿರುವ ಕ್ರೀಡಾಕೂಟ ಮಾದರಿಯಾಗಿದೆ. ಕ್ರೀಡಾಜ್ಯೋತಿಗೆ ಗೌರವ ನೀಡಿ ವಿದ್ಯಾರ್ಥಿಗಳು, ಶಿಕ್ಷಕರು, ಒಂದು ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಸುಮನಾ ಭಾಸ್ಕರ ಕ್ರೀಡಾಕೂಟ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಲಸಿನಹಳ್ಳಿ ರಮೇಶ ಕ್ರೀಡಾಜ್ಯೋತಿ ಗೌರವ ಸ್ವೀಕರಿಸಿದರು. ನಿವೃತ್ತಿ ಅಂಚಿನಲ್ಲಿರುವ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್ ಮತ್ತು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವೆಂಕಪ್ಪ ಗೌಡ ಅವರನ್ನು ಮೈದಾನದಲ್ಲೇ ಗೌರವಿಸಲಾಯಿತು.
ರವಿ ಶೆಟ್ಟಿ, ಹರೀಶ ವಕ್ರತುಂಡ ನೇತೃತ್ವದಲ್ಲಿ ಚಿಕ್ಕಪೇಟೆ ಮತ್ತು ನೂಲಿಗ್ಗೇರಿ ಗೆಳೆಯರ ಬಳಗ ನೇತೃತ್ವದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಕುಮಾರ ಭಟ್ 1500 ಜನರಿಗೆ ಜಿಲೇಬಿಯನ್ನು ಖುದ್ದು ತಯಾರಿಸಿ ಉಣಬಡಿಸಿದರು. ಪಾಂಡು ಗೌಡ, ಉಮೇಶ್, ರಾಮಕೃಷ್ಣ ಸೇರಿ ಮಳಲಿ ತಂಡ ಗಣಪತಿ ದೇಗುಲದಿಂದ ಶಾಲಾ ಆವರಣದವರೆಗೆ ವಿಶೇಷ ಅಲಂಕಾರ ಮಾಡಿತು.
ಬಿಇಒ ಎಚ್.ಆರ್.ಕೃಷ್ಣಮೂರ್ತಿ, ಕೊಡಚಾದ್ರಿ ಕಾಲೇಜು ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಗ್ರಾಪಂ ಸದಸ್ಯರಾದ ಕರುಣಾಕರ ಶೆಟ್ಟಿ, ಎಂ.ವಿಶ್ವನಾಥ, ಸಿಆರ್‌ಪಿ ರೇಖಾ ಪ್ರಭಾಕರ್, ನಾಗರಾಜ ವಾರಂಬಳ್ಳಿ, ಮುಖ್ಯ ಶಿಕ್ಷಕ ಡಾ. ಸುಧಾಕರ್, ಪ್ರಮುಖರಾದ ಗೋಪಾಲ ಶೆಟ್ಟಿ, ರಮೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಇದ್ದರು.