ವಿಜಯಪುರ : ದೇಹ, ಮನಸ್ಸು ಹಾಗೂ ಆತ್ಮ ಸಾಮರಸ್ಯಗೊಂಡು ವ್ಯಕ್ತಿ ಜೀವನದ ಜ್ಯೋತಿಯಾಗಿ ಬೆಳಗಲು ವಿದ್ಯಾರ್ಥಿಗಳಿಗೆ ಕ್ರೀಡಾ ಜೀವನ ಅತ್ಯಮೂಲ್ಯ ಎಂದು ಕ್ರೀಡಾ ಶಿಕ್ಷಕ ಎಸ್.ಎಸ್. ಸಾಲ್ಗುಡಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಡಿಜೆ ಪದವಿ ಪೂರ್ವ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಚೈತನ್ಯದಿಂದ ಇರಲು ಪ್ರತಿಯೊಬ್ಬರೂ ಆಟದಲ್ಲಿ ಭಾಗವಹಿಸಬೇಕು. ಅಲ್ಲದೆ, ಮೊಬೈಲ್ ಬಿಟ್ಟು ಮೈದಾನಕ್ಕೆ ಬನ್ನಿ ಎಂದು ಕರೆ ನೀಡಿದರು.
ಬಿಡಿಈ ಸಂಸ್ಥೆ ಜಂಟಿ ಕಾರ್ಯದರ್ಶಿ ಆರ್.ಪಿ. ಚಿಕ್ಕಲಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾ ಜಗತ್ತಿನಲ್ಲಿ ಆಟದೊಂದಿಗೆ ಪಾಠಕ್ಕೂ ಮಹತ್ವ ನೀಡಿ ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಉಪ ಪ್ರಾಚಾರ್ಯ ಎಂ.ಎ. ಆಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಶ್ರೀಧರ ಜೋಶಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿ.ಡಿ. ಪೂಜಾರ ನಿರೂಪಿಸಿದರು. ಎಂ.ಎಸ್. ಕುಲಕರ್ಣಿ ವಂದಿಸಿದರು.