ಬಾಲಕಿಯರಿಗೆ ಕ್ರೀಡಾ ಹಾಸ್ಟೆಲ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಬಾಲಕಿಯರ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ತಿಳಿಸಿದರು.
ಮಂಗಳವಾರ ನಗರದ ಮಂಗಳಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ 500 ಕೋಟಿ ರೂ. ಒದಗಿಸಲು ವಿನಂತಿಸಲಾಗಿದೆ ಎಂದರು. ಕ್ರೀಡಾಸಕ್ತರು ಮತ್ತು ತರಬೇತುದಾರರ ಅಹವಾಲು ಆಲಿಸಿದ ಸಚಿವರು ಶೀಘ್ರ ಬೆಂಗಳೂರಿನಲ್ಲಿ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಶಾಸಕ ವೇದವ್ಯಾಸ್ ಕಾಮತ್ ಇದ್ದರು.

ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಕ್ರೀಡಾ ಹಾಸ್ಟೆಲ್‌ನಲ್ಲಿ ಕಬಡ್ಡಿ ಕ್ರೀಡಾಳುಗಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬೇಕು. ಬಂಟ್ವಾಳದ ಬೆಂಜನಪದವಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು ಅನುದಾನ ಬಿಡುಗಡೆಗೊಳಿಸಬೇಕು. ನೆಹರು ಮೈದಾನದಲ್ಲಿ ಫುಟ್‌ಬಾಲ್ ಅಂಕಣ ಅಭಿವೃದ್ಧಿಗೆ 1 ಕೋಟಿ ರೂ.ಗೆ ಮಂಜೂರಾತಿ ನೀಡಿದ್ದು ತಾಂತ್ರಿಕ ಕಾರಣಗಳಿಂದ ಪ್ರಗತಿ ಸ್ಥಗಿತಗೊಂಡಿದೆ. ಯೋಜನೆ ಪರಿಷ್ಕರಿಸಿ 1.25 ಕೋಟಿ ರೂ. ಮಂಜೂರಾತಿಗೆ ಅನುಮೋದನೆ ನೀಡಲು ಕಳುಹಿಸಿದ್ದು ಸರ್ಕಾರದ ಮಟ್ಟದಲ್ಲಿದೆ ಎಂದರು.

ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ, ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಭಂಡಾರಿ , ತಾರನಾಥ ಶೆಟ್ಟಿ ಉಪಸ್ಥಿತರಿದ್ದರು.

ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ 3.35 ಕೋಟಿ ರೂ.ಅನುದಾನ ಬಿಡುಗಡೆ ಮಾಡಬೇಕು. ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಿಸಲು ಅನುದಾನದ ಅಗತ್ಯವಿದೆ ಎಂದು ಸಚಿವರಿಗೆ ಮನವಿ ಮಾಡಲಾಗಿದೆ.
– ವೇದವ್ಯಾಸ ಕಾಮತ್, ಶಾಸಕರು