ಸ್ಮಾರ್ಟ್ ಸಿಟಿಯಲ್ಲಿ ಕ್ರೀಡಾ ಸಂಕೀರ್ಣ

ಭರತ್ ಶೆಟ್ಟಿಗಾರ್ ಮಂಗಳೂರು

ಮಂಗಳೂರಿನ ಉರ್ವದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿ, ಶಿಲಾನ್ಯಾಸ ನಡೆಸಲಾಗಿರುವ ಅಂತಾರಾಷ್ಟ್ರೀಯ ಮಾದರಿಯ ಸುಸಜ್ಚಿತ ಒಳಾಂಗಣ ಕ್ರೀಡಾಂಗಣ ಕೆಲಸವನ್ನು ಸ್ಮಾರ್ಟ್ ಸಿಟಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿರುವ ಮಂಗಳೂರಿನಲ್ಲಿ ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ಗೆ ಸುಸಜ್ಜಿತ ಅಂತಾರಾಷ್ಟ್ರೀಯ ಮಾದರಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರೀಡಾ ಇಲಾಖೆ ಮುಂದಾಗಿತ್ತು. ಅದಂತೆ ಉರ್ವ ಜಂಕ್ಷನ್ ಬಳಿ 1.13 ಎಕರೆ ಪ್ರದೇಶ ಗುರುತಿಸಿ, ಪ್ರಥಮ ಹಂತವಾಗಿ ಕಳೆದ ಮಾರ್ಚ್‌ನಲ್ಲಿ ಹಿಂದಿನ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸವನ್ನೂ ನೆರವೇರಿಸಿದ್ದರು. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಕ್ರೀಡಾ ಇಲಾಖೆ ಬದಲು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ವರ್ಷದ ಹಿಂದೆ ಸುಮಾರು 6.5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಉದ್ದೇಶಿಸಲಾಗಿತ್ತು. ಆದರೆ ಟೆಂಡರ್ ಆಗುವಾಗ ಈ ಮೊತ್ತ ಹೆಚ್ಚಾಗಬಹುದು. ಒಂದೇ ಜಿಲ್ಲೆಗೆ ಅಷ್ಟು ಮೊತ್ತ ನೀಡುವಲ್ಲಿ ಸರ್ಕಾರ ಹಿಂದೇಟು ಹಾಕುವ ಸಾಧ್ಯತೆಯೂ ಇದೆ. ಆದ್ದರಿಂದ ಸ್ಮಾರ್ಟ್ ಸಿಟಿಯಲ್ಲೇ ನಿರ್ಮಿಸುವುದರಿಂದ ಉತ್ತಮ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಿಸುವುದು ಸಚಿವರ ಉದ್ದೇಶವಾಗಿದೆ.

ಉದ್ದೇಶಿತ ಸ್ಟೇಡಿಯಂ ವೈಶಿಷ್ಟ್ಯ: ಉರ್ವದಲ್ಲಿ ಕ್ರೀಡಾ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಲಾಗಿದ್ದ ಕ್ರೀಡಾ ಸಂಕೀರ್ಣದಲ್ಲಿ ಸಿಂಥೆಟಿಕ್‌ನ ಆರು ಬ್ಯಾಡ್ಮಿಂಟನ್ ಕೋರ್ಟ್, ನಾಲ್ಕು ಕಬಡ್ಡಿ ಕೋರ್ಟ್, 4,500 ಮಂದಿ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಲು ಅವಕಾಶವಿದೆ. ಗ್ರೌಂಡ್ ಫ್ಲೋರ್‌ನಲ್ಲಿ ಕಬಡ್ಡಿಗಾಗಿ ಎರಡು ಮಣ್ಣಿನ ಕೋರ್ಟ್ ಕೂಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಕ್ರೀಡಾಪಟುಗಳ ಅನುಕೂಲಕ್ಕಾಗಿ ಸಣ್ಣ ಸ್ವಿಮ್ಮಿಂಗ್ ಪೂಲ್, ಮಕ್ಕಳಿಗೆ ಅಭ್ಯಾಸಕ್ಕೆ ಮ್ಯಾಟ್, ಉತ್ತಮ ಬೆಳಕಿನ ವ್ಯವಸ್ಥೆ, ಆಡಳಿತ ಕಚೇರಿ, ಕಾನ್ಫರೆನ್ಸ್ ಹಾಲ್, ಅತಿಥಿಗೃಹ, ಕೆಫೆಟೇರಿಯಾ, ವಾಹನ ಪಾರ್ಕಿಂಗ್, ಶಾಪಿಂಗ್ ಮಳಿಗೆಗಳ ನಿರ್ಮಾಣಕ್ಕೂ ಉದ್ದೇಶಿಸಲಾಗಿತ್ತು. ಸ್ಮಾರ್ಟ್ ಸಿಟಿಯಲ್ಲೂ ಕೆಲವೊಂದು ಬದಲಾವಣೆಯೊಂದಿಗೆ ಇದೇ ಯೋಜನೆ ಮುಂದುವರಿಸಲು ಉದ್ದೇಶಿಸಲಾಗಿದೆ.

ನಿರಂತರ ಪ್ರಯತ್ನ: ನಗರದಲ್ಲಿ ಈಗಾಗಲೇ ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ನಾಲ್ಕು ಬ್ಯಾಡ್ಮಿಂಟನ್ ಕೋರ್ಟ್‌ಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ತರಬೇತಿ ಮತ್ತು ಅಭ್ಯಾಸಕ್ಕೆ ಬರುವುದರಿಂದ ಎಲ್ಲರಿಗೂ ಅವಕಾಶ ಸಿಗುವಲ್ಲಿ ಸಮಸ್ಯೆಯಾಗುತ್ತಿದೆ. ಬೆಳಗ್ಗೆ, ಸಾಯಂಕಾಲ ವೇಳೆಗೆ ಕ್ರೀಡಾಪಟುಗಳ ದೊಡ್ಡ ದಂಡೇ ಕ್ರೀಡಾಂಗಣದಲ್ಲಿ ಸೇರುತ್ತದೆ. ಆದ್ದರಿಂದ ಹೊಸ ಕ್ರೀಡಾಂಗಣ ನಿರ್ಮಿಸಲು ಪ್ರಯತ್ನ ನಡೆದಿತ್ತು. ಅದರ ಫಲಶ್ರುತಿ ಎಂಬಂತೆ ಅಂತಾರಾಷ್ಟ್ರೀಯ ದರ್ಜೆಯ ಸ್ಟೇಡಿಯಂ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಕಬಡ್ಡಿಗೆ ಜಿಲ್ಲೆಯಲ್ಲಿ ಕ್ರೀಡಾಂಗಣವೇ ಇಲ್ಲ. ನೆಹರು ಮೈದಾನ ಅಥವಾ ಇನ್ನಾವುದಾದರೂ ಮೈದಾನದಲ್ಲಿ ಮ್ಯಾಟ್ ಅಥವಾ ಮಣ್ಣಿನಲ್ಲೇ ಸ್ಪರ್ಧೆ ಆಯೋಜನೆಗೊಳುತ್ತಿದೆ.

ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿ ಸರ್ಕಾರದಿಂದ ತಾತ್ವಿಕ ಅನುಮೋದನೆ ಸಿಕ್ಕಿ, ಡಿಪಿಆರ್ ಸಿದ್ಧಪಡಿಸಲಾಗುತ್ತಿತ್ತು. ಆದರೆ ಪ್ರಸ್ತುತ ಸಚಿವ ಯು.ಟಿ.ಖಾದರ್ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕ್ರೀಡಾಂಗಣ ನಿರ್ಮಿಸಿ ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಂಡಿದ್ದಾರೆ.
|ಪ್ರದೀಪ್ ಡಿಸೋಜ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ

ಕ್ರೀಡಾಂಗಣ ನಿರ್ಮಾಣ ಕುರಿತಂತೆ ನಿರಂತರವಾಗಿ ಫಾಲೋ ಅಪ್‌ನಲ್ಲಿದ್ದೇವೆ. ಮಂಗಳೂರಿಗೆ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆಯಿದೆ. ಶೀಘ್ರ ನಿರ್ಮಾಣವಾಗುವ ಮೂಲಕ ಕ್ರೀಡಾಪಟುಗಳಿಗೆ ಸಹಕಾರಿಯಾಗಬೇಗಿದೆ.
|ಪುರುಷೋತ್ತಮ ಪೂಜಾರಿ, ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ