ವಿರಾಜಪೇಟೆ : ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಕುಟುಂಬಗಳು ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿವೆ. ಕಾರಣ ಕುಟುಂಬಗಳನ್ನು ಒಂದೂಗೂಡಿಸುವ ಸಲುವಾಗಿ ಬಲಿಜ ನಾಯ್ಡು ಸಮಾಜವು ಕ್ರಿಕೆಟ್ ಪಂದ್ಯಾಟ ಆಯೋಜಿಸಿದೆ ಎಂದು ಸಮಾಜದ ಪ್ರಮುಖರಾದ ಟಿ.ಪಿ.ರಮೇಶ್ ಹೇಳಿದರು.
ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ 2ನೇ ವರ್ಷದ ಬಲಿಜ ಸಮಾಜದ ಕುಟುಂಬಗಳ ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೋಲು, ಗೆಲುವು ಜೀವನದ ಅಂಶ. ಸೋತವರು ಗೆಲ್ಲಬೇಕು. ಗೆದ್ದವರು ಸೋಲಬೇಕು. ಆಟದಲ್ಲಿ ಆಸಕ್ತಿಯನ್ನಿಟ್ಟು ಎಲ್ಲರೂ ಒಂದಾಗಿ ಕ್ರೀಡಾಕೂಟವನ್ನು ಯಶಸ್ವಿಯಾಗಿಸಬೇಕು. ಇನ್ನು ಮುಂದೆಯು ಇದೇ ರೀತಿ ವಿವಿಧ ಕ್ರೀಡಾಕೂಟಗಳು ನಡೆಯಬೇಕು ಮತ್ತು ಸಮಾಜದ ಎಲ್ಲ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದರು.
ಉದ್ಯಮಿ ರೋಹಿತ್ ಆನಂದ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಜನಾಂಗಗಳು ಕ್ರೀಡೆಗಳನ್ನು ಆಯೋಜಿಸುತ್ತಿದ್ದು, ನಮ್ಮ ಜನಾಂಗವು ಕ್ರೀಡಾಕೂಟವನ್ನು ಆಯೋಜಿಸಿದೆ. ಮೂರನೇ ಆವೃತ್ತಿಯನ್ನು ಇನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಅಧ್ಯಕ್ಷ ಶ್ರೀನಿವಾಸ್ ಲೋಕನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ನ ಉಪಾಧ್ಯಕ್ಷ ಟಿ.ಜಿ. ಹರ್ಷ, ಬಲಿಜ ಸಮಾಜದ ಪ್ರಮುಖರಾದ ಗಣೇಶ್ ಎಲ್.ಐ.ಸಿ. ಶ್ರೀನಿವಾಸ್ ನಾಪೋಕ್ಲು, ವಿಜಯ ಕುಮಾರ್ ಸಿದ್ದಾಪುರ, ದೇವಯ್ಯ, ಕಾವೇರಪ್ಪ ಪೆರುಂಬಾಡಿ, ನವನೀತ್ ಕುಶಾಲನಗರ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು 8 ತಂಡಗಳು ಭಾಗವಹಿಸಿದ್ದವು. ನಾಲ್ಕು ತಂಡಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆದವು. ಸೆಮಿಫೈನಲ್ ಪಂದ್ಯಾವಳಿಯಲ್ಲಿ ಸ್ಪೋಟನ್ಸ್ ನಾಪೋಕ್ಲು ತಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು. ಬದಲಿಗೆ ಫ್ಯಾರ್ಸ್ ಪೆರುಂಬಾಡಿ 2.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿ ಫೈನಲ್ ಪ್ರವೇಶ ಪಡೆಯಿತು. ದ್ವಿತೀಯ ಸೆಮಿಫೈನಲ್ಸ್‌ನಲ್ಲಿ ಆರ್‌ಸಿಬಿ ಬೈಲುಕುಪ್ಪೆ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಕೊಡಗು ಯೂತ್ ವಾರಿಯರ್ಸ್ ತಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಸೋಲು ಅನುಭವಿಸಿತು. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಬೈಲುಕುಪ್ಪೆ ಮತ್ತು ಪೆರುಂಬಾಡಿ ಫ್ಯಾಂರ್ಸ್ ತಂಡಗಳ ಮಧ್ಯೆ ಹಣಾಹಣಿ ನಡೆಯಿತು. ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಬೈಲುಕುಪ್ಪೆ ತಂಡ ನಿಗದಿತ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 43 ರನ್ ಗಳಸಿತು. 44 ರನ್ ಗುರಿ ಬೆನ್ನಟ್ಟಿದ ಪೆರುಂಬಾಡಿ ಫ್ಯಾಂರ್ಸ್ ತಂಡ ಬಿರುಸಿನ ಆಟ ಪ್ರದರ್ಶನ ಮಾಡಿತು. 3.3 ಓವರ್‌ಗಳಲ್ಲಿ ತನ್ನ ನಾಲ್ಕು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ವಿಜಯದ ಮಾಲೆಗೆ ಕೊರಳೊಡ್ಡಿತು.
ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 15,000 ರೂ. ನಗದು, ದ್ವಿತೀಯ ತಂಡಕ್ಕೆ ಟ್ರೋಫಿ ಮತ್ತು 10,000 ರೂ. ನಗದು ನೀಡಲಾಯಿತು.
ಕೊಡಗು ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಟಿ.ಪಿ.ಚೇತನ್, ಟಿ.ಜಿ.ವಿನೋದ್.ಟಿ.ವಿ. ತೇಜಸ್, ಕಾರ್ತಿಕ್, ಕೆ.ಪದ್ಮನಾಭ, ಬಲಿಜ ಸಮಾಜದ ಪ್ರಮುಖರು, ಸಮಾಜ ಬಾಂಧವರು, ಮಹಿಳೆಯರು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.
