ಮುಧೋಳ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಶಿಕ್ಷಣದ ಪ್ರಮುಖ ಅಂಗಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅಭಿಪ್ರಾಯಪಟ್ಟರು.
ಸ್ಥಳೀಯ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಾರದಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ, ಪ್ರತಿಭಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅತಿ ಅಗತ್ಯವಿದೆ ಎಂದರು.
ಯಡಹಳ್ಳಿಯ ಅಡವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನಮ್ಮ ಸಾಧನೆ ನೀಲಿ ಶಾಯಿಯಿಂದ ಬರೆಯುವ ಪೆನ್ನು ಹಸಿರು ಶಾಹಿವರೆಗೆ ತಲುಪಬೇಕಿದೆ ಎಂದರು.
ನಿವೃತ್ತ ಡಿಡಿಪಿಐ ಎಂ.ಜಿ. ದಾಸರ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೆ, ಕ್ರೀಡಾ ಮತ್ತು ಕಲೆ-ಸಾಂಸ್ಕೃತಿಕ ಕ್ಷೇತ್ರವೂ ಅಭಿವೃದ್ಧಿ ಸಾಧಿಸುತ್ತಿದೆ. ಈ ಎರಡು ಕ್ಷೇತ್ರಗಳು ಬೆಳವಣಿಗೆಯಾಗಬೇಕಾದರೆ ಶಾಲೆ-ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಬಿ.ಜಿ. ಕೆರಕಲಮಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ಕ್ಷೇತ್ರದ ಉನ್ನತಿಗಾಗಿ ಪೋಷಕರು ಹಾಗೂ ಶಿಕ್ಷಕರು ಸಹಕರಿಸಬೇಕು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತಮ್ಮ ತಮ್ಮ ಪಾಲಿನ ಪಾತ್ರವನ್ನು ಪ್ರಾಮಾಣಿಕ, ಜವಾಬ್ದಾರಿಯುತವಾಗಿ ನಿರ್ವಹಿಸಿದರೆ ಶಿಕ್ಷಣ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದರು.
ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಮಾತನಾಡಿದರು. ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ವಿ. ದಾಸರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಗಳಖೋಡದ ಶ್ರೀ ಶರಣ ಬಸವರಾಜ ಶಾಸೀಗಳು, ನಗರಸಭೆ ಸದಸ್ಯ ಸಂತೋಷ ಪಾಲೋಜಿ, ಶ್ರೀಕಾಂತ ಬಶೆಟ್ಟಿ, ಬಿ.ಎಚ್. ಉಪ್ಪಾರ, ಎ.ಪಿ. ಸಾವಂತ, ನಿರ್ದೇಶಕ ಶಂಕರ ಕಿತ್ತೂರ ಇದ್ದರು. ಪಾರ್ವತಿ ಸಿಂಗಾಡಿ ನಿರೂಪಿಸಿದರು. ಎಂ.ಬಿ. ಗಡ್ಡಿ ವಂದಿಸಿದರು.
ಸರ್ಕಾರ ಮಾಡುವ ಶಿಕ್ಷಣದ ಕಾರ್ಯಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಹಲವಾರು ವರ್ಷಗಳಿಂದ ಅನುದಾನರಹಿತ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸೂಕ್ತ ಭದ್ರತೆ ಒದಗಿಸಲು ಸರ್ಕಾರ ಶಾಲೆ-ಕಾಲೇಜುಗಳಿಗೆ ಅನುದಾನ ನೀಡಬೇಕು. ಮುಧೋಳ ನಗರದಲ್ಲಿ ಇಂದು ಪಿಯು ಶಿಕ್ಷಣ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ. ಎಚ್.ಆರ್. ನಿರಾಣಿ, ಎಂಎಲ್‌ಸಿ