ದಲಿತರ ಕೇರಿಗಳಿಗಿನ್ನು ಹೈಟೆಕ್ ಸ್ವರೂಪ

ಬಾಬುರಾವ ಯಡ್ರಾಮಿ ಕಲಬುರಗಿ
ದಲಿತರು ವಾಸಿಸುವ ಕೇರಿಗಳು ಇನ್ಮುಂದೆ ಹೈಟೆಕ್ ಸ್ವರೂಪ ಪಡೆಯಲಿವೆ. ಕಲಬುರಗಿ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸವಿರುವ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಮಾದರಿಯಾಗಿಸಲು `ಪ್ರಗತಿ ಕಾಲನಿ’ ಮತ್ತು `ಸೇವಾಲಾಲ ಪ್ರಗತಿ ತಾಂಡಾ’ ಎಂಬ ಹೊಸ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆ ರೂಪಿಸಿದೆ.
ಬಹುಕೋಟಿ ವೆಚ್ಚದ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಡಿ ಇರಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇರುವ ಬಡಾವಣೆಗಳ ಸಮಗ್ರ ಅಭಿವೃದ್ಧಿಯ ಬಹುದಿನಗಳ ಕನಸು ಹಾಗೂ ಬೇಡಿಕೆಯನ್ನು ಪ್ರಗತಿ ಕಾಲನಿ ಯೋಜನೆ ಸಾಕಾರಗೊಳಿಸಲಿದೆ.
ಈ ಯೋಜನೆ ಪರಿಣಾಮಕಾರಿ ಅನುಷ್ಠಾನದ ಮೂಲಕ ಎಸ್ಸಿ-ಎಸ್ಟಿ ಬಡಾವಣೆಗಳ ಸ್ವರೂಪವನ್ನೇ ಬದಲಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 202.50 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಗೊಳಿಸಿ ಕಾರ್ಯಗತಗೊಳಿಸುವ ಕೆಲಸವನ್ನು ಸರ್ಕಾರ ಸದ್ದಿಲ್ಲದೆ ಶುರುವಿಟ್ಟಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಹೆಚ್ಚು ವಾಸಿಸುವ ಕಾಲನಿಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆ, ಒಳಚರಂಡಿ, ಸಂಪರ್ಕ ರಸ್ತೆ, ಅಂಗನವಾಡಿಗಳ ನಿರ್ಮಾಣ, ಅಗತ್ಯವಿರುವ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹೀಗೆ ಹಲವು ಕೆಲಸಗಳು ಇದರಡಿ ಆಗಲಿವೆ. ಇದರಿಂದಾಗಿ ದಲಿತ ಕೇರಿಗಳೆಂದರೆ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಮುಂದಿನ ದಿನಗಳಲ್ಲಿ ಇಲ್ಲವಾಗಲಿದೆ.
ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪಂಗಡ ಉಪ ಯೋಜನೆಯಡಿ ಪರಿಶಿಷ್ಟರ ಕಾಲನಿಗಳಲ್ಲಿ ಏಕಕಾಲಕ್ಕೆ ಸಮಗ್ರ ಸುಧಾರಣೆ ಕೈಗೆತ್ತಿಕೊಳ್ಳಲು ಈ ಯೋಜನೆಯಿಂದ ಸಾಧ್ಯವಾಗಲಿದೆ. ಮೂಲಸೌಲಭ್ಯ ಕಾಮಗಾರಿಗಳನ್ನು ನಿಗದಿತ ಸಮಯಕ್ಕನುಗುಣ ಅನುಷ್ಠಾನಗೊಳಿಸಲು ಅಧಿಕಾರಿಗಳನ್ನು ಹೊಣೆಯಾಗಿಸುವ ಅವಕಾಶವಿದೆ. ಹೀಗಾಗಿ ಯೋಜನೆ ಸಾಕಾರಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಪ್ರತಿ ಬಡಾವಣೆಗೆ 50 ಲಕ್ಷದಿಂದ 3 ಕೋಟಿ ರೂ. ವೆಚ್ಚ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸಿರುವ ಬಡಾವಣೆಗಳನ್ನು ಪಕ್ಕಾ ಮಾದರಿಯಾಗಿಸಲು ಜಾರಿಗೊಳಿಸಿರುವ ಪ್ರಗತಿ ಕಾಲನಿ ಕಾರ್ಯಕ್ರಮದಡಿ ಪ್ರತಿ ಬಡಾವಣೆಗೆ 50 ಲಕ್ಷದಿಂದ 3 ಕೋಟಿ ರೂ. ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅಗತ್ಯವನ್ನು ನೋಡಿ ಅನುದಾನ ನೀಡಲಾಗುವುದು. ಪರಿಶಿಷ್ಟರ ಕಾಲನಿಗಳಿಂದ ಗ್ರಾಮದ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಿಸಲಾಗುವುದು. ಇನ್ನು ಬಂಜಾರ ಸಮುದಾಯದವರಿರುವ ತಾಂಡಾಗಳನ್ನು ಸಹ ಇದೇ ಯೋಜನೆಯಡಿ ಸೇವಾಲಾಲ್ ಪ್ರಗತಿ ತಾಂಡಾ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇರುವ ಬಡಾವಣೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಗತಿ ಕಾಲನಿ ಮತ್ತು ಸೇವಾಲಾಲ್ ಪ್ರಗತಿ ತಾಂಡಾ ಯೋಜನೆ ಅನುಷ್ಠಾನಗೊಳಿಸಲು ಮೊದಲ ಹಂತದಲ್ಲಿ 202.5 ಕೋಟಿ ರೂ. ಬಿಡುಗಡೆಗೊಂಡಿದೆ. ಆಯಾ ಕ್ಷೇತ್ರದ ಶಾಸಕರ ಜತೆ ಚರ್ಚಿಸಿ ಪ್ರಸ್ತಾವನೆ ಪಡೆದು ಅಭಿವೃದ್ಧಿ ಕೆಲಸ ಆರಂಭಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
| ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ