ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಪ್ರಪಂಚದ ಮೊದಲ ಏಕತೆಯ ಆಧ್ಯಾತ್ಮಿಕ ಕೇಂದ್ರ ಸ್ಥಾಪನೆಗೆ ಶೀಘ್ರದಲ್ಲೇ ಅಡಿಗಲ್ಲು ಬೀಳಲಿದೆ.
ಅಮೆರಿಕಾದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಹಲ್ಲೇಗೆರೆ ಮೂರ್ತಿ ಅವರ ಕನಸಿನ ಮದರ್ ಆಫ್ ಅರ್ಥ್ ಆಧ್ಯಾತ್ಮಿಕ ಕೇಂದ್ರವನ್ನು ತಮ್ಮ ಹುಟ್ಟೂರಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿವೇಕ್ ತಂದೆ ಹಲ್ಲೇಗೆರೆ ಮೂರ್ತಿ ಅವರ ಸ್ಕೋಪ್ ಫೌಂಡೇಷನ್‌ನಿಂದ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯಕ್ಕೆ ಭೂಮಿಪೂಜೆ ನೆರವೇರುವ ಸಾಧ್ಯತೆ ಇದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರನ್ನು ಆಹ್ವಾನಿಸಲು ತಯಾರಿ ನಡೆಸಲಾಗುತ್ತಿದೆ. ಇದಲ್ಲದೆ ಎಂಟು ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಯೋಗ ಮತ್ತು ಧ್ಯಾನ ಸಾತ್ವಿಕ ಕೇಂದ್ರದ ಶಂಕುಸ್ಥಾಪನೆಗೆ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಆಹ್ವಾನಿಸಲು ಯೋಜನೆ ರೂಪಿಸಲಾಗಿದೆ.
ಏನಿದು ವಿಶೇಷ ಕೇಂದ್ರ?: ಏಕತೆಯ ಸಂಕೇತ ಎಂದೇ ಕರೆಯಲಾಗುತ್ತಿರುವ ಯೋಜನೆಯು ಪ್ರಪಂಚದಲ್ಲೇ ಮೊದಲನೆಯದಾಗಿದೆ ಎನ್ನಲಾಗುತ್ತಿದೆ. ಏಕೆಂದರೆ ಜಗತ್ತಿನ ಯಾವುದೇ ಭಾಗದಿಂದ ಯಾವುದೇ ವ್ಯಕ್ತಿ ಇದರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಸಂಬಂಧ ಹೊಂದಬಹುದಾಗಿದೆ. 100 ಕೋಟಿ ರೂ ವೆಚ್ಚದಲ್ಲಿ 12 ಎಕರೆ ಭೂಮಿಯಲ್ಲಿ ಮದರ್ ಆಫ್ ಅರ್ಥ್ ನಿರ್ಮಾಣವಾಗಲಿದೆ. ಪ್ರಮುಖವಾಗಿ ಯೋಜನೆಯಲ್ಲಿ 11 ಅಡಿ ಎತ್ತರದ ಮದರ್ ಆಫ್ ಅರ್ಥ್ ಅಂದರೆ ಭೂಮಿತಾಯಿಯ ಪ್ರತಿಮೆಯನ್ನು ಒಂದೇ ಬಂಡೆಯಿಂದ ಕೆತ್ತನೆ ಮಾಡಲಾಗುತ್ತಿದೆ. ಈ ಪ್ರತಿಮೆಯಲ್ಲಿ ನೀರು ಮತ್ತು ಅಲೆಗಳ ಚಿಹ್ನೆಗಳಿರುತ್ತವೆ. ಇದನ್ನು ನೀಲಿ ಗ್ರಾನೈಟ್ ಮತ್ತು ವೈಟ್ ಸ್ಟೋನ್‌ನಿಂದ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸುಭಾಷ್‌ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೆತ್ತನೆ ಮಾಡಿದ್ದ ಖ್ಯಾತ ಶಿಲ್ಪಿ ಯೋಗಿರಾಜ್ ಅವರನ್ನು ಸಂಪರ್ಕಿಸಿರುವ ಹಲ್ಲೆಗೆರೆ ಮೂರ್ತಿ ಈ ಯೋಜನೆಯಲ್ಲಿ ಕೆಲಸ ಮಾಡುವ ಸಂಬಂಧ ಚರ್ಚಿಸಿದ್ದಾರೆ. ಅಲ್ಲದೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಮುಖ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರನ್ನು ಸಹ ಸಂಪರ್ಕಿಸಿದ್ದಾರೆ. ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಸಾಕ್ರಟೀಸ್‌ನಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗಿನ 64 ದಾರ್ಶನಿಕರ ಪ್ರತಿಮೆಗಳು ಇರಲಿವೆ.
ಕೇಂದ್ರ ಸ್ಥಾಪನೆ ಸಂಬಂಧ 13 ದೇಶಗಳಲ್ಲಿರುವ ಪ್ರತಿಷ್ಠಾನದ ಸ್ವಯಂ ಸೇವಕರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ ಡಿಸೆಂಬರ್ ಅಂತ್ಯದ ವೇಳೆಗೆ ಭೂಮಿಪೂಜೆ ಸಮಾರಂಭ ನಡೆಸಲು ತಯಾರಿ ನಡೆಸಿದ್ದು, ಬರಾಕ್ ಒಬಾಮಾ ಮತ್ತು ಕುಟುಂಬ ಸಾಕ್ಷಿಯಾಗಲಿದೆ. ಈ ಸಂಬಂಧ ಬರಾಕ್ ಒಬಾಮಾ ಅವರ ದಿನಾಂಕಕ್ಕೆ ಕಾಯಲಾಗುತ್ತಿದೆ. ಅಂತೆಯೇ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಗಮಿಸಬಹುದು. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಇನ್ನು ಮದರ್ ಆಫ್ ಅರ್ಥ್ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ವಾಕಥಾನ್ ಕಾರ್ಯಕ್ರಮವನ್ನು ಸೆ.10ರಂದು ವಾಷಿಂಗ್ಟನ್ ಡಿಸಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಯುಎಸ್‌ನ ಪ್ರಥಮ ಮಹಿಳೆ ಜಿಲ್ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚಾಲನೆ ನೀಡಲಿದ್ದಾರೆ. ಮಾತ್ರವಲ್ಲದೆ ವಿದೇಶದ ಬೇರೆ ಬೇರೆ ನಗರಗಳಲ್ಲಿಯೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.