ಪೈಲಟ್​ಗೆ ಅನಾರೋಗ್ಯ ಪ್ರಯಾಣಿಕರು ಸುಸ್ತು!

ಮಂಗಳೂರು: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮತ್ತೊಂದು ಎಡವಟ್ಟಿನಿಂದಾಗಿ ಸುದ್ದಿಯಲ್ಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ ದುಬೈಗೆ ತೆರಳಬೇಕಿದ್ದ ಎಸ್​ಜಿ 59 ವಿಮಾನ ಬುಧವಾರ ಸಂಜೆ 5 ಗಂಟೆಗೆ ಹೊರಟಿತು. ಪೈಲಟ್​ಗೆ ದಿಢೀರ್ ಕಾಡಿದ ಅನಾರೋಗ್ಯದಿಂದಾಗಿ ವಿಮಾನ ಹೊರಡದೆ 188 ಪ್ರಯಾಣಿಕರು ಸತತ 17 ಗಂಟೆ ವಿಮಾನ ನಿಲ್ದಾಣ, ಖಾಸಗಿ ಹೋಟೆಲ್​ನಲ್ಲಿ ಅಡ್ಡಾಡಿ ಸುಸ್ತಾದರು.

ಪೈಲಟ್​ಗೆ ಮಲೇರಿಯಾ ಜ್ವರ ಕಾಡಿದ ಕಾರಣ ಮಂಗಳವಾರ ರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನದ ಸಂಚಾರವನ್ನು ಸಂಸ್ಥೆ ತಡೆ ಹಿಡಿಯಿತು. ಬಳಿಕ ಪ್ರಯಾಣವನ್ನು ಬೆಳಗ್ಗೆ 7.40ಕ್ಕೆ ಮರುನಿಗದಿಪಡಿಸಿ, ಪ್ರಯಾಣಿಕರಿಗೆ ನಗರದ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಕಲ್ಪಿಸಿತ್ತು. ಬೆಳಗ್ಗೆ 5 ಗಂಟೆಗೆ ಮತ್ತೆ ನಿಲ್ದಾಣಕ್ಕೆ ಪ್ರಯಾಣಿಕರು ಹೋದಾಗ ವಿಮಾನ ಹೊರಡಲು ಇನ್ನೇನು 10 ನಿಮಿಷ ಇದೆ ಎನ್ನುವಷ್ಟರಲ್ಲಿ

ಪರ್ಯಾಯ ಪೈಲಟ್ ಇಲ್ಲದಿದ್ದರಿಂದಾಗಿ ಆ ಸಂಚಾರವೂ ರದ್ದಾಯಿತು. ಕೊನೆಗೂ ಮಧ್ಯಾಹ್ನ 2 ಗಂಟೆಗೆ ಜೈಪುರದಿಂದ ಬೇರೆ ಪೈಲಟ್ ಆಗಮಿಸಿದ ಬಳಿಕ ಸಂಜೆ 5 ಗಂಟೆಗೆ ವಿಮಾನ ಪ್ರಯಾಣ ಬೆಳೆಸಿತು.

ಆಕ್ರೋಶ-ಪ್ರತಿಭಟನೆ: ದುಬೈಗೆ ತೆರಳಲು ಕರಾವಳಿಯ ವಿವಿಧೆಡೆಯಿಂದ, ಕೇರಳದ ಕಣ್ಣೂರು, ಕಾಸರಗೋಡಿನಿಂದ ಮಂಗಳವಾರ ರಾತ್ರಿ 9 ಗಂಟೆಗೇ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು, ವಿಮಾನವೇರಲು ಬೋರ್ಡಿಂಗ್ ಪಾಸ್ ಕೂಡ ಪಡೆದಾಗಿತ್ತು. ಇನ್ನೇನು ಹೊರಡಲು ಸಿದ್ಧರಾಗಬೇಕು ಎನ್ನುವಷ್ಟರಲ್ಲಿ ವಿಮಾನ ರದ್ದಾಗಿರುವ ಪ್ರಕಟಣೆ ಮೈಕ್ ಮೂಲಕ ಕೇಳಿಸಿದೆ. ಕಾರಣ ಏನೆಂದು ಕೇಳಿದರೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಗೊತ್ತಿರಲಿಲ್ಲ. ಕೆಲವು ಪ್ರಯಾಣಿಕರು ರಾತ್ರಿ ಊಟ ಕೂಡ ಮಾಡಿರಲಿಲ್ಲ. 30 ಮಹಿಳೆಯರು, ಅಷ್ಟೇ ಮಕ್ಕಳೂ ಇದ್ದರು. ಊಟ ಕೇಳಿದಾಗ ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಪ್ರತಿಭಟನೆಯೂ ನಡೆಯಿತು. ಕೊನೆಗೆ ಸಂಸ್ಥೆಯಿಂದ ಸಿಕ್ಕಿದ್ದು ಒಂದು ಬಾಟಲ್ ನೀರು, ಒಂದು ಬ್ರೆಡ್ ಮಾತ್ರ!

ಪ್ರಯಾಣಿಕರಲ್ಲಿ ಆತಂಕ

ತಾನು ರೋಗಿಯೊಬ್ಬರನ್ನು ಕೊಚ್ಚಿನ್​ಗೆ ಬಿಟ್ಟು ಅಲ್ಲಿಂದ ಮಂಗಳೂರಿಗೆ ಬಂದಿದ್ದೇನೆ. ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ರಿಪೋರ್ಟ್ ಮಾಡಿ ಇನ್ನೊಬ್ಬ ರೋಗಿಯನ್ನು ಹೈದರಾಬಾದ್​ಗೆ ಕರೆದುಕೊಂಡು ಹೋಗಬೇಕಿತ್ತು. ರಾತ್ರಿ ವಿಮಾನ ರದ್ದಾದಾಗ ಎರಡನೇ ಶಿಫ್ಟ್​ಗೆ ಬರುವುದಾಗಿ ತಿಳಿಸಿದ್ದೆ. ಆದರೆ ಬೆಳಗ್ಗೆ ಮತ್ತೆ ವಿಮಾನ ತಡೆಹಿಡಿಯಲಾಗಿದೆ. ಇದು ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಆಸ್ಪತ್ರೆಯಲ್ಲಿ ನಾನು ಹೇಳುವುದನ್ನು ನಂಬುತ್ತಿಲ್ಲ ಎಂದು ವಿಜಯವಾಣಿ ಜತೆ ಮಾತನಾಡಿದ ಸೌದಿಯ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿರುವ ಅಭಿಲಾಷ್ ಆತಂಕ ವ್ಯಕ್ತಪಡಿಸಿದ್ದಾರೆ.

ತಾನು 27 ವರ್ಷದಿಂದ ವಿಮಾನದಲ್ಲಿ ದುಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ. ಈ ರೀತಿ ಎಂದೂ ಆಗಿಲ್ಲ. ಪ್ರಯಾಣಿಕರನ್ನು ಸ್ಪೈಸ್ ಸಂಸ್ಥೆ ಸಿಬ್ಬಂದಿ ಕೆಟ್ಟದಾಗಿ ನಡೆಸಿಕೊಂಡಿದೆ. ಸಂಸ್ಥೆಯಲ್ಲಿ ಬದಲಿ ಪೈಲಟ್ ವ್ಯವಸ್ಥೆ ಇಲ್ಲ. ಮಹಿಳೆಯರು-ಮಕ್ಕಳು ಊಟ, ನಿದ್ದೆ ಇಲ್ಲದೆ ಹೋಟೆಲ್-ನಿಲ್ದಾಣ ಎಂದು ಅಲೆದಾಡುವುದೇ ಆಯಿತು ಎಂದವರು ಕಾಸರಗೋಡು ನೀಲೇಶ್ವರದ ಅಬ್ದುಲ್ ರಜಾಕ್. ಕಾಸರಗೋಡಿನ ಅಶ್ರಫ್, ಕಣ್ಣೂರಿನ ಹನೀಫ್, ಉಚ್ಚಿಲದ ನವಾಝå್ ಕೂಡ ಸ್ಪೈಸ್​ಜೆಟ್ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ

ರಾತ್ರಿ ವಿಮಾನ ರದ್ದಾದ ಬಳಿಕ ಕೆಲವು ಪ್ರಯಾಣಿಕರು ನಿಲ್ದಾಣದಲ್ಲೇ ಉಳಿದರೆ, ಸುಮಾರು 75 ಮಂದಿಗೆ ನಗರದ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ ಬಸ್​ನಲ್ಲಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಹೋಟೆಲ್​ಗೆ ಬಂದ ಪ್ರಯಾಣಿಕರು, 5 ಗಂಟೆ ವೇಳೆಗೆ ಮತ್ತೆ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಬೆಳಗ್ಗೆಯೂ ವಿಮಾನ ಪ್ರಯಾಣ ಸಾಧ್ಯವಾಗದಿರುವುದರಿಂದ 10 ಗಂಟೆ ವೇಳೆಗೆ ವಿಮಾನ ನಿಲ್ದಾಣದಿಂದ ಮತ್ತೆ ಖಾಸಗಿ ಹೋಟೆಲ್​ಗೆ ಕರೆತಂದು ಬಿಡಲಾಗಿದೆ. ಈ ನಡುವೆ ಹಲವರು ತಮ್ಮ ಪ್ರಯಾಣ ರದ್ದು ಮಾಡಿದ್ದಾರೆ.

ಸಂಸ್ಥೆ ವಿಷಾದ

ಪೈಲಟ್ ಅನಾರೋಗ್ಯದಿಂದ ಪ್ರಯಾಣಿಕರಿಗೆ ಉಂಟಾದ ಅನನುಕೂಲಕ್ಕೆ ಸ್ಪೈಸ್ ಜೆಟ್ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿಮಾನ ಹಾರಾಟ ಸಮಯ ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸಹಪ್ರಯಾಣಿಕ ವೈದ್ಯರೊಬ್ಬರು ದುಬೈನಲ್ಲಿ ಬುಧವಾರ ಬೆಳಗ್ಗೆ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಇನ್ನೊಬ್ಬರ ವೀಸಾ ಅವಧಿ ಆ.3ರಂದು ಕೊನೆಯಾಗುತ್ತದೆ. 24 ಗಂಟೆ ಮೊದಲು ನವೀಕರಿಸದಿದ್ದರೆ, ಕಾನೂನು ವಿರೋಧಿಯಾಗುತ್ತದೆ. ಅವರೂ ಈಗ ಅತಂತ್ರರಾಗಿದ್ದಾರೆ.

| ಉಣ್ಣಿಕೃಷ್ಣನ್, ಪ್ರಯಾಣಿಕ

ನನಗೆ ಆರೋಗ್ಯ ಸಮಸ್ಯೆಯಿದೆ. ಬೆಳಗ್ಗೆಯೂ ವಿಮಾನ ರದ್ದಾಗಿರುವ ವಿಷಯ ತಿಳಿದು ಎದೆ ನೋವು ಬಂದಿತ್ತು. ಆಸ್ಪತ್ರೆಗೆ ಕಳುಹಿಸಿ ಎಂದರೆ ಸಂಸ್ಥೆ ಸ್ಪಂದಿಸಲಿಲ್ಲ. ಒಂದೂವರೆ ಗಂಟೆ ತಡವಾಗಿ ಕಾರು ಕಳುಹಿಸಿದ್ದಾರೆ. ದುಬೈನಲ್ಲಿ ಉತ್ತಮ ಉದ್ಯೋಗದಲ್ಲಿರುವ ನಮ್ಮನ್ನು ಇಲ್ಲಿ ಭಿಕ್ಷುಕರ ರೀತಿ ನಡೆಸಿಕೊಂಡಿದ್ದಾರೆ.

| ಸುರಭಿ, ಪ್ರಯಾಣಿಕ