ಕಾರ್ಕಳ ನ್ಯಾಯಾಲಯ ಕಟ್ಟಡ ಕಾಮಗಾರಿ ಚುರುಕು

ಆರ್.ಬಿ. ಜಗದೀಶ್, ಕಾರ್ಕಳ
ಕಾರ್ಕಳ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಗಂಟೆಯೊಂದಕ್ಕೆ 21 ಘನ ಮೀಟರ್ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. 2 ವರ್ಷ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಕರಾರು ಇದ್ದರೂ, ಒಂದೇ ವರ್ಷದಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬಹುದು ಎಂಬ ನಿರೀಕ್ಷೆ ಮೂಡಿದೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬೆಳ್ವಾಯಿ ನಜೀರ್ ಸಾಹೇಬ್ ಅವರ ಮುತುವರ್ಜಿಯಿಂದಾಗಿ ಕಾರ್ಕಳದಲ್ಲಿ ನ್ಯಾಯಾಲಯ ನೂತನ ಕಟ್ಟಡಕ್ಕೆ ರೂಪುರೇಷೆ ಸಿದ್ಧಗೊಂಡಿದೆ. ಇದಕ್ಕಾಗಿ ನ್ಯಾಯಾಲಯ ಕಟ್ಟಡಗಳ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿವೆ. 3350 ಚದರ ಮೀಟರ್ ವಿಸ್ತಾರವುಳ್ಳ ಈ ಕಟ್ಟಡದಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತು ಒಳಗೊಳ್ಳಲಿದೆ. ನಾಲ್ಕು ನ್ಯಾಯಾಲಯಗಳು ಕಾರ್ಯನಿರ್ವಹಿಸುವಂತಹ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣಗೊಳ್ಳಲಿದೆ. 1004.04 ಚದರ ಮೀಟರ್ ವಿಸ್ತಾರದಲ್ಲಿ ನ್ಯಾಯಾಲಯದ ಹಳೇ ಕಟ್ಟಡ ಇದ್ದು, ಕೆಲವೇ ತಿಂಗಳ ಅವಧಿಯಲ್ಲಿ ಅದು ನೆಲಸಮಗೊಳ್ಳಲಿದೆ. ನೂತನ ಕಟ್ಟಡ 1.65 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ.

ಕಟ್ಟಡದ ವ್ಯವಸ್ಥೆಗಳೇನು?: ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಕಾರಾಗೃಹ, ಭದ್ರತಾ ಕೊಠಡಿ, ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ, ನ್ಯಾಯಾಧೀಶರ ಕಚೇರಿ, ತಾಯಿ-ಮಗುವಿನ ಕೊಠಡಿ, ಲಿಫ್ಟ್, ಜನರೇಟರ್, ಬೋರ್‌ವೆಲ್, ಶುದ್ಧ ಕುಡಿಯುವ ನೀರಿನ ಘಟಕ, ರೆಕಾರ್ಡ್ ರೂಮ್, ಶೌಚಗೃಹ, ನ್ಯಾಯಾಲಯ ಹೊರಾಂಗಣದಲ್ಲಿ ಡಾಂಬರು ಕಾಮಗಾರಿ, ವಾಹನ ನಿಲುಗಡೆ ವ್ಯವಸ್ಥೆ, ಹೂದೋಟ, ವಿಶ್ರಾಂತಿ ಕೊಠಡಿಗಳನ್ನು ಒಳಗೊಂಡಿರುತ್ತದೆ.

ಅಹೋರಾತ್ರಿ ಕಾಮಗಾರಿ: ಹೊಂಡ ತೆಗೆದು ತಳಪಾಯ ಕಾಂಕ್ರೀಟ್ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. 80 ಮಂದಿ ಕಾರ್ಮಿಕರು ಈ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ 100 ಮಂದಿ ನುರಿತ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಲಿದ್ದಾರೆ. ಆ ಮೂಲಕ ಅಹೋರಾತ್ರಿ ಕಾಮಗಾರಿ ನಡೆಯಲಿದೆ.

ಗುಣಮಟ್ಟ ಪರೀಕ್ಷೆಗೆ ಪ್ರಯೋಗಾಲಯ: ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣ ಮೂಲಕ ಕಾಂಕ್ರೀಟ್ ಮಿಶ್ರಣ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟ ಪರೀಕ್ಷೆಗಾಗಿ ಇಲ್ಲಿ ಪ್ರಯೋಗಾಲಯ ಆರಂಭಿಸಲಾಗಿದೆ. ಕಾಂಕ್ರೀಟ್ ಮಿಶ್ರಣವನ್ನು ಇಟ್ಟಿಗೆಯ ಆಕಾರದಲ್ಲಿ ಸಿದ್ಧಪಡಿಸಿ ಅದರ ಮೇಲ್ಭಾಗದಲ್ಲಿ ದಿನಾಂಕ ಬರೆದು ಒಣಗಿಸಿ ಇಡಲಾಗುತ್ತದೆ. ಆ ನಂತರ ಸಿದ್ಧಪಡಿಸಿದ ಕಾಂಕ್ರೀಟ್ ಇಟ್ಟಿಗೆಯನ್ನು ನೀರಿನ ಟ್ಯಾಂಕ್‌ನಲ್ಲಿ ಒಂದು ವಾರ ಕಾಲ ನೆನೆಯಲು ಹಾಕಲಾಗುತ್ತದೆ. ಬಳಿಕ ಅದನ್ನು ಸಾಮಾರ್ಥ್ಯ ಯಂತ್ರೋಪಕರಣದಲ್ಲಿಟ್ಟು ಅದರ ಸಾಮಾರ್ಥ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ.
ಕಟ್ಟಡ ಕಾಮಗಾರಿಗೆ ಬಳಸಲಾಗುವ ಪರಿಕರಗಳನ್ನು ಗುಣಮಟ್ಟವನ್ನು ಕೂಡ ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಾಮಗಾರಿ ವೀಕ್ಷಣೆಗಾಗಿ ಸರ್ಕಾರಿ ಮಟ್ಟದ ಗುಣಮಟ್ಟ ನಿಯಂತ್ರಣಾಧಿಕಾರಿಗಳು ಆಗಿಂದಾಗ್ಗೆ ಕಾಮಗಾರಿ ನಡೆಯುವ ಜಾಗಕ್ಕೆ ಆಗಮಿಸಿ ಗುಣಮಟ್ಟ ಪರಿಶೀಲಿಸುತ್ತಾರೆ.