ಪಾಂಡವಪುರ: ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಶನಿವಾರ ರೈತಸಂಘ, ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಹಾಗೂ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸು ಹಂತ ತಲುಪಿದ ಪ್ರಸಂಗ ನಡೆಯಿತು.
ಶನಿವಾರ ಸುದ್ದಿಗೋಷ್ಠಿ ಕರೆದಿದ್ದ ರೈತಸಂಘ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು, ಚಿಕ್ಕಾಡೆ ಗ್ರಾಮದಲ್ಲಿ ಪಿಡಬ್ಲುೃಡಿ ವತಿಯಿಂದ 6.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದು ತೀರಾ ಕಳಪೆಯಾಗಿದೆ. ಅಲ್ಲದೆ ಶಾಸಕ ಸಿ.ಎಸ್.ಪುಟ್ಟರಾಜು ಗ್ರಾಮವನ್ನು ಇಬ್ಭಾಗ ಮಾಡಿ ಗ್ರಾಮದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಸ್ತೆ ನಿರ್ಮಾಣಕ್ಕೆ ನಿಗದಿಯಾಗಿರುವ ಜಾಗವನ್ನು ಬಿಟ್ಟು ಅಕ್ರಮವಾಗಿ ರೈತರ ಜಮೀನಿನ ಮಧ್ಯೆದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದನ್ನು ಪ್ರಶ್ನಿಸಿದರೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರು ಏಕವಚನದಲ್ಲಿ ಧಮಕಿ ಹಾಕುತ್ತಾರೆ ಎಂದು ದೂರಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಪ್ರೇಮಾ ಅವರ ಜತೆ ಸ್ಥಳಕ್ಕಾಗಮಿಸಿದ ಜೆಡಿಎಸ್ ಸದಸ್ಯರು ಮತ್ತು ಮುಖಂಡರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಗ್ರಾಪಂ ಮಾಜಿ ಅಧ್ಯಕ್ಷೆ ಸಾಕಮ್ಮ, ಸದಸ್ಯರಾದ ರಘು, ಮಂಗಳಗೌರಮ್ಮ, ರವಿ, ಪ್ರಕಾಶ್, ಹಾಲಿ ಅಧ್ಯಕ್ಷೆ ಪ್ರೇಮಮ್ಮ, ಚಂದ್ರಶೇಖರ್, ದೀಪಕ್ ಇದ್ದರು.