ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಂಗಳವಾರ ಮಕರ ಸಂಕ್ರಾತಿ ಹಾಗೂ ಧನುರ್ಮಾಸ ಸಮಾಪ್ತಿ ಹಿನ್ನೆಲೆ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಸನ್ನಿಧಿಯನ್ನು ವಿವಿಧ ಪುಷ್ಪ, ತಳೀರು ತೋರಣ ಹಾಗೂ ವಿದ್ಯುತ್ ದೀಪದಿಂದ ಅಲಂಕಾರಗೊಳಿಸಲಾಗಿತ್ತು. ಬೆಳಗ್ಗೆ 4.30ರ ವೇಳೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಸ್ವಾಮಿಗೆ ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಧೂಪ, ದೀಪದಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಈ ಮೂಲಕ ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಉತ್ಸವ ಮೂರ್ತಿಗಳ ಮೆರವಣಿಗೆ: ವಿಶೇಷ ಪೂಜೆ ನೆರವೇರಿಸಿದ ಬಳಿಕ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಅರ್ಚಕರು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಸ್ವಾಮಿಯ ಉತ್ಸವ ಮೂರ್ತಿಯ ಜತೆಗೆ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವ ಮೂರ್ತಿಯನ್ನು ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ದೇಗುಲದ ಸುತ್ತ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಾದಪ್ಪನಿಗೆ ಜಯಘೋಷ ಮೊಳಗಿದವು.
ಸಂಕ್ರಾಂತಿ ಹಬ್ಬ ಹಾಗೂ ಧನುರ್ಮಾಸ ಸಮಾಪ್ತಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹುಲಿ, ರುದ್ರಾಕ್ಷಿ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಮಾಡುವ ಮೂಲಕ ಉತ್ಸವದಲ್ಲಿ ಭಾಗಿಯಾಗಿದ್ದರು. ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಈ ವೇಳೆ ಉಘೇ ಮಾದಪ್ಪ ಉಘೇ, ಜೈಮಹತ್ ಮಲೆಯಾ ಎಂಬಿತ್ಯಾದಿ ಜಯಘೋಷಗಳನ್ನು ಮೊಳಗಿಸಿ ಭಕ್ತಿ ಭಾವ ಮೆರೆದರು. ಇನ್ನು ಕೆಲ ಭಕ್ತರು, ಮುಡಿಸೇವೆ, ಉರುಳು ಸೇವೆ, ರಜಾ ಸೇವೆ ಹಾಗೂ ಪಂಜಿಯನ್ನು ಸೇವೆಯನ್ನು ನೆರವೇರಿಸಿ ಹರಕೆ ತೀರಿಸಿದರು. ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಮಾದಪ್ಪನ ಕೃಪೆಗೆ ಪಾತ್ರರಾದರು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿತ್ತು.