ನವದಂಪತಿಗಳಿಂದ ಚಾಮರಾಜೇಶ್ವರನಿಗೆ ವಿಶೇಷ ಪೂಜೆ

ಚಾಮರಾಜನಗರ: ಆಷಾಢ ಮಾಸದ ರಥೋತ್ಸವ ನಡೆಯದ ಹಿನ್ನೆಲೆ ಮಂಗಳವಾರ ನಗರದ ಚಾಮರಾಜೇಶ್ವರ ದೇವಸ್ಥಾನಕ್ಕೆ ನವ ದಂಪತಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮರಾಜೇಶ್ವರ ರಥೋತ್ಸವ ನೆರವೇರುತ್ತದೆ. ರಥೋತ್ಸವದಲ್ಲಿ ಪ್ರಮುಖವಾಗಿ ಹೊಸದಾಗಿ ಮದುವೆಯಾದ ದಂಪತಿಗಳು ತೇರಿಗೆ ಹಣ್ಣು, ಜವನ ಎಸೆಯುವುದು ವಾಡಿಕೆ. ಆದರೆ ಕೆಲ ವರ್ಷಗಳಿಂದ ದುರಸ್ತಿಗೊಂಡಿರುವ ರಥದ ರಿಪೇರಿ ಕಾರ್ಯ ನಡೆಯದ ಹಿನ್ನೆಲೆ ಈ ಬಾರಿಯೂ ರಥೋತ್ಸವ ರದ್ದುಗೊಂಡಿತು.

ರಥೋತ್ಸವ ಇಲ್ಲದಿದ್ದರೂ ದಂಪತಿಗಳು ಮಂಗಳವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು. ಇದರಿಂದ ದೇವಸ್ಥಾನದಲ್ಲಿ ಭಕ್ತರಿಗಿಂತ ಹೆಚ್ಚಾಗಿ ದಂಪತಿಗಳು ಕಂಡುಬಂದರು.

ಬೆಳಗ್ಗೆಯಿಂದಲೇ ಚಾಮರಾಜೇಶ್ವರನಿಗೆ ವಿವಿಧ ಅಭಿಷೇಕಗಳನ್ನು ಮಾಡಲಾಯಿತು. ನಂತರ ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನವ ದಂಪತಿಗಳು ದೇವಸ್ಥಾನದ ಹೊರಗೆ ಧೂಪ ಹಾಕಿ ನಂತರ ದೇವಸ್ಥಾನಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ನವ ದಂಪತಿಗಳಲ್ಲಿ ನಿರಾಸೆ: 2017ರ ಫೆಬ್ರವರಿಯಲ್ಲಿ ಕಿಡಿಗೇಡಿಯಿಂದ ಸುಟ್ಟು ಹೋದ ರಥವನ್ನು ಇಲ್ಲಿಯತನಕ ನಿರ್ಮಾಣ ಮಾಡಿಲ್ಲ. ಇದರಿಂದ 2017 ಹಾಗೂ 2018ರಲ್ಲಿ ಆಷಾಢ ರಥೋತ್ಸವ ನೆರವೇರಲಿಲ್ಲ. ಈ ಬಾರಿಯೂ ರಥೋತ್ಸವ ನಡೆಯದ ಹಿನ್ನೆಲೆಯಲ್ಲಿ ನವದಂಪತಿಗಳು ನಿರಾಸೆಯಿಂದಲೇ ಪೂಜೆ ಸಲ್ಲಿಸಿ ತೆರಳಿದರು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ದಂಪತಿಗಳು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗುರುಪೂರ್ಣಿಮೆ ಹಿನ್ನೆಲೆ ಭಕ್ತರ ಆಗಮನ: ಗುರು ಪೂರ್ಣಿಮೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮರಾಜೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನವದಂಪತಿಗಳಲ್ಲದೆ, ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ವೀರಭದ್ರೇಶ್ವರಸ್ವಾಮಿ, ಕೊಳದ ಗಣಪತಿ ದೇವಸ್ಥಾನ ಸೇರಿ ಇತರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

Leave a Reply

Your email address will not be published. Required fields are marked *