ಸರ್ಜಿಕಲ್ ದಾಳಿಯ ಉರಿಯೊಳಗೆ..

2016 ಸೆ. 29ರಂದು ಭಾರತೀಯ ಸೇನೆಯ ಪ್ಯಾರಾ ಎಸ್​ಎಫ್ ಕಮಾಂಡೋ ಪಡೆ, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿದ್ದ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿ ಬಂದಿತ್ತು. ಸರ್ಜಿಕಲ್ ಸ್ಟ್ರೈಕ್ ಎಂದೇ ಕರೆಸಿಕೊಂಡಿದ್ದ ಆ ದಾಳಿಗೆ ಪಾಕ್ ವಿರುದ್ಧ ಭಾರತೀಯ ಸೇನೆ ತನ್ನ ಪ್ರತಿಕಾರ ತೀರಿಸಿಕೊಂಡಿತ್ತು. ಆ ದಾಳಿಯನ್ನೇ ಆಧರಿಸಿ ತಯಾರಾದ ‘ಉರಿ-ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಇಂದು (ಜ. 11) ತೆರೆಕಂಡಿದೆ.

2016ರಲ್ಲಿ ಉರಿ ದಾಳಿ ನಡೆದ ಬಳಿಕ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾದವು. ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವಂತೆ ಒತ್ತಡಗಳು ಎದುರಾದವು. ಫವಾದ್ ಖಾನ್ ಅಭಿನಯದ ‘ಖುಬ್​ಸೂರತ್’ ಚಿತ್ರದ ವಿರುದ್ಧವೂ ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲ ಬೆಳವಣಿಗೆ ನೋಡುತ್ತಿದ್ದಾಗ ಉರಿ ಘಟನೆಯನ್ನೇ ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ನಿರ್ದೇಶಕ ಆದಿತ್ಯ ಧಾರ್​ಗೆ ಬಂದಿತ್ತು. ‘ಸತತ ಆರು ತಿಂಗಳ ಕಾಲ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ಕಲೆಹಾಕಿದೆ. ಸಿನಿಮಾ ಮಾಡುವುದಕ್ಕಿಂತ ಸಂಬಂಧಪಟ್ಟ ಮಾಹಿತಿ ಕಲೆ ಹಾಕುವುದೇ ಸವಾಲಿನ ಕೆಲಸವಾಗಿತ್ತು. ಯಾಕೆಂದರೆ, ಎಲ್ಲ ಮಾಹಿತಿಗಳು ಗೌಪ್ಯವಾಗಿದ್ದರಿಂದ ಸತ್ಯಕ್ಕೆ ಚ್ಯುತಿ ಬಾರದಂತೆ ಮಾಹಿತಿ ಸಂಗ್ರಹಿಸಲಾಯಿತು. ಬಳಿಕ ಕಲಾವಿದರ ಆಯ್ಕೆ, ತರಬೇತಿ ಕೆಲಸಗಳು ಶುರುವಾದವು’ ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಆದಿತ್ಯ.

‘ಉರಿ’ಯಲ್ಲಿನ ಪ್ರಮುಖಾಂಶಗಳು: ಭಾರತೀಯ ಸೈನಿಕರ ‘ಸರ್ಜಿಕಲ್ ಸ್ಟ್ರೈಕ್’ಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿತ್ತು. ಮಾಧ್ಯಮಗಳಲ್ಲೂ ಸೇನೆಯ ದಿಟ್ಟತನ ಕೊಂಡಾಡಲಾಗಿತ್ತು. ಆದರೆ, ಆ ಸೀಮಿತ ದಾಳಿಯ ರೂವಾರಿ ಯಾರು? ದಾಳಿಗಾಗಿ ಏನೆಲ್ಲ ಯೋಜನೆಗಳನ್ನು ಹಾಕಲಾಗಿತ್ತು? ಯೋಜನೆಗಾಗಿ ತಂಡ ಹೇಗಿರಬೇಕು? ಯಾವ ಪ್ರದೇಶದಿಂದ ದಾಳಿ ಮಾಡಬೇಕು? ದಾಳಿಗೂ ಮುನ್ನ ಎದುರಾದ ಆಂತರಿಕ ಸಮಸ್ಯೆಗಳೇನು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿರಲಿಲ್ಲ. ಗೊತ್ತಿರದ ಈ ಎಲ್ಲ ವಿಷಯಗಳನ್ನು ಕಲೆಹಾಕಿ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ನೈಜತೆಯ ಜತೆಗೆ ಕಾಲ್ಪನಿಕ ಅಂಶಗಳನ್ನೂ ಮಿಶ್ರಣ ಮಾಡಲಾಗಿದೆ ಎಂಬುದು ನಿರ್ದೇಶಕರ ಹೇಳಿಕೆ.

ಸೇನೆಯಿಂದಲೇ ಚಿತ್ರತಂಡಕ್ಕೆ ತರಬೇತಿ: ‘ಉರಿ- ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ಕಥೆ ಸೇನೆಗೆ ಸಂಬಂಧಿಸಿದ್ದರಿಂದ ಪ್ರತಿ ಕಲಾವಿದರಿಗೂ ವಿಶೇಷ ತರಬೇತಿಯನ್ನು ನೀಡಲಾಗಿತ್ತು. ಮುಂಬೈನ ಸೇನಾ ತರಬೇತಿ ಶಾಲೆಯಲ್ಲಿ ಎರಡು ತಿಂಗಳ ಕಾಲ ಚಿತ್ರದ ನಾಯಕ ವಿಕ್ಕಿ ಕೌಶಾಲ್, ಯಾಮಿ ಗೌತಮ್ ಮೋಹಿತ್ ರೈನಾ, ಕೀರ್ತಿ ಕುಲ್ಹಾರಿ ಸೇರಿ ಹಲವು ಕಲಾವಿದರು ಕಟ್ಟು ನಿಟ್ಟಿನ ಟ್ರೇನಿಂಗ್​ನಲ್ಲಿ ಪಾಲ್ಗೊಂಡಿದ್ದರು. ಆ ತರಬೇತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ವಿಕ್ಕಿ, ‘ನಿಜಕ್ಕೂ ಸೈನಿಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತರಬೇತಿ ಸಮಯದಲ್ಲಿ ತಿಳಿದುಕೊಂಡೆ, ಮುಂಬೈನ ಕ್ಯಾಂಪ್​ವೊಂದರಲ್ಲಿ ಎರಡು ತಿಂಗಳ ತರಬೇತಿ ಆಯೋಜಿಸಲಾಗಿತ್ತು. ಅಲ್ಲಿನ ಕಮಾಂಡೋಗಳೇ ನಮಗೆ ಟ್ರೇನಿಂಗ್ ನೀಡುತ್ತಿದ್ದರು. ಗನ್ ಹಿಡಿದುಕೊಳ್ಳುವ ರೀತಿಯಿಂದ ಹಿಡಿದು, ನಡೆಯುವ ಶೈಲಿ, ಜಿಗಿಯುವುದು, ಮೊಣಕೈ ನೆಲಕ್ಕೆ ತಾಗಿಸಿ ಮುನ್ನುಗ್ಗುವುದು, ಹತ್ತಾರು ಕೆಜಿ ತೂಕದ ಮದ್ದು-ಗುಂಡುಗಳನ್ನು ಹೊತ್ತು ಸಾಗುವುದು ಸೇರಿ ಹಲವು ಬಗೆಯ ತರಬೇತಿ ಸಿಕ್ಕಿತು. ನಿಜಕ್ಕೂ ಆ ಸಮಯ ನಮ್ಮ ಪಾಲಿಗೆ ಸವಾಲಿನಿಂದ ಕೂಡಿತ್ತು’ ಎಂದು ನೆನಪು ಮಾಡಿಕೊಳ್ಳುತ್ತಾರೆ. ಇದೆಲ್ಲವನ್ನೂ ಹೊರತುಪಡಿಸಿ ಆರು ತಿಂಗಳಿಂದಲೇ ಚಿತ್ರದ ಸಲುವಾಗಿ ತೂಕ ಹೆಚ್ಚಿಸಿಕೊಂಡು, ಕೆಲ ಆರ್ವಿು ಅಧಿಕಾರಿಗಳ ಜತೆಗೂ ವಿಕ್ಕಿ ರ್ಚಚಿಸಿದ್ದರು.

ನಿರ್ದೇಶಕ ಆದಿತ್ಯ ಧಾರ್ ಯಾರು?: ವಿಧು ವಿನೋದ್ ಚೋಪ್ರಾ, ರೋಹನ್ ಸಿಪ್ಪಿ, ವಿಶಾಲ್ ಭಾರದ್ವಾಜ್ ಸೇರಿ ಹಲವು ನಿರ್ದೇಶಕರ ಬಳಿಕ ಸಹಾಯಕರಾಗಿ ಕೆಲಸಮಾಡಿದ್ದ ಆದಿತ್ಯ, ಸಾಹಿತ್ಯ, ಸಂಭಾಷಣೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ‘ಉರಿ’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಮೊದಲ ಯತ್ನದಲ್ಲಿಯೇ ನೈಜ ಘಟನೆಯನ್ನು ಆಯ್ದುಕೊಂಡಿರುವ ಆದಿತ್ಯ, ಪಾತ್ರಗಳ ಆಯ್ಕೆಯಲ್ಲಿಯೂ ಅಷ್ಟೇ ಕಾಳಜಿ ವಹಿಸಿದ್ದಾರೆ. ನರೇಂದ್ರ ಮೋದಿಯಾಗಿ ರಜಿತ್ ಕಪೂರ್, ಅಜಿತ್ ದೋವಲ್ ಪಾತ್ರದಲ್ಲಿ ಪರೇಶ್ ರಾವಲ್ ನಟಿಸಿದ್ದಾರೆ. ಇನ್ನುಳಿದಂತೆ ಮನೋಹರ್ ಪರಿಕ್ಕರ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಪಾತ್ರಗಳೂ ತೆರೆಮೇಲೆ ಕಾಣಿಸಿಕೊಳ್ಳಲಿವೆ. ಯಾಮಿ ಗೌತಮ್ ಗುಪ್ತಚರ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ.

ಸೆ.29ಕ್ಕೆ ಫಿಕ್ಸ್ ಆಗಿತ್ತು ಸೀಮಿತ ದಾಳಿ

2016ರರ ಸೆ.19ರಂದು ಸೇನಾ ಶಿಬಿರದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ವಿಶ್ರಾಂತಿಯಲ್ಲಿದ್ದ ಭಾರತೀಯ ಸೇನೆಯ ಮೇಲೆ ಉಗ್ರರು ದಾಳಿ ಮಾಡಿ 19 ಯೋಧರನ್ನು ಹತ್ಯೆ ಮಾಡಿದ್ದರು. ಸೈನಿಕರ ಸಾವಿನ ಹಿನ್ನೆಲೆಯಲ್ಲಿ ರೂಪುಗೊಂಡಿದ್ದೇ ‘ಸರ್ಜಿಕಲ್ ಸ್ಟ್ರೈಕ್’. ಪ್ರಧಾನಿ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿ ಹಲವು ಅಧಿಕಾರಿಗಳ ನೇತೃತ್ವದಲ್ಲಿ ದಾಳಿಯ ರೂಪುರೇಷೆ ಸಿದ್ಧವಾಯಿತು. ಸೆ.29ಕ್ಕೆ ದಾಳಿಗೆ ಮುಹೂರ್ತವೂ ಫಿಕ್ಸ್ ಮಾಡಲಾಯಿತು. ರಾತ್ರಿ 12 ಗಂಟೆಗೆ ಶುರುವಾದ ದಾಳಿ ಮುಂಜಾನೆ 4.30ಕ್ಕೆ ಮುಕ್ತಾಯವಾಗಿತ್ತು. ಏಳು ಭಯೋತ್ಪಾದಕರ ಕ್ಯಾಂಪ್​ನಲ್ಲಿದ್ದ 38 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಸೇನೆಯ ಈ ಸಾಹಸ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು.

‘ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ’

‘ದೇಶಪ್ರೇಮ ಅಂತ ಬಂದಾಗ ಮೊದಲು ಕಣ್ಣಿಗೆ ಕಾಣಿಸುವುದೇ ಗಡಿಯಲ್ಲಿ ನಿಂತ ಸೈನಿಕರ ಶ್ರಮ. ಅಂಥ ಸೈನಿಕರ ಕೆಚ್ಚೆದೆಯ ದಾಳಿಯ ಸಿನಿಮಾದ ಅವಕಾಶ ಬಂದಾಗ, ಖುಷಿಯಿಂದಲೇ ಒಪ್ಪಿಕೊಂಡೆ. ಸರ್ಜಿಕಲ್ ಸ್ಟ್ರೈಕ್ ಘಟನೆ ಬಗ್ಗೆ ಟಿವಿ ಮತ್ತು ಪತ್ರಿಕೆಗಳಲ್ಲಿ ಓದಿದ್ದೆ, ನೋಡಿದ್ದೆ. ಸೇನೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಸರ್ಕಾರವೂ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಅಂಥ ಕಥೆಯನ್ನು ಆಯ್ದುಕೊಂಡು ನೈಜ ಘಟನೆಗೆ ಎಲ್ಲಿಯೂ ಧಕ್ಕೆ ಆಗದಂತೆ ಆದಿತ್ಯ ಕಥೆ ಮಾಡಿದ್ದರು. ಚಿತ್ರದಲ್ಲಿ ಮೇಜರ್ ವಿಹಾನ್ ಶೆರ್​ಗಿಲ್ ಎಂಬ ಪಾತ್ರವನ್ನು ನಾನು ಮಾಡಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ವಿಕ್ಕಿ.