More

    ಹೆಚ್ಚು ಬೇಡಿಕೆಯಿರುವ ಸಿಎಫ್​ಎ; ಹೂಡಿಕೆ, ಆರ್ಥಿಕ ಕ್ಷೇತ್ರದಲ್ಲಿನ ನಿರ್ವಹಣೆ ಮತ್ತು ವಿಶ್ಲೆಷಣೆ ಕೋರ್ಸ್

    ಪಿಯುಸಿ ಮುಗಿದ ಮೇಲೆ ಏನು ಮಾಡಬೇಕು ಎಂಬ ಚಿಂತೆ ಹಲವರನ್ನು ಕಾಡುತ್ತಿರುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಷಯದ ಆಸಕ್ತ ವಿದ್ಯಾರ್ಥಿಗಳಿಗೆ ಇರುವ ಕೆಲವು ಕೋರ್ಸ್​ಗಳ ಪೈಕಿ ಸಿಎಫ್​ಎ ಕೂಡ ಒಂದು. ಬಹುಬೇಡಿಕೆ ಇರುವ ಈ ಕೋರ್ಸ್ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ (ಸಿಎಫ್​ಎ) ಹೂಡಿಕೆ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ನಿರ್ವಹಣೆ ಮತ್ತು ವಿಶ್ಲೆಷಣೆಗೆ ಸಂಬಂಧಿಸಿದ ಕೋರ್ಸ್. ಇದು ಹಣಕಾಸು ಉದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ವೃತ್ತಿಪರ ಕೋರ್ಸಗಳಲ್ಲಿ ಒಂದಾಗಿದೆ. ಇಂದಿನ ಕ್ರಿಯಾತ್ಮಕ ಜಾಗತಿಕ ಮಾರುಕಟ್ಟೆಯಲ್ಲಿ ಈ ಕೋರ್ಸ್ ಮಾಡಿಕೊಂಡಿರುವವರಿಗೆ ಸಾಕಷ್ಟು ಬೇಡಿಕೆಯಿದೆ. ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಕೋರ್ಸ್ ಇದಾಗಿರುವ ಕಾರಣ, ಜಗತ್ತಿನ ಯಾವುದೇ ದೇಶದಲ್ಲಿ ಕೆಲಸ ಗಿಟ್ಟಿಸಬಹುದಾಗಿದೆ.

    ವಾಣಿಜ್ಯ ಬ್ಯಾಂಕಿಂಗ್, ಹಣಕಾಸು ನಿರ್ವಹಣೆ, ಷೇರುಗಳ ಮೇಲಿನ ಹಣಕಾಸು ವಿಶ್ಲೇಷಣೆ, ಉತ್ಪನ್ನಗಳು ಇತ್ಯಾದಿಗಳಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಬಯಸುವರು ಸಿಎಫ್​ಎ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

    ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದಿರುವವರು ಈ ಕೋರ್ಸ್ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಭಾರತದಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ದೆಹಲಿ, ಪುಣೆ ಕೋಲ್ಕೊತಾ ಮತ್ತು ಚೆನ್ನೈಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯು ಪ್ರತಿ ವರ್ಷ ಜೂನ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತದೆ. ಪರೀಕ್ಷೆಗಳಿಗೆ ಹಾಜರಾಗುವ ಮೊದಲು ವಿವಿಧ ವಿಷಯಗಳ ಗ್ರಹಿಕೆಯನ್ನು ಬೆಳೆಸಿಕೊಳ್ಳಬೇಕು. ಸಿಎಫ್​ಎ ಕೋರ್ಸ್​ಗೆ ಸಂಬಂಧಿಸಿದಂತೆ ಅನೇಕ ತರಬೇತಿ ಸಂಸ್ಥೆಗಳು ನಡೆಸುವ ತರಗತಿಗಳಿಗೆ ಹಾಜರಾಗಬಹುದು.ಆನ್​ಲೈನ್ ಮೂಲಕವೂ , ತರಗತಿ ಲಭ್ಯ.

    ಮೂರು ಹಂತಗಳಲ್ಲಿ ಪರೀಕ್ಷೆ: ಸಿಎಫ್​ಎ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತದೆ. ಈ ಮೂರೂ ಹಂತಗಳಲ್ಲಿ ಅನುಕ್ರಮವಾಗಿ ಅರ್ಹತೆ ಪಡೆಯಬೇಕು. ಈ ಹಂತಗಳನ್ನು ಪೂರೈಸಿದ ನಂತರ ಸಿಎಫ್​ಎ ಸರ್ಟಿಫಿಕೇಷನ್ ದೊರೆಯುತ್ತದೆ.

    ಹಂತಗಳು ಹೀಗಿವೆ:

    ಮೊದಲ ಹಂತ- ಹಣಕಾಸು ವರದಿ, ವಿಶ್ಲೇಷಣೆ, ನೀತಿಶಾಸ್ತ್ರ, ಪರಿಮಾಣಾತ್ಮಕ ವಿಧಾನಗಳು, ಸ್ಥಿರ ಆದಾಯ ಮತ್ತು ಅರ್ಥಶಾಸ್ತ್ರದ ವಿಷಯಗಳನ್ನು; ಎರಡನೇ ಹಂತ- ಇಕ್ವಿಟಿ ಹೂಡಿಕೆ, ಹಣಕಾಸು ವರದಿ ಮತ್ತು ವಿಶ್ಲೇಷಣೆಯನ್ನು 3ನೇ ಹಂತ- ಪೋರ್ಟ್ ಫೋಲಿಯೋ, ನಿರ್ವಹಣೆ ಮತ್ತು ಸ್ಥಿರ ಆದಾಯ ಭದ್ರತೆಗಳನ್ನು ಒಳಗೊಂಡಿರುತ್ತದೆ. ಮೊದಲ ಹಂತದ ಪರೀಕ್ಷೆಗೆ ನೋಂದಾಯಿಸಲು ಪದವಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು. ಕಡೆಯ ವರ್ಷದ ಪದವಿಯಲ್ಲಿ ಓದುತ್ತಿರುವವರು ಕೂಡ ಮೊದಲ ಹಂತದ ಪರೀಕ್ಷೆಗೆ ನೊಂದಾಯಿಸಬಹುದು. ಎರಡನೆಯ ಹಂತದ ಪರೀಕ್ಷೆಯ ವೇಳೆಗೆ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ನಾಲ್ಕು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಅಥವಾ ಶಿಕ್ಷಣ ಮತ್ತು ವೃತ್ತಿ ಎರಡೂ ಸೇರಿ ಒಟ್ಟು ನಾಲ್ಕು ವರ್ಷಗಳ ಅನುಭವ ಇರಬೇಕು. ಹೆಚ್ಚಿನ ಮಾಹಿತಿಗೆ www.cfainstitute.org ವೆಬ್​ಸೈಟ್ ನೋಡಬಹುದು.

    ಆಕರ್ಷಕ ಸಂಬಳ

    ಸಿಎಫ್​ಎ ಸರ್ಟಿಫಿಕೇಷನ್ ಹೊಂದಿರುವವರು ಗೋಲ್ಡ್​ಮನ್ ಸ್ಯಾಕ್ಸ, ಜೆಪಿ ಮೋರ್ಗಾನ್, ನಾರ್ದರ್ನ್ ಟ್ರಸ್ಟ್ ಸೇರಿದಂತೆ ಪ್ರಸಿದ್ಧ ವಾಣಿಜ್ಯ ಬ್ಯಾಂಕುಗಳಲ್ಲಿ ಆಕರ್ಷಕ ಸಂಬಳದೊಂದಿಗೆ ಉದ್ಯೋಗ ಪಡೆಯಬಹುದಾಗಿದೆ.

    ವಾರ್ಷಿಕ ಸರಾಸರಿ 6 ಲಕ್ಷ ರೂ. ಸಂಬಳದ ಉದ್ಯೋಗ ಪಡೆಯಬಹುದಾಗಿದೆ ಮತ್ತು ಕೆಲವು ವರ್ಷಗಳ ಪೂರ್ವಾನುಭವ ಇದ್ದವರಿಗೆ ಸಂಬಳ ಜಾಸ್ತಿಯೇ ಸಿಗುತ್ತದೆ. ಉದಾಹರಣೆಗೆ ಏಳರಿಂದ ಎಂಟು ವರ್ಷಗಳ ಅನುಭವ ಹೊಂದಿರುವವರು ಸರಾಸರಿ ವಾರ್ಷಿಕ 12-18 ಲಕ್ಷ  ರೂ. ವೇತನ ಪಡೆಯಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts