ಹರೀಶ್ ಬೇಲೂರು ಬೆಂಗಳೂರು
ಅಬಕಾರಿ ಇಲಾಖೆಯ ಲಂಚಾವತಾರವನ್ನು ವಿಜಯವಾಣಿ ಬಯಲಿಗೆಳೆದ ಬೆನ್ನಲ್ಲೇ, ಮದ್ಯದಂಗಡಿಗಳ ಪರವಾನಗಿಯನ್ನು ಲಕ್ಷ ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿರುವ ಕುರಿತು ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮಂಜೂರಾಗದೆ ಉಳಿದ ಮದ್ಯದಂಗಡಿಗಳ ಲೈಸೆನ್ಸ್ ಕೊಡಿಸುವುದಾಗಿ ಹೇಳಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಆಪ್ತರು ಕಳೆದೊಂದು ವರ್ಷದಿಂದ ಲೈಸೆನ್ಸ್ ಮಾರಾಟ ದಂಧೆ ಆರಂಭಿಸಿದ್ದಾರೆಂಬುದು ಆರೋಪದ ತಿರುಳು.
ಲೈಸೆನ್ಸ್ ನಿಗದಿ ಹೇಗೆ?: ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ತಾಲೂಕು ಹಾಗೂ ನಗರ ಪ್ರದೇಶದ ಪ್ರತಿ 7,500 ಜನರಿಗೆ ಒಂದು ಸಿಎಲ್-2 ಹಾಗೂ 3,500 ಜನರಿಗೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಜನಕ್ಕೆ ಒಂದು ಸಿಎಲ್2 ಹಾಗೂ 7,500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ತಾಲೂಕಿನ ನಗರ ಪ್ರದೇಶಕ್ಕೆ ‘ಎ’ ಹಾಗೂ ಗ್ರಾಮೀಣ ಪ್ರದೇಶಕ್ಕೆ ‘ಬಿ’ ಎಂದು ಕೋಟಾ ನಿಗದಿಪಡಿಸಲಾಗಿತ್ತು. 1987ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ತಾಲೂಕಿಗೆ ಅಬಕಾರಿ ನಿಯಮ 12ರಂತೆ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಿಎಲ್2 ಕೋಟಾ ನಿಗದಿಯಾಗಿತ್ತು. ನಗರ ಪ್ರದೇಶಕ್ಕೆ 2,158 ಹಾಗೂ ಗ್ರಾಮೀಣ ಪ್ರದೇಶಕ್ಕೆ 2,048 ಸೇರಿ ಒಟ್ಟು 4,206 ಸಿಎಲ್2 ಅಂಗಡಿಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಇದೀಗ ನಗರ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸೇರಿ ಒಟ್ಟು 3,948 ಸಿಎಲ್-2 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.
ಹೆಚ್ಚುವರಿ ವೈನ್ಶಾಪ್ ರದ್ದಾಗಿಲ್ಲ: ಹಿಂದೆ ಸಿಎಲ್2 (ವೈನ್ಶಾಪ್) ಕೋಟಾದಡಿ ನಿಗದಿಕ್ಕಿಂತ ಹೆಚ್ಚುವರಿ ಮಂಜೂರಾಗಿದ್ದ 385 ವೈನ್ಶಾಪ್ ರದ್ದುಪಡಿಸುವಂತೆ ಸರ್ಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಅಬಕಾರಿ ಇಲಾಖೆ ಉಲ್ಲಂಘಿಸಿದೆ. ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ಶಾಪ್ಗಳನ್ನು 1987ರಲ್ಲಿ ನಿಗದಿಪಡಿಸಿ 1994ರಲ್ಲಿ ಸರ್ಕಾರ ರದ್ದುಪಡಿಸಿತ್ತು. 1999ರಲ್ಲಿ ಹೈಕೋರ್ಟ್ ಕೂಡ ಹೆಚ್ಚುವರಿ ಮಂಜೂರಾಗಿದ್ದ ಸಿಎಲ್2ವೈನ್ಶಾಪ್ ರದ್ದುಪಡಿಸುವಂತೆ ಆದೇಶಿಸಿತ್ತು. 2018ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ್ದರೂ ಇಲಾಖೆ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ.
1993ರಿಂದ ಲೈಸೆನ್ಸ್ ವಿತರಿಸಿಲ್ಲ: ರಾಜ್ಯದಲ್ಲಿ ಕ್ಲಬ್ (ಸಿಎಲ್4), ಸಿಎಲ್-7 (ಹೋಟೆಲ್ ಮತ್ತು ಗೃಹ), ವೈನ್ ಟ್ಯಾವರಿನ್, ವೈನ್ ಬೋಟಿಕ್, ಮೈಕ್ರೋ ಬ್ರಿವರಿ ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದನ್ನು ಈಗಾಗಲೇ ನಿಲ್ಲಿಸಲಾಗಿದೆ. ಸಿಎಲ್2 ಮತ್ತು ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್-9) ತೆರೆಯಲು ಹೊಸದಾಗಿ ಪರವಾನಗಿ ಕೊಡುವುದನ್ನೂ 1993ರಿಂದ ನಿಲ್ಲಿಸಲಾಗಿದೆ. ನಿಯಮದ ಪ್ರಕಾರ ಸಿಎಲ್-7 ತೆರೆಯಲು ಗ್ರಾಮೀಣ ಪ್ರದೇಶದಲ್ಲಿ 4.5 ಲಕ್ಷ ರೂ. ಹಾಗೂ ನಗರ ಪ್ರದೇಶದಲ್ಲಿ 8.5 ಲಕ್ಷ ರೂ. ಬಂಡವಾಳ ಬೇಕಾಗುತ್ತದೆ. ಮದ್ಯದಂಗಡಿ ತೆರೆಯಲು ಅರ್ಜಿ ಹಾಕುವುದರಿಂದ ಹಿಡಿದು ಅನುಮತಿ ಪಡೆಯುವರೆಗೆ ನಡೆಯುವ ಪ್ರಕ್ರಿಯೆಗೆ ಅಂದಾಜು 80 ಲಕ್ಷ ರೂ. ಬೇಕಿದೆ. ಒಂದು ವೇಳೆ ಅರ್ಜಿಯಲ್ಲಿ ಲೋಪ ಅಥವಾ ಬೇರೆ ಏನಾದರೂ ಸಮಸ್ಯೆ ಇದ್ದರೆ ಮತ್ತಷ್ಟು ಲಂಚ ನೀಡಬೇಕೆಂದು ಅಧಿಕಾರಿಗಳು ಪೀಡಿಸುತ್ತಾರೆ.
ಆಪ್ತರಿಂದ ವಸೂಲಿ?: ಕೆಲ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಕೋಟಾಕ್ಕಿಂತ ಹೆಚ್ಚು ಅಂಗಡಿಗಳಿದ್ದರೆ, ಕೆಲ ಜಿಲ್ಲೆಗಳಲ್ಲಿ ನಿಗದಿಪಡಿಸಿದ ಕೋಟಾಕ್ಕಿಂತ ಕಡಿಮೆ ಅಂಗಡಿಗಳಿವೆ. ವಿವಿಧ ಕಾರಣಗಳಿಂದ ಬಾಕಿ ಉಳಿದ 258 ಸಿಎಲ್2 ಶಾಪ್ಗಳನ್ನು ಕೋಟಾದಡಿ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಹಾಲಿ ಸಚಿವರು ಮತ್ತು ಅವರ ಆಪ್ತರ ಕಣ್ಣೀಗ ಕೋಟಾದಡಿ ಮಂಜೂರಾಗದೆ ಬಾಕಿ ಉಳಿದ ಲೈಸೆನ್ಸ್ ಮೇಲೆ ನೆಟ್ಟಿದೆ. ಹರಾಜಿನಂತೆ ಲೈಸೆನ್ಸ್ ಮಾರಾಟಕ್ಕೆ ಒಳಗೊಳಗೆ ಹುನ್ನಾರ ನಡೆಸುತ್ತಿದ್ದಾರೆ. ಕೆಲವರಂತೂ ತಮಗೇ ನೀಡುವಂತೆ ಸಚಿವರ ಆಪ್ತರಿಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ವ್ಯವಹಾರ ಕುದುರಿಸಿದ್ದಾರೆಂದು ಹೇಳಲಾಗ್ತಿದೆ.
ಆರೋಪಗಳೇನು?
- ಈಗಾಗಲೇ ಇಂತಿಷ್ಟು ಲೈಸೆನ್ಸ್ ಇಂಥವರಿಗೇ ಎಂದು ನಿಗದಿ
- ಒಳಗೊಳಗೆ ಹರಾಜು ಮೂಲಕ ಲೈಸೆನ್ಸ್ ಮಾರಾಟ ಪ್ಲಾ್ಯನ್
- ಈ ಅಕ್ರಮದಲ್ಲಿ ಇಲಾಖೆ ಉನ್ನತ ಅಧಿಕಾರಿಗಳೂ ಶಾಮೀಲು
- ಸನ್ನದುದಾರರು, ಅಧಿಕಾರಿಗಳಿಂದ ಹಣ ವಸೂಲಿ ದಂಧೆ
- ಅಧಿಕಾರಿಗಳ ಸಂಬಂಧಿಕರ ಹೆಸರಲ್ಲಿದೆ ಶೇ.20 ಮದ್ಯದಂಗಡಿ
- ಲೈಸೆನ್ಸ್ ಸೇಲ್ಗೆ ಅಧಿಕಾರಿಗಳ ಸಲಹೆ ಪಡೆದ ಸಚಿವರ ಆಪ್ತರು