ದಕ್ಷಿಣ ಕನ್ನಡ, ಉಡುಪಿಯಲ್ಲಿ ಕ್ರಿಸ್‌ಮಸ್ ಸಂಭ್ರಮಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ಕರಾವಳಿಯಾದ್ಯಂತ ಕ್ರಿಸ್‌ಮಸ್ ಮೊದಲ ದಿನವಾದ ಸೋಮವಾರವೇ ಹಬ್ಬದ ದಿನದ ಸಂಭ್ರಮ ತುಂಬಿದೆ.
ಮಧ್ಯರಾತ್ರಿಯಲ್ಲಿ ಯೇಸುವಿನ ಜನನ ಹಿನ್ನೆಲೆಯಲ್ಲಿ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಪ್ರಾರ್ಥನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರಿಸ್‌ಮಸ್ ಜಾಗರಣೆಯನ್ನೂ ಆಚರಿಸಿದರು.

ಸೋಮವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸು ಸ್ವಾಮಿಯ ಜನನವನ್ನು ಸ್ವಾಗತಿಸಿದರು.

ಚರ್ಚ್‌ಗಳು ವರ್ಣಮಯ ದೀಪಗಳಿಂದ ಜಗಮಗಿಸಿದರೆ, ಸಮುದಾಯದವರ ಮನೆ ಆವರಣದಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಮರಗಳಲ್ಲಿ, ಮನೆಗಳ ಮೂಲೆಗಳಲ್ಲಿ ವಿವಿಧ ಆಕಾರದ ಕ್ರಿಸ್‌ಮಸ್ ನಕ್ಷತ್ರಗಳು ಸಂಭ್ರಮಕ್ಕೆ ಹೆಚ್ಚಿನ ಮೆರಗು ನೀಡಿವೆ. ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರುಗಿದ ವಿಶೇಷ

ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ರಾತ್ರಿ ನಡೆದ ಸಂಭ್ರಮದ ಬಲಿಪೂಜೆಯಲ್ಲಿ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಸಂದೇಶ ನೀಡಿದರು. ಧರ್ಮಪ್ರಾಂತ್ಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್.ನೊರೊನ್ಹಾ, ಕೆಥೆಡ್ರಲ್‌ನ ಪ್ರಧಾನಗುರು ಜೆ.ಬಿ.ಕ್ರಾಸ್ತಾ ಮತ್ತು ಇತರ ಗುರುಗಳು ಪಾಲ್ಗೊಂಡಿದ್ದರು. ಬಲಿಪೂಜೆ ಬಳಿಕ ಕ್ರೈಸ್ತ ಬಾಂಧವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇದೇ ಸಂದರ್ಭ ಕೇಕ್ ವಿತರಿಸಲಾಯಿತು.

ಬಲ್ಮಠದಲ್ಲಿರುವ ಚರ್ಚ್ ಆ್ ಸೌತ್ ಇಂಡಿಯಾ (ಸಿಎಸ್‌ಐ) ಮಹಾ ದೇವಾಲಯದಲ್ಲಿ ಮತ್ತು ಇತರ ಸಿಎಸ್‌ಐ ದೇವಾಲಯಗಳಲ್ಲಿಯೂ ವಿಶೇಷ ಬಲಿಪೂಜೆಗಳು ನಡೆದವು.
ಮಂಗಳವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ನಡೆಯಲಿದೆ.

ಮನುಷ್ಯರಲ್ಲೇ ದೇವರನ್ನು ಕಾಣೋಣ: ಎಲ್ಲರ ಮನುಷ್ಯರ ಹೃದಯದಲ್ಲೇ ಭಗವಂತನನ್ನು ಕಾಣಬಹುದು. ಪರಸ್ಪರ ಪ್ರೀತಿ, ಕರುಣೆಯ ನಡವಳಿಕೆಯಿಂದ ಇದು ಸಾಧ್ಯವಾಗುವುದು. ದೇವರ ಸಾನ್ನಿಧ್ಯಕ್ಕಾಗಿ ಆಕಾಶಕ್ಕೆ ಏರಬೇಕಾಗಿಲ್ಲ. ಅಥವಾ ಇನ್ಯಾವುದೇ ಕಠಿಣ ಮಾರ್ಗ ತುಳಿಯಬೇಕಾಗಿಲ್ಲ ಎಂದು ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ ಸಂದೇಶ ನೀಡಿದರು.

ರೊಜಾರಿಯೋ ಕೆಥೆಡ್ರಲ್‌ನಲ್ಲಿ ರಾತ್ರಿ ಬಲಿಪೂಜೆ ನೆರವೇರಿಸುವ ಮೊದಲು ಮಾತನಾಡಿದರು. ಜಗತ್ತಿನೆಡೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ ತುಂಬಿದೆ. ಎಲ್ಲೆಡೆ ದೀಪಗಳು ಉರಿಯುತ್ತವೆ. ಇಂದು ಕ್ರಿಸ್ತ ಜನಿಸಿದ ದಿನ. ನಮ್ಮ ಜೀವನವನ್ನೇ ಮಾರ್ಪಾಡುಗೊಳಿಸಿದ ದಿನ. ಉತ್ತಮ ನಡವಳಿಕೆ ಮೂಲಕ ನಾವು ಎಲ್ಲರೂ ಭಗವಂತನ ಕೃಪೆಗೆ ಪಾತ್ರರಾಗೋಣ. ಜಗತ್ತನ್ನು ಇನ್ನಷ್ಟು ಸುಂದರಗೊಳಿಸೋಣ ಎಂದವರು ಹೇಳಿದರು.

ಉಡುಪಿ ಬಿಷಪ್ ಬಲಿಪೂಜೆ: ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ನಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆ ನೆರವೇರಿಸಿ ಹಬ್ಬದ ಸಂದೇಶ ನೀಡಿದರು.
ಜಿಲ್ಲೆಯ ಪ್ರಮುಖ ಚರ್ಚ್‌ಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ಡೆನಿಸ್ ಡೆಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಕುಂದಾಪುರ ಹೊಲಿ ರೋಸರಿ ಚರ್ಚ್‌ನಲ್ಲಿ ಸ್ಟ್ಯಾನಿ ತಾವ್ರೊ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಜಾರ್ಜ್ ಡಿಸೋಜ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆಯ ಬಲಿಪೂಜೆಗಳು ನಡೆದವು.

ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತರಿಗೆ ಕ್ರಿಸ್‌ಮಸ್ ಕೇಕ್ ವಿತರಣೆ ನಡೆಯಿತು. ಬಲಿಪೂಜೆಯ ಬಳಿಕ ಕ್ರೈಸ್ತರು ಪರಸ್ಪರ ಕ್ರಿಸ್‌ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.