ಏಕಾಗ್ರತೆ ಮೈಗೂಡಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಭಯಪಡದೇ, ತಾವು ಓದಿದ್ದನ್ನು ಸಮಾಧಾನ ಚಿತ್ತವಾಗಿ ಬರೆಯುವುದು ಹಾಗೂ ಏಕಾಗ್ರತೆ ಮೈಗೂಡಿಸಿಕೊಂಡಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ರಾಚಾರ್ಯ ಎಂ. ರಾಮಮೋಹನರಾವ ತಿಳಿಸಿದರು.

ಪಟ್ಟಣದ ಗುಮ್ಮನಹಳ್ಳಿ ರಸ್ತೆಯ ಸೋಮೇಶ್ವರ ಕೋಲ್ಡ್ ಸ್ಟೋರೇಜ್ ಆವರಣ ದಲ್ಲಿ ‘ವಿಜಯವಾಣಿ’ ಹಾಗೂ ಹಾವೇರಿಯ ಎಂಆರ್​ಎಂ ಪದವಿ ಪೂರ್ವ ಕಾಲೇಜ್ ಆಶ್ರಯದಲ್ಲಿ ಸೋಮವಾರ ಜರುಗಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಎದುರಾಗುವ ಭಯ ಹೋಗಲಾಡಿಸುವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರ್ಷಪೂರ್ತಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಸಮೀಪಿಸುತ್ತಿದ್ದಂತೆ ಭಯ, ಆತಂಕ ಶುರುವಾಗುತ್ತದೆ. ಇದನ್ನು ಹೋಗಲಾಡಿ ಸಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ. ಪರೀಕ್ಷೆ ಮುನ್ನ ನಿದ್ದೆಗೆಟ್ಟು ಓದುವುದು ಬೇಡ, ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು, 6 ತಾಸು ನಿದ್ದೆ ಮಾಡುವುದು ಉತ್ತಮ. ಮಿತ ಆಹಾರ, ದಿನಪೂರ್ತಿ ಕನಿಷ್ಠ 10 ಲೋಟ ನೀರು ಸೇವನೆ, ಗಾಳಿ, ಬೆಳಕು, ಸ್ವಚ್ಛವಾಗಿರುವ ಕೊಠಡಿಗಳಲ್ಲಿ ಅಧ್ಯಯನ ಮಾಡಬೇಕು ಎಂದರು.

ಪರೀಕ್ಷೆಯ ಹಿಂದಿನ ರಾತ್ರಿ ಹೆಚ್ಚು ಓದುವುದು, ತೀರಾ ಟೆನ್ಶನ್ ಮಾಡಿಕೊಳ್ಳುವುದು ಬೇಡ. ಒಂದು ಸಾರಿ ನಾಳೆಯ ವಿಷಯವನ್ನು ಮನನ ಮಾಡಿಕೊಂಡು, ಶಾಂತಚಿತ್ತ, ತಾಳ್ಮೆಯಿಂದ ಪರೀಕ್ಷೆ ಕೊಠಡಿಗೆ ಅರ್ಧ ಗಂಟೆ ಮುಂಚೆ ತೆರಳಿದರೆ ಒಳಿತು. ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕೊಡನೆ ಒತ್ತಡ ಮಾಡಿಕೊಳ್ಳದೇ ನಿಧಾನವಾಗಿ ಓದಿಕೊಂಡು, ಮನಸ್ಸನ್ನು ಹಗುರವಾಗಿಟ್ಟುಕೊಂಡು ಉತ್ತರ ಬರೆಯಬೇಕು. ನಮ್ಮ ಧ್ಯಾನ ನಮ್ಮ ಉತ್ತರ ಪತ್ರಿಕೆಯಲ್ಲಿ ಎಂಬ ಧ್ಯೇಯ ನಮ್ಮದಾಗಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ದಾನಪ್ಪ ಎಸ್. ಲಮಾಣಿ, ಬಿ.ಎಂ. ಉಮಾಪತಿ, ವಕೀಲ ಕುಬೇರಪ್ಪ ಚಿನಿವಾಲಕಟ್ಟೆ, ಇತರರು ಇದ್ದರು.

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ:ಪಟ್ಟಣದ ಲಯನ್ಸ್ ಪ್ರೌಢಶಾಲೆ, ಎಂಡಿಎಚ್ ಪ್ರೌಢಶಾಲೆ, ದೊಡ್ಡಗೌಡ್ರ ಪ್ರೌಢಶಾಲೆ, ನೂತನ ಪ್ರೌಢಶಾಲೆ, ಸೇಂಟ್ ಜಾನ್ ಪ್ರೌಢಶಾಲೆ ಸೇರಿ ವಿವಿಧ ಶಾಲೆಯ 200ಕ್ಕೂ ಹೆಚ್ಚು ಮಕ್ಕಳು ಹಾಗೂ ಪಾಲಕರು ಉಪನ್ಯಾಸದಲ್ಲಿ ಪಾಲ್ಗೊಂಡಿದ್ದರು.