ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ವಿಶೇಷ ಪ್ರಯತ್ನ 

ಹಾವೇರಿ: ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗಿರುವ ಸಾಧ್ಯತೆಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿಯೇ ಆರ್​ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದು, ನೀವೆಲ್ಲರೂ ಕೇಂದ್ರದ ಅಧೀನದಲ್ಲಿರುವ ಆರ್​ಬಿಐನಿಂದ ಅನುಮತಿ ಕೊಡಿಸುವ ಕೆಲಸ ಮಾಡಿ ಎಂದು ಸಹಕಾರ ಹಾಗೂ ಎಪಿಎಂಸಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

ಬ್ಯಾಡಗಿ ತಾಲೂಕು ಕಾಗಿನೆಲೆಯ ಕನಕ ಕಲಾ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಪತ್ತಿನ ಸಂಘಗಳ ಮಹಾಮಂಡಳ, ಕೆಸಿಸಿ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲೆಯ ಎಲ್ಲ ವಿವಿಧ ಸಹಕಾರ ಸಂಘಗಳ ಸೌಹಾರ್ದ ಸಹಕಾರಿಗಳ ಆಶ್ರಯದಲ್ಲಿ ಭಾನುವಾರ ಜರುಗಿದ 65ನೇ ಅಖಿಲ  ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಕೆನ್ನುವ ಬೇಡಿಕೆ ಸೂಕ್ತವಾಗಿದೆ. ಈ ಕ ಉರಿತು ಆರ್​ಬಿಐಗೆ ಶಿಫಾರಸು ಮಾಡುತ್ತೇವೆ. ಇದಾದ ನಂತರ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ ಪರಿಗಣಿಸುತ್ತೇವೆ. ಜಿಲ್ಲೆಯಲ್ಲಿ ಸಹಕಾರಿ ಭವನ ನಿರ್ವಣಕ್ಕೆ 25 ಲಕ್ಷ ರೂ.ಗಳ ಅನುದಾನವನ್ನು ಶೀಘ್ರದಲ್ಲಿಯೇ ಒದಗಿಸುತ್ತೇನೆ ಎಂದರು.

ಸಹಕಾರಿ ಕ್ಷೇತ್ರ ಜನ್ಮತಾಳಿದ ಅವಿಭಜಿತ ಧಾರವಾಡ ಜಿಲ್ಲೆ ವ್ಯಾಪ್ತಿಯ ಕೆಸಿಸಿ ಬ್ಯಾಂಕ್ ಅಷ್ಟೊಂದು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ತಿಳಿದುಬಂದಿದೆ. ಬೀದರ್​ನ ಡಿಸಿಸಿ ಬ್ಯಾಂಕ್​ನಿಂದ ಪ್ರತಿವರ್ಷ 800ರಿಂದ 900 ಕೋಟಿ ರೂ.ಗಳಷ್ಟು ಸಾಲ ನೀಡಲಾಗುತ್ತಿದೆ. ಆದರೆ, ಇಲ್ಲಿ ಅದರ ಪ್ರಯೋಜನವೇ ಸಿಗುತ್ತಿಲ್ಲ. ಇದಕ್ಕೆಲ್ಲ ಕಾರಣ ಕೆಸಿಸಿ ಬ್ಯಾಂಕ್. ಇದಕ್ಕಾಗಿ ಶೀಘ್ರದಲ್ಲಿಯೇ ಪ್ರತ್ಯೇಕವಾಗಿ ಕೆಸಿಸಿ ಬ್ಯಾಂಕ್​ನ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ಇಲ್ಲಿನ ಸಮಸ್ಯೆ ಕುರಿತು ಬ್ಯಾಂಕ್​ನವರು ಈವರೆಗೂ ನನ್ನ ಬಳಿ ಬಂದಿಯೇ ಇಲ್ಲ ಎಂದು ಕೆಸಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಕಾಗಿನೆಲೆ ಕನಕಗುರುಪೀಠದ ಕಿರಿಯ ಸ್ವಾಮೀಜಿ ಅಮೋಘಸಿದ್ಧಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಪ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ, ನಿರ್ದೇಶಕರಾದ ಮುತ್ತಣ್ಣ ಯಲಿಗಾರ, ಲಿಂಗರಾಜ ಚಪ್ಪರದಹಳ್ಳಿ, ಎನ್. ಚಂದ್ರಪ್ಪ, ಸಹಕಾರ ಇಲಾಖೆ ಉಪನಿಂಬಂಧಕಿ ಶಶಿಕಲಾ ಪಾಳೇದ ಇತರರಿದ್ದರು.

ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ ಸ್ವಾಗತಿಸಿದರು. ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ಎಸ್. ಕುಮ್ಮೂರ ನಿರೂಪಿಸಿದರು.

ನೌಕರರ ಸೇವಾ ಭದ್ರತೆಗೆ ಆದ್ಯತೆ: ಸಹಕಾರಿ ಬ್ಯಾಂಕ್​ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ಅದರ ಅಧ್ಯಯನಕ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿಯ ವರದಿಯ ನಂತರ ನೌಕರರ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ರೆಡಿಟ್ ಸೊಸೈಟಿಗಳ ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯ ಮಂಡಳಿ ರಚನೆಗೆ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ರ್ಚಚಿಸುತ್ತೇನೆ. ಪಿಕೆಪಿಎಸ್ ಸಹಕಾರಿ ಬ್ಯಾಂಕ್​ಗಳಲ್ಲಿನ ದೀರ್ಘಾವಧಿ ಸಾಲಮನ್ನಾದ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಆದರೆ, ಬಡ್ಡಿ ಮನ್ನಾ ವಿಚಾರ ಸಿಎಂ ಗಮನದಲ್ಲಿದ್ದು, ಅವರ ಜತೆಗೆ ರ್ಚಚಿಸುತ್ತೇನೆ ಎಂದು ಸಚಿವ ಕಾಶೆಂಪುರ ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ 6.88 ಲಕ್ಷ ರೈತರಿದ್ದಾರೆ. ಆದರೆ, ಕೆಸಿಸಿ ಬ್ಯಾಂಕ್​ನಿಂದ ಕೇವಲ 72 ಕೋಟಿ ರೂ. ಸಾಲ ವಿತರಣೆಯಾಗಿದೆ. ಅದರಲ್ಲಿ ಈಗಾಗಲೇ 20 ಸಾವಿರ ರೈತರ 70 ಕೋಟಿ ರೂ. ಸಾಲ ಮನ್ನಾ ಆಗಿದೆ. ಇನ್ನು 2 ಕೋಟಿ ರೂ.ಗಳಷ್ಟು ಸಾಲ ಮನ್ನಾ ಆದರೆ ಜಿಲ್ಲೆಯ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಇದರಿಂದ ಬಹಳಷ್ಟು ರೈತರಿಗೆ ಪ್ರಯೋಜನ ಸಿಗುತ್ತಿಲ್ಲ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ರೈತರನ್ನು ಸಹಕಾರಿ ವ್ಯಾಪ್ತಿಗೆ ತರುವ ಕೆಲಸವಾಗಬೇಕು

– ಬಂಡೆಪ್ಪ ಕಾಶೆಂಪುರ, ಸಹಕಾರ ಸಚಿವ