ಬೀದಿ ಶ್ವಾನ ಕೊರಳಿಗೆ ಮಿನುಗು ಪಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು

ನಗರದಲ್ಲಿ ರಾತ್ರಿ ವೇಳೆ ಬೀದಿ ನಾಯಿಗಳು, ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಕಾರಣ ವಾಹನ ಅಪಘಾತಗಳ ಸಂಖ್ಯೆ ಹೆಚ್ಚು. ಇದರಿಂದ ಸವಾರರಿಗಷ್ಟೇ ಅಲ್ಲ, ನಾಯಿಯ ಪ್ರಾಣಕ್ಕೂ ಕುತ್ತು ಬರುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಾಣಿ ಸಂರಕ್ಷಕ ತೌಸಿಫ್ ಬೀದಿ ನಾಯಿಗಳ ಕೊರಳಿಗೆ ರಿಫ್ಲೆಕ್ಟಿಂಗ್ ಬೆಲ್ಟ್ ಹಾಕುವ ನೂತನ ಕ್ರಮ ಕೈಗೊಂಡಿದ್ದಾರೆ.

ಬೀದಿನಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕಾರಣ ತಣ್ಣೀರುಬಾವಿ, ಬಿಜೈ, ಕೂಳೂರು, ಮೋರ್ಗನ್‌ಗೇಟ್ ಪ್ರದೇಶಗಳಲ್ಲಿ ಇಂತಹ ಅಪಘಾತಗಳು ಹೆಚ್ಚು. ಪ್ರಾಯೋಗಿಕ ನೆಲೆಯಲ್ಲಿ 50 ರಿಫ್ಲೆಕ್ಟರ್ ಬೆಲ್ಟ್‌ಗಳನ್ನು ನಾಯಿಗಳ ಕೊರಳಿಗೆ ಹಾಕಲಾಗಿದೆ.ಬೆಲ್ಟ್ ಹಾಕಿರುವ ಕಡೆ ಅಪಘಾತ ಸಂಖ್ಯೆ ಕಡಿಮೆಯಾಗಿದೆ. ಇನ್ನಷ್ಟು ನಾಯಿಗಳಿಗೆ ಅಳವಡಿಸುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮತ್ತೆ 100 ಬೆಲ್ಟ್‌ಗಳನ್ನು ತರಿಸಲಾಗಿದೆ. ಈ ಕಾರ್ಯವನ್ನು ಸದ್ಯ ಉಚಿತವಾಗಿಯೇ ಮಾಡುತ್ತಿದ್ದು, ಮುಂದೆ ಪ್ರಾಯೋಜಕರಿಂದ ಆರ್ಥಿಕ ನೆರವು ಪಡೆಯುವ ಯೋಚನೆಯಿದೆ ಎಂದು ತೌಸಿಫ್ ಹೇಳುತ್ತಾರೆ.

ನಾಯಿಗಳಿಗೂ ರಕ್ಷಣೆ: ಕೆಲವು ಪ್ರದೇಶದಲ್ಲಿ ಕೆಲ ಶ್ವಾನಪ್ರಿಯರು ತಾವು ಸಾಕಿ, ಸಲಹುತ್ತಿದ್ದ ನಾಯಿ ವಾಹನದಡಿಗೆ ಬಿದ್ದು ಸಾವನ್ನಪ್ಪಿರುವ ಉದಾಹರಣೆ ಇರುತ್ತವೆ. ಅಂಥವರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಅವರಿಂದಲೂ ನಾಯಿ ರಕ್ಷಣೆಗಾಗಿ ಬೆಲ್ಟ್‌ಗಳ ಬೇಡಿಕೆ ಬಂದಿದೆ. ವಿದೇಶದಿಂದ ಇದನ್ನು ತರಿಸಲಾಗಿದ್ದು ಪ್ರತಿ ಪಟ್ಟಿಗೆ 40 ರೂ.ವೆಚ್ಚ ತಗಲುತ್ತದೆ ಎಂದು ತೌಸಿಫ್ ಹೇಳಿದ್ದಾರೆ. ಮಂಗಳೂರಿನಲ್ಲಿ ಯುವಕನ ಈ ವಿನೂತನ ಪ್ರಯೋಗ ನೋಡಿ, ಉಡುಪಿಯಲ್ಲಿ ಬೀದಿ ನಾಯಿಗಳ ಸಂರಕ್ಷಣೆ ಮಾಡುತ್ತಿರುವ ಬಬಿತಾ ಎಂಬುವರು ಉಡುಪಿ ನಗರದ ಬೀದಿ ನಾಯಿಗಳಿಗೆ ಬಣ್ಣದ ಕೊರಳಪಟ್ಟಿ ಹಾಕಲು ಆಸಕ್ತಿ ವಹಿಸಿದ್ದಾರೆ.

ಏನಿದು ರಿಫ್ಲೆಕ್ಟರ್ ಬೆಲ್ಟ್?: ರಸ್ತೆ ಬದಿಯ ಕಂಬಗಳಿಗೆ ಅಂಟಿಸಿರುವ, ರಾತ್ರಿ ವೇಳೆ ಮಿನುಗುವ ಬಣ್ಣದ ಪಟ್ಟಿ ಮಾದರಿಯ ಬೆಲ್ಟ್ ಇದು. ರಾತ್ರಿ ಬೆಳಕು ಬಿದ್ದಾಗ ಬಣ್ಣದ ಪಟ್ಟಿ ಮಿನುಗುತ್ತದೆ, ದೂರದಿಂದಲೇ ಗೋಚರವಾಗುತ್ತದೆ. ನಾಯಿಗಳ ಕೊರಳ ಬೆಲ್ಟ್‌ನಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲಾಗಿದೆ. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣಗಳನ್ನು ಪ್ರತಿಫಲಿಸುವ ಕೊರಳ ಪಟ್ಟಿ ಶ್ವಾನದ ಅಂದ ಹೆಚ್ಚಿಸುತ್ತದೆ. ಈ ವಿನೂತನ ಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಯಾರಿವರು ತೌಸಿಫ್?: ತೌಸಿಫ್ ಅನಿಮಲ್ ಕೇರ್ ಟ್ರಸ್ಟ್‌ನ ಸಕ್ರಿಯ ಸದಸ್ಯ. ನಗರದಲ್ಲಿ ಹಾವು, ನಾಯಿ, ಪಕ್ಷಿ, ದನಗಳು ಗಾಯಗೊಂಡಿದ್ದರೆ ತಕ್ಷಣ ತಂಡದೊಂದಿಗೆ ಆಗಮಿಸಿ ಚಿಕಿತ್ಸೆ ನೀಡುತ್ತಾರೆ. ಬೀದಿ ನಾಯಿಗಳ ರಕ್ಷಣೆ ಮಾಡಿ ಶೆಲ್ಟರ್‌ನಲ್ಲಿ ಆರೈಕೆ ಮಾಡುತ್ತಾರೆ. ಕಳೆದ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಪ್ರವಾಹ ಬಂದ ಸಂದರ್ಭ ಸ್ಥಳಕ್ಕೆ ತಂಡದೊಂದಿಗೆ ಧಾವಿಸಿ ಹಲವು ಶ್ವಾನ, ದನಗಳನ್ನು ರಕ್ಷಿಸಿದ್ದರು.

ರಾತ್ರಿ ಬೀದಿನಾಯಿಗಳ ಚಲನವಲನ ತಿಳಿಯದೆ ಬೈಕ್ ಅಪಘಾತಗಳು ಸಂಭವಿಸುತ್ತವೆ. ಶ್ವಾನದ ಕೊರಳಿಗೆ ಅಳವಡಿಸಿರುವ ಪ್ರತಿಫಲಿಸುವ ಪಟ್ಟಿಯಿಂದ ವಾಹನ ಚಾಲಕ ದೂರದಿಂದಲೇ ಎಚ್ಚೆತ್ತುಕೊಳ್ಳಬಹುದು. ಪ್ರಾಯೋಜಕರ ಸಹಾಯ ಪಡೆದು ಇನ್ನಷ್ಟು ಬೀದಿನಾಯಿಗಳಿಗೆ ಕೊರಳ ಪಟ್ಟಿ ಅಳವಡಿಸಲಾಗುವುದು.
| ತೌಸಿಫ್, ಪ್ರಾಣಿ ಸಂರಕ್ಷಕ