ಮದ್ದೂರು; ತಾಲೂಕಿನಲ್ಲಿ ನಾಲೆಗಳು ಹಾಗೂ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿದ್ದು, ಸರ್ಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಹರ್ನವಮಿದೊಡ್ಡಿ ಸಮೀಪ ಅಚ್ಚುಕಟ್ಟು ವ್ಯಾಪ್ತಿಯ 24ನೇ ವಿತರಣಾ ನಾಲೆಯ 2ನೇ ಮೈನರ್ ಮತ್ತು 4ನೇ ಮೈನರ್ ನಾಲಾ (ಕಾಲುವೆ) ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಹಲವಾರು ಕಡೆಗಳಲ್ಲಿ ನಾಲೆಗಳು ಹಾಗೂ ರಸ್ತೆಗಳು ಅಭಿವೃದ್ಧಿಯಾಗಿರಲಿಲ್ಲ. ಈ ಬಗ್ಗೆ ಸ್ಥಳೀಯರು ಜನಸಂಪರ್ಕ ಸಭೆ ಮಾಡಿದಾಗ ನನ್ನ ಗಮನಕ್ಕೆ ತಂದಿದ್ದರು. ಅದನ್ನು ಪಟ್ಟಿ ಮಾಡಿಕೊಂಡು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಾಲೆಗಳು ಹಾಗೂ ರಸ್ತೆ ಅಭಿವೃದ್ಧಿಯಿಂದ ಈ ಭಾಗದ ರೈತರು ಹಾಗೂ ಸ್ಥಳೀಯರಿಗೆ ಅನುಕೂಲವಾಗಲಿದೆ. ಕಾಲುವೆ ಅಭಿವೃದ್ಧಿಯಿಂದ ನೀರು ವಿತರಣಾ ವ್ಯವಸ್ಥೆ ಸುಧಾರಿಸುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಗ್ರಾಪಂ ಉಪಾಧ್ಯಕ್ಷೆ ಶಾಹಿನ್ ತಾಜ್, ಸದಸ್ಯರಾದ ಅನಿತಾ, ಶೋಭಾ, ಕುಸುಮ, ರೇಖಾವೆಂಕಟೇಶ್, ಮುಖಂಡರಾದ ಸುಧಾಕರ್, ರಾಧಾಕೃಷ್ಣ, ಮನು, ವೆಂಕಟೇಶ್ ಇತರರು ಇದ್ದರು.
