More

    ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿ; ಬೇಡದ ಗರ್ಭಕ್ಕೆ ಕತ್ತರಿ  

    ಅಮ್ಮನಾದರೆ ಹೆಣ್ಣು ಪರಿಪೂರ್ಣ ಎನ್ನಲಾಗುವುದು. ಆದರೆ ಗರ್ಭದಲ್ಲಿದ್ದ ಮಗುವನ್ನು ಕಾರಣಾಂತರಗಳಿಂದ ಈ ಭೂಮಿಯ ಮೇಲೆ ತರಲು ಅಮ್ಮನಿಗೇ ಇಷ್ಟವಿಲ್ಲದಿದ್ದರೆ? ಬೇಡದ ಗರ್ಭವನ್ನು ಹೊತ್ತು, ದಿನವೂ ಕಣ್ಣೀರಿನಲ್ಲಿ ಕೈತೊಳೆಯುವ ತಾಯಂದಿರ ಮೊರೆಯನ್ನು ಕೇಂದ್ರ ಸರ್ಕಾರ ಕೇಳಿದೆ. ಅರ್ಧ ಶತಮಾನಗಳಷ್ಟು ಹಳೆಯದಾದ ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿಗೆ ಅದು ಮುಂದಾಗಿದೆ. ಏನಿದು ತಿದ್ದುಪಡಿ? ಇದರಿಂದ ಯಾರಿಗೆ ಅನುಕೂಲ? ಇಲ್ಲಿದೆ ಮಾಹಿತಿ. 

    ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿ; ಬೇಡದ ಗರ್ಭಕ್ಕೆ ಕತ್ತರಿ  ಹದಿಮೂರು ವರ್ಷದ ಬಾಲೆ ಅಪ್ಪನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದ್ದಾಳೆ. ಗರ್ಭ, ಮಗು ಎಂದರೇನು ಎಂಬ ಅರಿವೇ ಇಲ್ಲದ ಈ ಬಾಲಕಿಯ ಹೊಟ್ಟೆ ದೊಡ್ಡದಾಗುತ್ತಿದ್ದಂತೆಯೇ ಪರೀಕ್ಷೆಗೆ ಒಳಪಡಿಸಿದಾಗ ಐದು ತಿಂಗಳು ಮುಗಿದು ಹೋಗಿದೆ. ಕಾನೂನಿನ ಪ್ರಕಾರ ಹೋದರೆ ಆಕೆ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ.

    ್ಝ ಬುದ್ಧಿಮಾಂದ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ತನಗೇನಾಗುತ್ತಿದೆ, ತನಗೆ ಏಕಿಷ್ಟು ಸಂಕಟವಾಗುತ್ತಿದೆ ಎಂದು ತಿಳಿಯುವ ಹೊತ್ತಿಗೇ ಆಕೆಯ ಹೆರಿಗೆಯ ದಿನ ಹತ್ತಿರವಾಗತೊಡಗಿದೆ. ಗರ್ಭಪಾತಕ್ಕೆ ಕೋರಿ ಆಕೆಯ ಪಾಲಕರು ಕೋರ್ಟ್ ಮೊರೆ ಹೋಗಿದ್ದಾರೆ. ತಿಂಗಳು ಹೆಚ್ಚಾಗುತ್ತಿದ್ದರೂ, ಕೇಸು ಕೋರ್ಟ್ ಮುಂದೆ ಬರಲೇ ಇಲ್ಲ…!

    ಗರ್ಭಿಣಿಯೊಬ್ಬಳು ಸ್ಕ್ಯಾನಿಂಗ್ ಮಾಡಿಸಿದಾಗ ಮಗುವಿನ ಬೆಳವಣಿಗೆ ಸರಿಯಾಗಿಲ್ಲ, ಮಗು ಬುದ್ಧಿಮಾಂದ್ಯ ಆಗಬಹುದು ಎಂದು ವೈದ್ಯರು ಹೇಳಿದ್ದಾರೆ. ಆ ಮಗುವನ್ನು ಹೆರಲು ಈಕೆ ಸಿದ್ಧಳಿಲ್ಲ, ಆದರೆ ಅದಾಗಲೇ 20 ವಾರ ಮೀರಿ ಹೋಗಿರುವ ಕಾರಣ, ಕಾನೂನು ಅನುಮತಿ ನೀಡುತ್ತಿಲ್ಲ!

    ಇಂಥ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇವೆ. 24 ವಾರಗಳ ಗರ್ಭಿಣಿಗೆ ಸುರಕ್ಷಿತವಾಗಿ ಗರ್ಭಪಾತ ಮಾಡಲು ಅವಕಾಶವಿದ್ದರೂ ಕಾನೂನಿನ ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶ ಸದ್ಯ ಇಲ್ಲ. 1971ರ ವೈದ್ಯಕೀಯ ಗರ್ಭಪಾತ ಕಾಯ್ದೆಗೆ ಆಗೀಗ ತಿದ್ದುಪಡಿಯಾಗಿದ್ದರೂ, ಅಂತಿಮವಾಗಿ 20 ವಾರಗಳವರೆಗಿನ ಗರ್ಭವಾಗಿದ್ದರೆ ಮಾತ್ರ ಮಗುವನ್ನು ತೆಗೆಸಲು ಅನುಮತಿ ನೀಡಲಾಗಿದೆ. ಕಾನೂನಿಗೆ ಹೆದರಿ ವೈದ್ಯರು ಕೂಡ ಗರ್ಭಪಾತ ಮಾಡಲು ಒಪ್ಪುವುದಿಲ್ಲ.

    ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿ; ಬೇಡದ ಗರ್ಭಕ್ಕೆ ಕತ್ತರಿ  ಪರಿಣಾಮ…? ಮಗುವಂತೂ ಬೇಡವೇ ಬೇಡ, ಕೋರ್ಟ್, ಕಾನೂನು, ವೈದ್ಯರು ಯಾರೂ ತಮ್ಮ ಸಹಾಯಕ್ಕೆ ಬರುವುದಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಗರ್ಭವತಿಯ ಪಾಲಕರು ಅವೈಜ್ಞಾನಿಕವಾಗಿ ಗರ್ಭಪಾತ ಮಾಡಿಸುವವರ ಬಳಿ ಹೋಗುತ್ತಿದ್ದಾರೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಶುಚಿತ್ವವೇ ಇಲ್ಲದ ಜಾಗದಲ್ಲಿ ಗರ್ಭಪಾತ ಮಾಡಿಸಿಕೊಳ್ಳುತ್ತಿರುವ ಕಾರಣ, ಶೇ.56ರಷ್ಟು ಗರ್ಭಿಣಿಯರು ಸಾಯುತ್ತಿದ್ದಾರೆ ಎಂದಿದೆ ವರದಿ. ಹಾಗಿದ್ದರೆ ಪರಿಹಾರ? ಪರಿಹಾರದ ರೂಪದಲ್ಲಿಯೇ ಬಂದಿರುವುದು ‘ಮೆಡಿಕಲ್ ಟರ್ವಿುನೇಷನ್ ಆಫ್ ಪ್ರೆಗ್ನೆನ್ಸಿ ಅಮೆಂಡ್​ವೆುಂಟ್ ಬಿಲ್- 2020’. 24 ವಾರಗಳ (ಆರು ತಿಂಗಳು) ಭ್ರೂಣವನ್ನು ತೆಗೆಸಲು ಅನುಮತಿ ನೀಡುವ ಕಾನೂನಿದು.

    ಗರ್ಭಪಾತದ ಇತಿಹಾಸ: ವಿಶ್ವದ ಹಲವು ಮುಂದುವರೆದ ದೇಶಗಳಲ್ಲಿ ಗರ್ಭಪಾತ ಕಾನೂನು ಬಾಹಿರ. ಗರ್ಭಪಾತ ಒಂದು ಜೀವದ ಹತ್ಯೆ ಎಂದು ಪರಿಗಣಿಸುವ ಈ ದೇಶಗಳಲ್ಲಿ ತಾಯಿಯ ಜೀವಕ್ಕೆ ಕಂಟಕವಾದರೂ ಗರ್ಭಪಾತ ಮಾಡುವುದಿಲ್ಲ. ಇದರಿಂದ ಸೋಂಕು ಆಗಿದ ಗರ್ಭಪಾತ (ಸೆಪ್ಟಿಕ್ ಆಬಾರ್ಷನ್) ಸಂಭವದ ಭಯವಿದ್ದಾಗಲೂ ವೈದ್ಯರು ಗರ್ಭಪಾತ ಮಾಡದೇ ಕಾನೂನು ಕೈಕಟ್ಟಿ ಹಾಕಿದ್ದರಿಂದ ಹಲವು ಮಹಿಳೆಯರು ಜೀವ ಕಳೆದುಕೊಳ್ಳುತ್ತಿದ್ದಾರೆ.

    ಆದರೆ ಭಾರತದಲ್ಲಿ ಧರ್ಮದ ತೊಡಕನ್ನು ಮೀರಿ ವೈಜ್ಞಾನಿಕವಾಗಿ ಗರ್ಭಪಾತಕ್ಕೆ ಪರವಾನಗಿ ಕೊಟ್ಟು ಅದನ್ನು ಭಾರತದಲ್ಲಿ ಮೆಡಿಕಲ್ ಟರ್ವಿುನೇಷನ್ ಆಫ್ ಪ್ರೆಗ್ರೆನ್ಸಿ (ಎಂಟಿಪಿ) ಎಂದು ಕರೆದಿದ್ದಾರೆ. ಆದರೆ ಈ ವೈದ್ಯಕೀಯ ಗರ್ಭಪಾತ ಮಾಡುವುದು ಷರತ್ತುಬದ್ಧವಾಗಿದೆ.

    ಈ ಬಗ್ಗೆ ಹೇಳುವುದಾದರೆ ಗರ್ಭಪಾತದ ಇತಿಹಾಸ ತಿಳಿದುಕೊಳ್ಳಬೇಕು. ಗರ್ಭಪಾತಕ್ಕೆ ಸಂಬಂಧಿಸಿದಂತೆ 1860ರ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಉಲ್ಲೇಖವಾಗಿತ್ತು. 1971ರಲ್ಲಿ ಹೊಸದಾಗಿ ಮೆಡಿಕಲ್ ಟರ್ವಿುನೇಷನ್ ಆಫ್ ಪ್ರೆಗ್ರೆನ್ಸಿ ಆಕ್ಟ್ (ಎಂಟಿಪಿಎ) ತರಲಾಯಿತು. ಅದರಲ್ಲಿ ಯಾರು, ಯಾವಾಗ ಗರ್ಭಪಾತ ಮಾಡಬೇಕು, ಯಾರು ಒಪ್ಪಿಗೆ ಕೊಡಬೇಕು, ಯಾರಿಂದ ಸಲಹೆ ಪಡೆಯಬೇಕು ಎಂಬ ವಿಷಯಗಳನ್ನು ವಿಸ್ತಾರವಾಗಿ ಉಲ್ಲೇಖಿಸಲಾಗಿದೆ.

    ಒಂದು ವೇಳೆ ಗರ್ಭ ಮುಂದುವರೆಸಿದರೆ ಮಹಿಳೆಯ ಜೀವಕ್ಕೆ ಅಪಾಯವಿದ್ದರೆ ಅಥವಾ ಭ್ರೂಣಕ್ಕೆ ಗುಣಪಡಿಸಲಾಗದಂಥ ನ್ಯೂನ್ಯತೆ ಇದ್ದರೆ (ಬುದ್ಧಿಮಾಂದ್ಯ ಮಗು ಅಥವಾ ಇನ್ನಿತರ ತೊಂದರೆ ಇದ್ದಾಗ) ಭ್ರೂಣದ ಜೀವಕ್ಕಿಂತ ಮಹಿಳೆಯ ಬದುಕೇ ಮುಖ್ಯವೆಂದು ಪರಿಗಣಿಸಿ ಮೊದಲ ಮೂರು ತಿಂಗಳವರೆಗೆ ಗರ್ಭಪಾತ ಮಾಡಿಸಬಹುದು.

    (ಈ ಕಾನೂನಿನ ದುರ್ಬಳಕೆಯಾಗಿ ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದು ಬೇರೆ ವಿಷಯ ಬಿಡಿ). ಗರ್ಭಧಾರಣೆಯಾದ 9-12 ವಾರಗಳವರೆಗೆ ಅದನ್ನು ತೆಗೆಯುವುದು ಬಹಳ ಸುಲಭ ಹಾಗೂ ಸುರಕ್ಷಿತ. 1971ರಲ್ಲಿ ಬಂದ ಎಂಟಿಪಿಎ ಪ್ರಕಾರ 20 ವಾರಗಳವರೆಗೆ ಅಂದರೆ 5 ತಿಂಗಳವರೆಗೆ ಮಾತ್ರ ಗರ್ಭಪಾತ ಮಾಡಬಹುದಾಗಿತ್ತು. ಆದರೆ ಕೆಲವು ಸಂದರ್ಭಗಳಲ್ಲಿ ಮೆಡಿಕಲ್ ಎಮರ್ಜೆನ್ಸಿ ಅಂದರೆ ತಾಯಿಯ ಜೀವಕ್ಕೆ ಕಂಟಕವಿದ್ದರೆ, ಗರ್ಭಪಾತ ಮಾಡದಿದ್ದರೆ ಆಕೆ ಸಾಯುತ್ತಾಳೆ ಎಂತಾದರೆ ಇನ್ನೂ ಹೆಚ್ಚಿನ ಅವಧಿಯವರೆಗೆ ಗರ್ಭಪಾತ ಮಾಡಬಹುದು, ಆದರೆ ಇದನ್ನು ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಾತ್ರ ಮಾಡಿಸಬೇಕೆಂದಿತ್ತು.

    ಆದರೆ ಕೆಲವು ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗೆ ಬರಲು ಮುಜುಗರವಾಗುತ್ತಿದ್ದ ಕಾರಣ, ಈ ಅನುಮತಿಯನ್ನು 2003ರಲ್ಲಿ ಖಾಸಗಿ ಆಸ್ಪತ್ರೆಗಳಿಗೂ ನೀಡಲಾಯಿತು. ಗರ್ಭಪಾತ ಮಾಡಲು ಪರವಾನಗಿ ಪತ್ರಕ್ಕೆ ಗರ್ಭಿಣಿಯ ಸಹಿ ಹಾಕಿದರೆ ಸಾಕು, ಒಂದು ವೇಳೆ ಆಕೆ ಅಪ್ರಾಪ್ತ ಅಥವಾ ಬುದ್ಧಿಮಾಂದ್ಯಳಾಗಿದ್ದರೆ ಪಾಲಕರ ಸಹಿ ಕಡ್ಡಾಯ ಎಂದಿತ್ತು. ಅರ್ಥಾತ್ ಅಲ್ಲಿಯವರೆಗೆ ಗರ್ಭ ಧರಿಸಿ 12 ವಾರಗಳವರೆಗೂ ಯಾವ ಅಡೆತಡೆ ಇಲ್ಲದೇ ಗರ್ಭಪಾತ ಮಾಡಿಸಬಹುದು, 12-20 ವಾರದ ಒಳಗೆ ಕಡ್ಡಾಯವಾಗಿ ತಜ್ಞರ ಸಲಹೆ ಸೂಚನೆ ಮೇರೆಗೆ ಮಾಡಿಸಬಹುದು ಎಂದಿತ್ತು.

    ಆದರೆ ಸಮಸ್ಯೆ ಇದ್ದುದೇ ಇಲ್ಲಿ. ಕೆಲವು ಪ್ರಕರಣಗಳಲ್ಲಿ ಮಹಿಳೆ (ಹೆಚ್ಚಿನ ಸಂದರ್ಭಗಳಲ್ಲಿ ಬಾಲಕಿಯರು, ಬುದ್ಧಿಮಾಂದ್ಯರು) ಗರ್ಭ ನಿಂತಿದ್ದೇ ಗೊತ್ತಾಗದೇ ಸ್ಕಾ್ಯನಿಂಗ್ ಮಾಡುವುದು ತಡವಾಗುವುದುಂಟು. ಅಂಥ ಸಂದರ್ಭಗಳಲ್ಲಿ ಅವರು ವೈದ್ಯರ ಬಳಿ ವರ್ಣತಂತುಗಳ ಪರೀಕ್ಷೆ ನಡೆಸಿ ಆನುವಂಶಿಕ ಭಯಂಕರ ಕಾಯಿಲೆ ಇದೆ ಎಂದು ತಿಳಿದು ಖಚಿತ ಪಡಿಸಿಕೊಳ್ಳುವಷ್ಟರಲ್ಲಿ 24 ವಾರ ಮುಗಿದೇ ಹೋಗಿರುತ್ತದೆ. ಆದರೆ ಕಾನೂನಿನ ಭಯದಿಂದ ವೈದ್ಯರು ಕೈಚೆಲ್ಲುತ್ತಾರೆ. ಇನ್ನು, ವಂಶವಾಹಿಗಳ ಪರೀಕ್ಷೆಯ ರಿಪೋರ್ಟ್ ಬರಲು ಒಂದು ತಿಂಗಳು ಕಾಯಬೇಕು. ಅದು ಬರುವಷ್ಟರಲ್ಲಿ ಕಾನೂನು ತಿಳಿಸಿದ ಅವಧಿ ಮುಗಿದು ಹೋಗುತ್ತದೆ.

    ಇನ್ನು ಕೋರ್ಟ್ ಮೆಟ್ಟಿಲೇರಿದರೆ ಅಲ್ಲಿ ಆದೇಶ ಬರುವವರೆಗೆ ತಿಂಗಳು ಮುಗಿದು ಹೋಗುತ್ತದೆ. ಇದರಿಂದಾಗಿ ಡೌನ್​ಸಿಂಡ್ರೋಮ್ ಅಥವಾ ಇನ್ನಿತರ ಸಮಸ್ಯೆ ಇರುವ ಮಗು ಬೇಡವೆಂದರೂ ಹುಟ್ಟಿಸುವ ಸಮಸ್ಯೆ ಇದೆ. ಇದರಿಂದಾಗಿ ಅವೈಜ್ಞಾನಿಕವಾಗಿ ಗರ್ಭಪಾತ ಮಾಡಿಸುವವರ ಬಾಗಿಲು ತಟ್ಟದೇ ಬೇರೆ ವಿಧಿ ಇಲ್ಲ. ಇವರ ಪೈಕಿ ಹಲವರು ಅತ್ಯಂತ ಕ್ರೂರ ಮತ್ತು ಅಶುದ್ಧ ರೀತಿಯಲ್ಲಿ ಗರ್ಭದಲ್ಲಿ ಕೋಲು ತುರುಕಿ ಗರ್ಭಪಾತ ಮಾಡಲು ಪ್ರಯತ್ನಿಸುತ್ತಾರೆ. ಇದರಿಂದ ಆ ಹುಡುಗಿಯರ ಗರ್ಭಚೀಲಕ್ಕೆ ಸೋಂಕುಂಟಾಗಿ ಸಾಯುವುದುಂಟು. ಇವೆಲ್ಲವನ್ನೂ ಮನಗಂಡೇ ಮಹಿಳೆಯರ ಸುರಕ್ಷಿತ ಗರ್ಭಪಾತ ಹಾಗೂ ಸಂತಾನೋತ್ಪತ್ತಿಯ ಹಕ್ಕುಗಳನ್ನು ಖಚಿತಪಡಿಸುವ ಸಲುವಾಗಿ ಸರ್ಕಾರ ಈಗ 24 ವಾರಕ್ಕೆ ಗರ್ಭಪಾತದ ಮಿತಿಯನ್ನು ಏರಿಸಲು ತೀರ್ವನಿಸಿದೆ.

    ಸುಪ್ರೀಂಕೋರ್ಟ್ ತೀರ್ಪು

    ಈ ಹಿಂದೆ ಕೆಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿಯ ಸಲಹೆ ಮೇರೆಗೆ ಸುಪ್ರೀಂಕೋರ್ಟ್ 24ನೇ ವಾರದಲ್ಲಿ ಗರ್ಭಪಾತಕ್ಕೆ ಅವಕಾಶ ಕೊಟ್ಟ ನಿರ್ದೇಶನ ಗಳಿವೆ. ಗುಜರಾತ್​ನ 14 ವರ್ಷದ ಬಾಲಕಿ ಗರ್ಭವತಿಯಾಗಿರುವುದು ಪತ್ತೆಯಾಗುವಷ್ಟರಲ್ಲಿ 20 ವಾರಗಳು ಕಳೆದಿದ್ದವು. ಕಾನೂನಿನ ಅನ್ವಯ ಆಕೆಗೆ ಗರ್ಭಪಾತಕ್ಕೆ ಅವಕಾಶ ಇಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿತ್ತು.

    ನಂತರ ಸುಪ್ರೀಂಕೋರ್ಟ್ ಮೊರೆ ಹೋಗಿ ಅಲ್ಲಿ ಆದೇಶ ಬರುವ ವೇಳೆಗೆ 24 ವಾರವಾಗಿತ್ತು. ಮಗು ಹುಟ್ಟಿದರೆ ಈಕೆಯ ಜೀವಕ್ಕೆ ಅಪಾಯವಿದೆ ಎಂದು ವೈದ್ಯಕೀಯ ಮಂಡಳಿ ತಿಳಿಸಿದ ಹಿನ್ನೆಲೆಯಲ್ಲಿ, ಗರ್ಭಪಾತಕ್ಕೆ ಅವಕಾಶ ನೀಡಲಾಗಿತ್ತು. ಕೋಲ್ಕತ್ತದ 33 ವರ್ಷದ ಶರ್ವಿುಷ್ಠಾ ಎಂಬ ಮಹಿಳೆಯ ಗರ್ಭದಲ್ಲಿದ್ದ ಮಗುವಿಗೆ ಜನ್ಮಜಾತ ಸಮಸ್ಯೆಗಳಿದ್ದು ಮಗು ಹುಟ್ಟಿದರೆ ಸಾಯುವ ಸಂಭವವಿದೆ ಎಂದು ವೈದ್ಯಕೀಯ ಮಂಡಳಿ ತಿಳಿಸಿದ ಆಧಾರದ ಮೇಲೆ 24 ವಾರಗಳ ಗರ್ಭವನ್ನು ತೆಗೆಸಲು 2017ರಲ್ಲಿ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

    ಮಾಹಿತಿ ಗೌಪ್ಯ

    20-24 ವಾರದೊಳಗಿನ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಲು ಒಬ್ಬ ಸರ್ಕಾರಿ ವೈದ್ಯ ಸೇರಿದಂತೆ ಇಬ್ಬರು ವೈದ್ಯರ ಅನುಮತಿ ಅಗತ್ಯ. ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯ ಹೆಸರು ಹಾಗೂ ಇತರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ತಿದ್ದುಪಡಿ ಮಸೂದೆ ತಿಳಿಸಿದೆ.

    ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆಯು ಅಂಗೀಕಾರಗೊಂಡು ಕಾಯ್ದೆಯಾದರೆ, ಮೊದಲೇ ನೊಂದು ಬೆಂದು ಹೋಗಿರುವ ಅತ್ಯಾಚಾರ ಸಂತ್ರಸ್ತೆ, ಸರಿಯಾಗಿ ಬೆಳವಣಿಗೆ ಹೊಂದದ ಮಗುವನ್ನು ಗರ್ಭದಲ್ಲಿ ಇಟ್ಟುಕೊಂಡಿರುವ ಮಹಿಳೆ ಹಾಗೂ ಮಾನಸಿಕ ಅಸ್ವಸ್ಥರ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಗರ್ಭಪಾತಕ್ಕೆ ಹಲವಾರು ಬಾರಿ ಕಾನೂನು, ಕೋರ್ಟ್ ಮೊರೆ ಹೋಗುವುದನ್ನು ತಪ್ಪಿಸಬಹುದಾಗಿದೆ.

    (ಲೇಖಕರು ಖ್ಯಾತ ಹೃದ್ರೋಗ ತಜ್ಞೆ)  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts