ವೈದೇಹಿ ಹೆಣ್ಣಿನ ಅಂತರಂಗಕ್ಕೆ ಪಾತಾಳಗರಡಿ ಹಾಕಿದ ಲೇಖಕಿ

ಹೆಣ್ಣುತನದ ಸಂಕಟಗಳನ್ನು ಸೂಕ್ಷ್ಮ ಪಾತ್ರಗಳಲ್ಲಿ ಕಟ್ಟಿಕೊಟ್ಟ ಸಂವೇದಕಿ ವೈದೇಹಿ. ಹೊಸ ಓದುಗರನ್ನು ಸೃಷ್ಟಿಸಿದ ಸಾಹಿತ್ಯ ಸೃಷ್ಟಿಕರ್ತರಲ್ಲಿ ಮುಂಚೂಣಿಯಲ್ಲೇ ನಿಲ್ಲುವ ಹೆಸರು ಅವರದ್ದು. ಅವರು ಈಗ 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಮಯದಲ್ಲಿ ಅವರ ಸಾಹಿತ್ಯದ ಮೇಲೊಂದು ಕಿರುನೋಟ.

| ಮುರಳೀಧರ ಉಪಾಧ್ಯ ಹಿರಿಯಡಕ

ವೈದೇಹಿ ಅವರ ಮೊದಲ ಸಂಕಲನ ‘ಮರ, ಗಿಡ, ಬಳ್ಳಿ’ (1979)ಗೆ ಮುನ್ನುಡಿ ಬರೆದ ಕೆ.ವಿ. ಸುಬ್ಬಣ್ಣ ಅವರು ‘ಅನಾತುರದ ದೃಢ ಹೆಜ್ಜೆ’ಗಳನ್ನು, ಕತೆಗಳ ‘ಮಂದ್ರ ಶ್ರುತಿಯ ಸೊಬಗ’ನ್ನು ಗುರುತಿಸಿದ್ದರು. ವೈದೇಹಿ, ಕಳೆದ ನಲುವತ್ತು ವರ್ಷಗಳಲ್ಲಿ ಸಣ್ಣಕತೆ, ಕಾದಂಬರಿ, ಕವನ, ಪ್ರಬಂಧ, ಅಂಕಣ, ಮಕ್ಕಳ ನಾಟಕ, ಭಾಷಾಂತರ, ಆತ್ಮಕಥೆ, ನಿರೂಪಣೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತ ಭಾರತದ ಮಹತ್ವದ ಲೇಖಕಿಯರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಕೋ.ಲ. ಕಾರಂತ, ಸೇಡಿಯಾಪು, ಸರಸ್ವತಿ ಬಾಯಿ ರಾಜವಾಡೆ, ಬಿ.ವಿ. ಕಾರಂತ ಹೀಗೆ ಹಿರಿಯರ ಆತ್ಮಕತೆಗಳನ್ನು ನಿರೂಪಿಸಿ ಸಾಹಿತ್ಯ ಪರಂಪರೆಯನ್ನು ಸ್ವಯಾರ್ಜಿತ ಮಾಡಿಕೊಳ್ಳುವ ಹೊಸಮಾರ್ಗವೊಂದನ್ನು ತೋರಿಸಿಕೊಟ್ಟಿದ್ದಾರೆ.

ಹೆಣ್ಣಿನ ಜೀವನವೆಂದರೆ ಕೇವಲ ಸಂಕಟ ಹೋರಾಟ ಅಸಹಾಯಕತೆ ಅಲ್ಲ. ಅದರಲ್ಲಿ ಸಂಭ್ರಮ, ಸುಖ, ಸಣ್ಣತನ, ಆಸೆ ಎಲ್ಲವೂ ಧಾರಾಳವಾಗಿವೆ ಎಂದು ನಂಬಿರುವ ಲೇಖಕಿ ವೈದೇಹಿ. ‘ಲೇಖಕಿಯರಿಗೆ, ಅಂತರಂಗಕ್ಕೆ ‘ಪಾತಾಳಗರಡಿ’ ಹಾಕಿ ಬರೆಯುವ ತಾಕತ್ತಿದೆಯೇ?’ ಎಂದು ಒಂದು ಸಂದರ್ಶನದಲ್ಲಿ ಪ್ರಶ್ನಿಸಿದ್ದರು. ಪಾತಾಳಗರಡಿ ಎಂದೊಡನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಹೆಂಗಸರು ನೆನಪಾಗುತ್ತಾರೆ. ವೈದೇಹಿ ಹೆಣ್ಣಿನ ಅಂತರಂಗಕ್ಕೆ ಪಾತಾಳಗರಡಿ ಹಾಕಿ ಬರೆದುದರಿಂದ ಕನ್ನಡ ಕಥಾಸಾಹಿತ್ಯಕ್ಕೆ ಕೆಲವು ಕಥಾ ರತ್ನಗಳು ದೊರೆತಿವೆ. ಪುರುಷಪ್ರಧಾನ ಸಮಾಜದ ಮುಖವಾಡಗಳು ಕಳಚಿವೆ.

‘ಸೃಷ್ಟಿಯಲ್ಲಿ ಯಾವ ವಸ್ತು ಪರಿಪೂರ್ಣವಾಗಿರಲು ಸಾಧ್ಯ? ಎಲ್ಲದರಲ್ಲಿಯೂ, ಎಲ್ಲರಲ್ಲಿಯೂ ಕೊರತೆ ಉಂಟು. ರಾಮನಲ್ಲಿಯೂ ಧರ್ಮರಾಯನಲ್ಲಿಯೂ ಸ್ವಲ್ಪ ಕೊರತೆ ಇಟ್ಟೇ ಕವಿಗಳು ವರ್ಣನೆ ಮಾಡಿದ್ದಾರೆ. ಪರಿಪೂರ್ಣತೆ ಎಂಬುದು ಈ ಪ್ರಪಂಚದಲ್ಲಿಯೇ ಇಲ್ಲ’ ಎನ್ನುವ ವೈದೇಹಿ ಅವರು ಯಾವ ವರವನ್ನೂ ಬಿಡದೆ, ಯಾವ ಶಾಪಕ್ಕೂ ಅಂಜದೆ ಚಿರಂಜೀವಿಯಾಗಿ ಉಳಿಯಬಲ್ಲ ಕುಂದಾಪುರ ಕನ್ನಡ ಸ್ಪರ್ಶದ ಕತೆಗಳನ್ನು ಭಾರತದ ಸಮಕಾಲೀನ ಕಥಾಸಾಹಿತ್ಯಕ್ಕೆ ನೀಡಿದ್ದಾರೆ.

ವೈದೇಹಿ ಸ್ತ್ರೀವಾದ

ವೈದೇಹಿ ಅಭಿಪ್ರಾಯದಲ್ಲಿ ಸ್ತ್ರೀವಾದ ಎಂದರೆ ಸ್ತ್ರೀಯಲ್ಲಿನ ಅಹಮಸ್ಮಿ ಎಂಬ ಪ್ರಜ್ಞೆ, ಅಸ್ಮಿತೆ. ಅದೊಂದು ಜೀವವಾದ, ವ್ಯಕ್ತಿತ್ವ ವಾದ. ಪುರುಷರು ‘ನಿಮಗಿಂತ ನಾವು ಉತ್ತಮರು, ನೀವು ಎರಡನೆಯವರು ಅಥವಾ ಅಧೀನ ಜೀವಿಗಳು’ ಎಂದು ವರ್ತಿಸಿದಾಗ ಏಳುವ ಸಮಾನತೆಯ ವಾದ. ‘ನಮ್ಮ ಲೋಕದ ಗೀತೆ’ ಪ್ರಬಂಧದಲ್ಲಿ ವೈದೇಹಿ ಅವರ ಸ್ತ್ರೀವಾದದ ಸರಳ ಸ್ಪಷ್ಟ ಪರಿಚಯ ಸಿಗುತ್ತದೆ.-‘ಪುರುಷರಿಗೆ ನಾವು ಎಂದಿಗೂ ಸಮರಲ್ಲ. ಅದಕ್ಕಿಂತ ಮುಖ್ಯವಾಗಿ ನಮ್ಮ ಸಮಕ್ಕೆ ಪುರುಷರು ಎಂದೂ ಬಂದು ನಿಲ್ಲಲಾರರು. ಎಲ್ಲಿ ಸಮಾನ ಅವಕಾಶಗಳನ್ನು ಪಡೆಯಲಾರೆವೋ ಅಲ್ಲಿ ಹೋರಾಡಿಯಾದರೂ ಒಂದಲ್ಲ ಒಂದು ದಿನ ಸಮಾನ ಅವಕಾಶಗಳನ್ನು ಗಳಿಸಿಕೊಂಡೇವು’.

‘ನೂರು ಜಲುಮದಲ್ಲೂ ಹೆಣ್ಣು ಜಲುಮವೇ ಇರಲಿ, ಹರಸವ್ವ, ಕೋಲುಕೋಲೆ’ ಇದು ವೈದೇಹಿ ಅವರ ‘ಬದುಕ ರಂಗಿನಾಲೆ’ ಹಾಡಿನ ಸಾಲು. ಹೆಣ್ಣಿನ ಚೈತನ್ಯಶೀಲತೆ, ಧಾರಣಾಗುಣ, ಅಂತಃಶಕ್ತಿ ಗಂಡಿಗೆ ಜನ್ಮಜನ್ಮಾಂತರಕ್ಕೂ ಬಾರದು ಎಂಬ ಅವರ ಚಿಂತನೆಯೇ ಈ ಸಾಲಿನಲ್ಲೂ ಕಾಣಿಸುತ್ತದೆ. ವೈದೇಹಿ ಅವರ ಶಕುಂತಲೆ ಕಾಳಿದಾಸ ದುರ್ವಾಸರ ಪ್ರಸಂಗವನ್ನು ‘ಕಾವ್ಯಮಯ ಸುಳ್ಳು’ ಎಂದು ನಿರಾಕರಿಸುತ್ತಾಳೆ.

‘ಲೇಖಕಿಯ ಪುಟಗಳಲ್ಲಿ’ ಎಂಬ ವೈದೇಹಿ ಅವರ ಆತ್ಮಕತೆಯಲ್ಲಿ ತಲೆಬೋಳಿಸಿಕೊಂಡು ಕೆಂಪು ಸೀರೆ ಉಟ್ಟ ವಿಧವೆಯರು, ಜಕಣಿ ಮೈಮೇಲೆ ಬರುತ್ತಿದ್ದ ಮಹಿಳೆಯರು, ನಾನಾ ಕಾರಣಗಳಿಂದ ಮೌನಿಗಳಾಗಿದ್ದ ಮಹಿಳೆಯರು…ಹೀಗೆ ಮಹಿಳೆಯರ ಹಾಡುಪಾಡಿನ ಮನಮಿಡಿವ ದೃಶ್ಯಗಳಿವೆ. ವೈದೇಹಿ ಅವರ ಆತ್ಮಕತೆಯಲ್ಲಿ ಗಮನಸೆಳೆಯುವ ಒಂದು ಶಬ್ದ ‘ಹದ’! ಅದು ಅವರ ತಾಯಿ ಮಹಾಲಕ್ಷ್ಮೀ ಹೆಬ್ಬಾರ್ ಬಳಸುತ್ತಿದ್ದ ಶಬ್ದ. ‘ಅತಿದುಃಖ, ಅತಿನಗೆ, ಅತಿಸಂತೋಷ, ಅತಿಸಿಟ್ಟು..ಯಾವುದೇ ಅತಿಯಲ್ಲೂ ಆಕೆ ಗದರಿ ‘ಎಲ್ಲದಕ್ಕೂ ಒಂದು ಹದಬೇಕು’ ಎಂದು ಬಿರುಸಾಗಿ ತೀರ್ಮಾನ ಹೇಳುತ್ತಿದ್ದಳು. ಈ ವಿಶೇಷ ಶಬ್ದದ ಸತ್ವವನ್ನು ಸಾಹಿತ್ಯದಲ್ಲಿಯೂ ಸಾಧಿಸುವುದು ಹೇಗೆ? ಅದು ನನ್ನ ಮಟ್ಟಿಗಿದ್ದ ಸವಾಲು’ ಎನ್ನುತ್ತಾರೆ ವೈದೇಹಿ. ವೈದೇಹಿ ಅವರ ‘ನರಳಿದವರು’ ಪ್ರಬಂಧದ ಕಲಾವಿದ ಹೆಂಡತಿ ನೆನಪಾಗುತ್ತಾಳೆ. ಅರಸಿಕ ಗಂಡನ ಸಹವಾಸದಲ್ಲಿ ನರಳಿದವಳು ಆಕೆ. ಒಂದು ರಾತ್ರಿ ಗಂಡ ಹಸೆಗೆ ಕರೆದಾಗ ನಿರಾಕರಿಸಿದ ಅವಳು ಮನೆಯ ಹೊರಗೆ ಓಡುತ್ತಾಳೆ. ಅವನು ಬೆನ್ನತ್ತಿಕೊಂಡು ಬಂದಾಗ ಅವಳು ಒಂದು ಹಲಸಿನ ಮರ ಹತ್ತಿ ಕುಳಿತುಕೊಳ್ಳುತ್ತಾಳೆ. ‘ಅಷ್ಟು ಬೇಗ, ಮಕ್ಕಳು-ಗಿಕ್ಕಳು ಆಗುವುದಿಲ್ಲ. ಹೆದರಬೇಡ, ಬಾ’ ಎಂದು ಕಲಾವಿದ ಪುಸಲಾಯಿಸಿ ಕರೆದರೂ ಮರದಿಂದ ಕೆಳಗಿಳಿಯುವುದಿಲ್ಲ. ಬೆಳಗಾಗುವ ತನಕವೂ ಹಲಸಿನಮರದ ಮರದ ಮೇಲೆಯೇ ಕುಳಿತಿರುತ್ತಾಳೆ. ಹೀಗೆ, ವೈದೇಹಿ ಅವರ ಪಾತ್ರಗಳು ಜನಪದ ಕತೆಗಳ ಲೋಕದಿಂದ, ಹಲಸಿನ ಮರದಿಂದ ಇಳಿದು ಬಂದು ನಮ್ಮೊಡನೆ ಪಟ್ಟಾಂಗ ಆರಂಭಿಸುತ್ತವೆ.

ಜಾನಕಿ-ವೈದೇಹಿ

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಸಹಕಾರ್ಯದರ್ಶಿಯಾಗಿದ್ದ ಜಾನಕಿ ಹೆಬ್ಬಾರ್ ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆಗೆ ಮಹಿಳಾ ಸಮಾಜದ ಅಧ್ಯಕ್ಷರನ್ನು ಕರೆಸಿದ್ದರು. ಸಭಾಕಂಪನದಿಂದಾಗಿ ಆ ಮಹಿಳೆಗೆ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಅವರನ್ನು ಕರೆಸಿದ ಜಾನಕಿಗೆ ಇದರಿಂದಾಗಿ ಅವಮಾನವಾಯಿತು. ಈ ಸತ್ಯಕತೆಯನ್ನು ‘ನೀರೆಯರ ದಿನ’ ಎಂಬ ಹೆಸರಿನಲ್ಲಿ ‘ಸುಧಾ’ ವಾರಪತ್ರಿಕೆಗೆ ಕಳುಹಿಸಿದರು. ಆ ಮೇಲೆ ಅತಿಥಿಯಾಗಿ ಬಂದಿದ್ದ ಮಹಿಳೆಗೆ ಅವಮಾನವಾಗಬಾರದೆಂದು ಯೋಚಿಸಿ, ‘ಕತೆ ಪ್ರಕಟಿಸಬೇಡಿ’ ಎಂದು ಸಂಪಾದಕರಿಗೆ ಪತ್ರ ಬರೆದರು. ಸಂಪಾದಕರಾಗಿದ್ದ ಎಂ.ಬಿ. ಸಿಂಗ್ ಜಾನಕಿ ಎಂಬ ಹೆಸರನ್ನು ‘ವೈದೇಹಿ’ ಎಂಬ ಕಾವ್ಯನಾಮದೊಂದಿಗೆ ಪ್ರಕಟಿಸಿದರು. ಅಂದಿನಿಂದ ಜಾನಕಿಯ ಕಾವ್ಯನಾಮ ‘ವೈದೇಹಿ’ ಎಂದಾಯಿತು.

ಕುಂದಾಪುರ ಕನ್ನಡ

ವೈದೇಹಿ ತಮ್ಮ ಹಲವು ಕತೆಗಳ ಸಂಭಾಷಣೆಯಲ್ಲಿ ಕುಂದಾಪುರ ಕನ್ನಡವನ್ನು ಬಳಸಿದ್ದಾರೆ. ತಾನು ಬಳಸುವ ಕನ್ನಡ ಭಾಷೆಯ ವಿವಿಧ ರೂಪಗಳ ಕುರಿತು ಅವರು ನೀಡಿರುವ ವಿವರಣೆ ಹೀಗಿದೆ,-‘ನಾನು ಎರಡು, ಮೂರು ಭಾಷೇಲಿ ಬರೀತೀನಿ. ಒಂದು ಅಮ್ಮನ ಭಾಷೆ, ಇನ್ನೊಂದು ಗಂಡನ ಭಾಷೆ, ಮತ್ತೊಂದು ಕುಂದಾಪುರದ ಭಾಷೆ. ನನ್ನ ‘ಅಕ್ಕು’ ಇದ್ದಾಳಲ್ಲಾ, ಅವಳದು ಕುಂದಾಪುರದ ಭಾಷೆ. ‘ವಾಣಿ ಮಾಯಿ’, ‘ಅಮ್ಮಚ್ಚಿ’ ಅವರದು ಅಮ್ಮನ ಭಾಷೆ. ಇನ್ನು, ‘ಒಗಟು’ವಿನಲ್ಲಿ ಶಿವಮೊಗ್ಗದ ಹಳೇ ಮೈಸೂರಿನ ಭಾಷೆ. ಮತ್ತು ‘ಶಾಕುಂತಲೆ’ಯದು ಕಾವ್ಯ ಭಾಷೆ’. ವೈದೇಹಿ ಇಲ್ಲಿ ಅಮ್ಮನ ಭಾಷೆ ಎಂದು ಉಲ್ಲೇಖಿಸಿರುವ ಕನ್ನಡ ಬಂಟ್ವಾಳ, ಪಾಣಿ ಮಂಗಳೂರಿನ ಕಡೆ ವಲಸೆ ಹೋಗಿರುವ ಕೋಟ ಬ್ರಾಹ್ಮಣರ ಕನ್ನಡ. ವೈದೇಹಿ ಅವರ ‘ಅಸ್ಪಶ್ಯರು’ (1992) ಕಾದಂಬರಿಯಲ್ಲೂ ಕುಂದಾಪುರ ಕನ್ನಡದ ಸಂಭಾಷಣೆಗಳಿವೆ. ಈ ಕಾದಂಬರಿಯನ್ನು ಓದಿದ ಶಿವರಾಮ ಕಾರಂತರು ವೈದೇಹಿ ಅವರಿಗೆ ಒಂದು ಪತ್ರ ಬರೆದರು. ಕಾದಂಬರಿಯ ಲವಲವಿಕೆ, ಮಕ್ಕಳ ಪ್ರಪಂಚವನ್ನು ಕಾರಂತರು ಮೆಚ್ಚಿಕೊಂಡಿದ್ದರು. ಆದರೆ ಕುಂದಾಪುರ ಕನ್ನಡದ ಛಾಯೆ ಇರುವುದರಿಂದ ಓದುಗರು ಕಮ್ಮಿಯಾಗಬಹುದು ಎಂದು ಕಾರಂತರು ಸಲಹೆ ನೀಡಿದ್ದರು. ಕಾರಂತರ ಸಲಹೆಯನ್ನು ವೈದೇಹಿ ಅಲಕ್ಷಿಸಿದ್ದರಿಂದ ಕುಂದಾಪುರ ಕನ್ನಡ ಅಖಿಲ ಕರ್ನಾಟಕ ಮನ್ನಣೆ ಪಡೆಯಿತು. ಕುಂದಾಪುರ ಕನ್ನಡದ ಸ್ಪರ್ಶದಿಂದ ಕನ್ನಡ ಕಥಾಸಾಹಿತ್ಯ ಹದಗೊಂಡಿತು.

ಶ್ರೇಷ್ಠ ಕತೆಗಾರ್ತಿ

‘ವೈದೇಹಿ ಕನ್ನಡದ ಶ್ರೇಷ್ಠ ಕತೆಗಾರ್ತಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಕನ್ನಡ ಬರಹಕ್ಕೆ ಅವರು ಸೇರಿಸಿದ ಸೂಕ್ಷ್ಮ ಆಯಾಮವು ಕನ್ನಡ ಕಥನವನ್ನು ಎಷ್ಟು ಶ್ರೀಮಂತಗೊಳಿಸಿದೆ ಎನ್ನುವುದನ್ನು ವಿಮರ್ಶೆಯು ಇನ್ನೂ ಸಮಗ್ರವಾಗಿ ಅರ್ಥ ಮಾಡಿಕೊಂಡಿಲ್ಲ’

| ರಾಜೇಂದ್ರ ಚೆನ್ನಿ

ಮಗು ನುಂಗಿದೆ

ಎಷ್ಟೋ ಕತೆ, ಕಾದಂಬರಿ ಒಳಗೆಯೇ ಇದ್ದು ಕಾದು ಶತಪಥ ತಿರುಗಿ ತಿರುಗಿ ಹೊರಟಿದ್ದವು ಹೊರಗೆ ಮಗು ನುಂಗಿದೆ

| ವೈದೇಹಿ (ಹೂವ ಕಟ್ಟುವ ಕಾಯಕ)

(ಚಿಕ್ಕ ಮಗುವಿದ್ದ ಕಾರಣ ಕತೆ-ಕವನ ಬರೆಯಲಾಗದ ತಾಯಿಯೊಬ್ಬಳ ಅಳಲನ್ನು ವೈದೇಹಿ ವಿವರಿಸಿದ್ದು ಹೀಗೆ…)

(ಲೇಖಕರು ಖ್ಯಾತ ವಿಮರ್ಶಕರು. ಇವರು ಸಂಪಾದಿಸಿರುವ ‘ವೈದೇಹಿ-ಜೀವನ ಮತ್ತು ಕೃತಿಗಳ ಸಮೂಹ ಶೋಧ’ (2018) ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ.)