ಸುರಕ್ಷೆಯೇ ಮೊದಲು

ಯಾವುದೇ ಕ್ಷೇತ್ರದಲ್ಲಿ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿದರೆ ನಷ್ಟವಾಗುವುದು ಕಡಿಮೆಯಾಗಿ ದೇಶಕ್ಕೆ ಆರ್ಥಿಕ ಲಾಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದಿನದ ಅಂಗವಾಗಿ ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಹಲವಾರು ಕ್ರಮಗಳ ಮೂಲಕ ಅರಿವು ಮೂಡಿಸುತ್ತಿದೆ.

| ಸುಮನಾ

ಮಾನವ ಸಂಪನ್ಮೂಲ ಯಾವುದೇ ದೇಶಕ್ಕೆ ಬಹುದೊಡ್ಡ ಆಸ್ತಿ. ಅದರಲ್ಲೂ ದುಡಿಯುವ ವಯಸ್ಸಿನ ಜನಸಮೂಹವೇ ಪ್ರಗತಿಯ ಬೆನ್ನೆಲುಬು. ಆದರೆ, ಈ ಅಮೂಲ್ಯ ಆಸ್ತಿ ಕೆಲಸದ ಸ್ಥಳದಲ್ಲಿ ವಿವಿಧ ಅಪಾಯ ಎದುರಿಸುತ್ತಿರುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಸುರಕ್ಷತಾ ದಿನ ಹಾಗೂ ಸಪ್ತಾಹವನ್ನು ಆಚರಿಸಲಾಗುತ್ತದೆ.

ಕೇಂದ್ರ ಸರ್ಕಾರದ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸುರಕ್ಷತಾ ಪರಿಷತ್ತು, ಎಲ್ಲ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಮಾ.4ರಂದು ಸುರಕ್ಷತಾ ದಿನವನ್ನು ಆಚರಿಸುತ್ತದೆ. ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷೆ, ಆರೋಗ್ಯ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1966ರ ಮಾರ್ಚ್ 4ರಂದು ಈ ಸಂಸ್ಥೆ ಆರಂಭವಾಗಿದೆ. ಸೊಸೈಟಿ ಕಾಯ್ದೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಕೈಗಾರಿಕಾ ಸಂಸ್ಥೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆ ಮೂಡಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಇದು ಹೊಂದಿದೆ. ಹೀಗಾಗಿ, ಸಂಪನ್ಮೂಲಗಳ ರಕ್ಷಣೆ, ಕೈಗಾರಿಕೀಕರಣದಿಂದ ಆರೋಗ್ಯದ ಮೇಲಾಗುವ ಪರಿಣಾಮವೂ ಸೇರಿದಂತೆ ಎಲ್ಲ ಕಡೆ ಕೈಗೊಳ್ಳಬೇಕಾದ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಮಾ. 4-10ರವರೆಗೆ ಸುರಕ್ಷತಾ ಸಪ್ತಾಹವನ್ನೂ ಆಚರಿಸುತ್ತದೆ.

ಕೆಲಸದ ಸ್ಥಳದಲ್ಲಿ ಸಂಭವಿಸುವ ಅವಘಡದಿಂದ ಒಬ್ಬ ವ್ಯಕ್ತಿಗಷ್ಟೇ ಹಾನಿಯಾಗುವುದಿಲ್ಲ. ಆತನ ಕುಟುಂಬಕ್ಕೂ, ಸಂಸ್ಥೆಗೂ ಆರ್ಥಿಕವಾಗಿ ನಷ್ಟವಾಗುತ್ತದೆ. ಹೀಗಾಗಿ, ಮಾನವ ಸಂಪನ್ಮೂಲದ ರಕ್ಷಣೆಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಯಾವುದೇ ಕ್ಷೇತ್ರದಲ್ಲಿ ಅವಘಡ ಆಗದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವುಗಳಲ್ಲಿ ಅತಿಮುಖ್ಯವಾಗಿರುವ ಕೆಲವು ವಿಧಾನಗಳು ಹೀಗಿವೆ.

ಹೇಗೆ ಆಚರಣೆ?

ಈ ಮೇಲಿನ ಎಲ್ಲ ಸುರಕ್ಷತಾ ಅಂಶಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು, ಅವಘಡಗಳ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮ, ನಾಶವನ್ನು ಕಡಿಮೆ ಮಾಡುವುದು ಮುಂತಾದ ಅನೇಕ ಕ್ರಮಗಳ ಬಗ್ಗೆ ವಿಚಾರ, ವಿನಿಮಯ ನಡೆಸಲಾಗುತ್ತದೆ. ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಒಂದುಗೂಡಿ ಈ ನಿಟ್ಟಿನಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವುದು ವಿಶೇಷ.

1. ಕಟ್ಟಡದ ವಿನ್ಯಾಸ

ಕಟ್ಟಡದ ವಿನ್ಯಾಸವು ಸಾಕಷ್ಟು ಗಾಳಿ-ಬೆಳಕಿನಿಂದ ಕೂಡಿರುವಂತೆ ಇರಬೇಕು. ಮೇಲಕ್ಕೆ ಚಾಚಿಕೊಂಡಿರುವ ಯಂತ್ರೋಪಕರಣಗಳ ನಿಯಂತ್ರಣ ಸರಿಯಾಗಿರಬೇಕು. ಚೂಪಾದ ವಸ್ತುಗಳು, ಅಲಗು, ಜಾರುವಂತಿರುವ ಪ್ರದೇಶ, ಮೆಟ್ಟಿಲುಗಳ ರಚನೆ ಕುರಿತೂ ಗಮನ ನೀಡಬೇಕಿರುತ್ತದೆ. ಜತೆಗೆ, ವಿದ್ಯುತ್ ಜಾಲ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆಗಳು ಪಕ್ಕಾ ಇರಬೇಕು.

2. ಯಂತ್ರಗಳಿಂದ ರಕ್ಷಣೆ

ಕಾರ್ಯಾಚರಣೆಯ ವೇಳೆ ಅಪಾಯಕಾರಿ ಯಂತ್ರೋಪಕರಣಗಳ ಭಾಗಗಳು ಸಾಧ್ಯವಾದಷ್ಟು ದೂರದಲ್ಲಿರಬೇಕು, ಕೈಯಳತೆಗೆ ನಿಲುಕುವಂತಿರಬಾರದು. ಅಲ್ಲದೆ, ಆ ಪ್ರದೇಶಕ್ಕೆ ರಕ್ಷಣಾ ಬೇಲಿ ಅಳವಡಿಸುವುದು ಸೂಕ್ತ. ಬಾಯ್ಲರ್, ವಾಲ್ವ್ ಸೇರಿದಂತೆ ಒತ್ತಡ ನಿರ್ವಿುಸುವ ಎಲ್ಲ ಉಪಕರಣಗಳ ನಿರ್ವಹಣೆ ಚೆನ್ನಾಗಿರಬೇಕು. ಕ್ರೇನ್, ಲಿಫ್ಟ್ ಇತ್ಯಾದಿ ಸುಸ್ಥಿತಿಯಲ್ಲಿರಬೇಕು. ನಿಯತವಾಗಿ ತಪಾಸಣೆಗೆ ಒಳಪಡಿಸಬೇಕು.

3. ಬೆಂಕಿ ಸುರಕ್ಷತೆ

ಅಪಾಯದ ಸಮಯದಲ್ಲಿ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಪ್ಯಾಸೇಜ್ ಹಾಗೂ ಹೊರಹೋಗುವ ದಾರಿಗಳು ಇರಬೇಕು. ಎಚ್ಚರಿಕೆ ಸಂದೇಶಗಳನ್ನು ಅಳವಡಿಸಬೇಕು. ಬೆಂಕಿ ನಿಯಂತ್ರಕಗಳನ್ನು ಅಲ್ಲಲ್ಲಿ ಇಡಬೇಕು. ಯಾವುದಾದರೂ ರಾಸಾಯನಿಕದ ಸಂಗ್ರಹ ಮಾಡುವಾಗ ಎಚ್ಚರಿಕೆ ವಹಿಸಬೇಕು. ಬೆಂಕಿ ಅವಘಡ ಸಂಭವಿಸಿದರೆ ಏನು ಮಾಡಬೇಕೆಂಬ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು.

4. ವಿದ್ಯುತ್ ಅಪಾಯ

ಎಲ್ಲ ವಿದ್ಯುತ್ ಸಲಕರಣೆ, ಜಾಲ ಹಾಗೂ ವೈರಿಂಗ್ ವ್ಯವಸ್ಥೆಯನ್ನು ಕಾಲಕಾಲಕ್ಕೆ ತಪಾಸಿಸಬೇಕು. ಲೋಹದ ಹೊರಮೈ ಹೊಂದಿರುವ ವಿದ್ಯುತ್ ಮಷಿನ್​ಗಳ ಅರ್ಥಿಂಗ್ ವ್ಯವಸ್ಥೆ ಸರಿಯಾಗಿರಬೇಕು. ನೆಲದಡಿಯ ಕೇಬಲ್, ವೈರ್​ಗಳು ಯಾಂತ್ರಿಕ ಹಾನಿ ಅಥವಾ ತೇವದಿಂದ ಹಾನಿಗೆ ಒಳಗಾಗದಂತೆ ಎಚ್ಚರಿಕೆ ವಹಿಸುತ್ತಿರಬೇಕು. ಯಾವುದೇ ರೀತಿಯ ವಿದ್ಯುತ್ ಕೆಲಸದಲ್ಲಿ ತಜ್ಞರನ್ನೇ ತೊಡಗಿಸಬೇಕು.