ಇಂದು (ಮಾ. 22) ಅಂತಾರಾಷ್ಟ್ರೀಯ ಜಲ ದಿನ. ನೀರಿಲ್ಲದೆ ಈ ಜೀವಜಗತ್ತಿನ ಅಸ್ತಿತ್ವವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗೆ, ಜತನದಿಂದ ಕಾಪಾಡಬೇಕಾದ ಜಲ ಸಂಪನ್ಮೂಲ ಮನುಷ್ಯನ ಸ್ವಾರ್ಥ, ದುರಾಸೆಗಳಿಗೆ ಬರಿದಾಗುತ್ತಿದೆ. ಮನುಕುಲದ ಕಣ್ಣು ತೆರೆಸಿ, ಜಲ ಸಂರಕ್ಷಣೆಯ ವಿಶಿಷ್ಟ ಮಾದರಿಗಳನ್ನು ಪರಿಚಯಿಸುತ್ತಿರುವ ಅನನ್ಯ ಸಾಧಕರು ನಮ್ಮ ನಡುವೆಯೇ ಇದ್ದಾರೆ. ಅಂಥ ಕೆಲ ಸಾಧಕರ ಪರಿಚಯ ಇಲ್ಲಿದೆ.
ಕ್ಯಾಚ್ ದಿ ರೈನ್ಗೆ ಪ್ರಧಾನಿ ಚಾಲನೆ
ವಿಶ್ವ ಜಲ ದಿನದ ಅಂಗವಾಗಿ ಜಲಶಕ್ತಿ ಸಚಿವಾಲಯ ದೇಶಾದ್ಯಂತ ಹಮ್ಮಿಕೊಂಡಿರುವ ‘ಕ್ಯಾಚ್ ದಿ ರೈನ್’ (ಮಳೆ ನೀರು ಸಂಗ್ರಹಿಸಿ) ಜಲಶಕ್ತಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ. ‘ಮಳೆ ಎಲ್ಲಿ ಮತ್ತು ಯಾವಾಗ ಸುರಿಯುವುದೋ ಅಲ್ಲೇ ಅದನ್ನು ಸಂಗ್ರಹಿಸಿ’ ಎಂಬ ಅಡಿಬರಹವನ್ನು ಒಳಗೊಂಡಿರುವ ಈ ಅಭಿಯಾನ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಮಾರ್ಚ್ 22ರಿಂದ ನವೆಂಬರ್ 30ರವರೆಗೆ ಜನಾಂದೋಲನವಾಗಿ ನಡೆಯಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.
ಲಾಕ್ಡೌನ್ನಲ್ಲಿ ಜನ್ಮವೆತ್ತ ನಮ್ಮ ಕೆರೆ
ಕರೊನಾ ಲಾಕ್ಡೌನ್ ಜಾರಿಯಾದಾಗ ಮನೆ ಬಿಟ್ಟು ಹೊರ ಹೋಗದಂಥ ಪರಿಸ್ಥಿತಿ ಇತ್ತು. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾದ ಧಾರವಾಡದ ನಾಲ್ಕು ಬಡಾವಣೆ ನಿವಾಸಿಗಳು, ಸ್ವಂತ ಖರ್ಚಿನಲ್ಲಿ ಕೆರೆ ನಿರ್ವಿುಸಿಕೊಂಡಿದ್ದಾರೆ. ಧಾರವಾಡದ ಬಸವೇಶ್ವರ ಬಡಾವಣೆ, ಗುರುದೇವನಗರ, ನಂದಿನಿ ಲೇಔಟ್ ಹಾಗೂ ಶಾಖಾಂಬರಿನಗರ ನಿವಾಸಿಗಳ ಜಲ ಸಂರಕ್ಷಣೆಯ ಪಣ ‘ನಮ್ಮ ಕೆರೆ’ಯಾಗಿ ಮೈದಳೆದು ನಿಂತಿದೆ.
ನಾಲ್ಕು ಬಡಾವಣೆ ವ್ಯಾಪ್ತಿಗೆ 1 ಎಕರೆ 5 ಗುಂಟೆ ವಿಸ್ತಾರದ ಕೆರೆ ಇತ್ತು. ಆದರೆ, ಹೂಳು ತುಂಬಿ ನೀರು ನಿಲ್ಲುತ್ತಿರಲಿಲ್ಲ. ಅಲ್ಲದೆ, ಕೆಲವರಿಂದ ಅತಿಕ್ರಮಣ ಯತ್ನವೂ ನಡೆದಿತ್ತು. ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಲಾಕ್ಡೌನ್ ಸಮಯದಲ್ಲಿ ಬಡಾವಣೆಯ ಪ್ರಮುಖರು ಕೆರೆಯ ಹೂಳು ತೆಗೆಸಿ, ಸುತ್ತಲೂ ಒಡ್ಡು ನಿರ್ವಿುಸುವ ನಿರ್ಧಾರ ಕೈಗೊಂಡರು. ಸರ್ಕಾರದ ಅನುದಾನವಿಲ್ಲದೆ -ಠಿ;4 ಲಕ್ಷ ಸಂಗ್ರಹಿಸಿ ವಿಸ್ತಾರವಾದ ಕೆರೆ ನಿರ್ವಿುಸಿಕೊಂಡಿದ್ದಾರೆ. ಮುಚ್ಚಿ ಹೋಗಿದ್ದ ಕೆರೆಗೆ ಮರುಜೀವ ನೀಡಿ ‘ನಮ್ಮ ಕೆರೆ’ ಎಂದು ನಾಮಕರಣ ಮಾಡಿದ್ದಾರೆ. ಕೆರೆ ನಿರ್ವಣದಲ್ಲಿ ಬಡಾವಣೆಗಳ ನಿವಾಸಿಗಳಾದ ಶಿವಶರಣ ಕಲಬಶೆಟ್ಟರ, ಸುರೇಶ ಹೊರಡಿ, ಅಳಗುಂಡಿಮಠ, ದೀಪಕ್ ಗರಗ, ಮುತ್ತಪ್ಪ ಕಾರೇರ, ಆನಂದ ನಾಗೋಜಿ, ಚಿಲ್ಲಣ್ಣವರ ಹಾಗೂ ಬಸರಿ ಕುಟುಂಬದವರು ಮುಂದಾಳತ್ವ ವಹಿಸಿದ್ದರು. ಅವರೊಂದಿಗೆ ನಾಲ್ಕೂ ಬಡಾವಣೆಗಳ ಜನ ತಮ್ಮ ಕೈಲಾದಷ್ಟು ಹಣಕಾಸಿನ ನೆರವು ನೀಡಿದ್ದಾರೆ. ಜೂನ್-ಜುಲೈನಲ್ಲಿ ಸುರಿದ ಮಳೆಗೆ ಕೆರೆ ಭರ್ತಿಯಾಗಿದೆ.
ಜಾಗೃತಿಯ ಅಲೆ
ಚಿಕ್ಕಬಳ್ಳಾಪುರದ ಪ್ರಶಾಂತ ನಗರದ ಮಹಾಂತೇಶ್ (32) ಜಲಸಂರಕ್ಷಣೆ ಮತ್ತು ಜನರಲ್ಲಿ ಜಾಗೃತಿ ಸೇರಿ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಓದಿದ್ದು ಬಿ.ಇ. ಮೆಕಾನಿಕಲ್. ಖಾಸಗಿ ಸಂಸ್ಥೆಯ ಇಂಜಿನಿಯರ್. ಗಿಡಮರಗಳ ಸಂರಕ್ಷಣೆ, ಸ್ವಚ್ಛತೆ ನಿರ್ವಹಣೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಶಿಥಿಲಾವಸ್ಥೆಯಲ್ಲಿರುವ ಉದ್ಯಾನ, ಕಲ್ಯಾಣಿಗಳ ಅಭಿವೃದ್ಧಿ ಸೇರಿ ವಿವಿಧ ಸೇವಾ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ನೀರಿನ ಉಳಿತಾಯ ಮತ್ತು ಮಿತ ಬಳಕೆಯ ಮಹತ್ವದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ನಿರ್ವಿುಸಿದ್ದಾರೆ. ‘ಜಲ ಅಭಿಯಾನ-2’ ಮತ್ತು ‘ಥೀಮ್ ಆಫ್ ಇಂಡಿಯಾ-2050’ ಸಾಕ್ಷ್ಯತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಲ್ಲಿ ಗತಕಾಲದ ಜಲಮೂಲ, ಪ್ರಸ್ತುತ ಸ್ಥಿತಿಗತಿಗಳು ಮತ್ತು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ದಂಡಿಗಾನಹಳ್ಳಿ ಜಲಾಶಯ ಮತ್ತು ಜಕ್ಕಲಮಡು ಜಲಾಶಯ ಸೇರಿ ವಿವಿಧೆಡೆ ಜಲಮೂಲಗಳ ಸಂರಕ್ಷಣೆ ಮತ್ತು ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ.
ಜಿನುಗಿದ ನೀರು
ಮಲೆನಾಡಿನಲ್ಲಿದ್ದರೂ ಅದು ಅರೆ ಬಯಲುಸೀಮೆ ಪ್ರದೇಶ. ಅಲ್ಲಿನ ಎರಡು ಬೃಹತ್ ಕೆರೆಗಳು ಡಿಸೆಂಬರ್ ವೇಳೆಗೆ ನೀರಿಲ್ಲದೆ ಒಣಗುತ್ತಿದ್ದವು. ಇದು ಏಳು ವರ್ಷದ ಹಿಂದಿನ ಮಾತು. ಈಗ ಪರಿಸ್ಥಿತಿ ಭಿನ್ನ. ಬೇಸಿಗೆಯಲ್ಲೂ ಈ ಕೆರೆಗಳಲ್ಲಿ ನೀರಿರುತ್ತದೆ. ಸುತ್ತಲ ನಾಲ್ಕಾರು ಗ್ರಾಮಗಳ ಜಾನುವಾರುಗಳಿಗೆ, ಪಕ್ಷಿಗಳಿಗೆ ಬೇಸಿಗೆಯಲ್ಲಿ ಈ ಕೆರೆಗಳೇ ಜೀವನಾಡಿ. ಇದು ಸಾಧ್ಯವಾಗಿರುವುದು ನಿವೃತ್ತ ಗ್ರಾಮ ಲೆಕ್ಕಿಗ ಸಿ.ಶಿವಾನಂದಪ್ಪ ಅವರ ಪರಿಶ್ರಮ ಹಾಗೂ ದೂರದೃಷ್ಟಿಯಿಂದ. ಶಿವಮೊಗ್ಗ ತಾಲೂಕಿನ ವಿಠಗೊಂಡನಕೊಪ್ಪದ ಸಿ.ಶಿವಾನಂದಪ್ಪ, ಬಸವೇಶ್ವರ ಕೆರೆ ಬಳಕೆದಾರರ ಅಭಿವೃದ್ಧಿ ಸಂಘ ಕಟ್ಟಿ, ಅಧ್ಯಕ್ಷ ಸ್ಥಾನದ ಹೊಣೆ ಹೊತ್ತು ಎರಡು ಕೆರೆಗಳನ್ನು, ನೀರಿನ ಸಂಗ್ರಹಗಾರಗಳನ್ನಾಗಿ ಮಾಡಿದ್ದು ಸಣ್ಣ ವಿಷಯವಲ್ಲ. ಸಂಪೂರ್ಣ ಶಿಥಿಲಗೊಂಡಿದ್ದ 6.39 ಎಕರೆ ವಿಸ್ತೀರ್ಣದ ಹಲಸಿನಕಟ್ಟೆ ಹಾಗೂ 8.04 ಎಕರೆಯ ಹುಲಿಕಟ್ಟೆ ಕೆರೆಯನ್ನು -ಠಿ;14 ಲಕ್ಷ ವೆಚ್ಚದಲ್ಲಿ 2013ರಲ್ಲಿ ಅಭಿವೃದ್ಧಿಪಡಿಸಲಾಯಿತು. ಪರಿಣಾಮ, ಈಗ 300 ಎಕರೆಯಲ್ಲಿ ಒಂದು ಭತ್ತದ ಬೆಳೆ ಸರಾಗವಾಗಿ ಬರುತ್ತಿದೆ. ಜಲಸಂವರ್ಧನೆ ಯೋಜನೆಯ 2ನೇ ಹಂತದ ಅನುದಾನವನ್ನು ಈ ಕೆರೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದ್ದು, ಅನುದಾನ ಕಡಿಮೆಯಾದಾಗ ಸ್ವತಃ ಸಿ.ಶಿವಾನಂದಪ್ಪ ತಮ್ಮ ಪಿಂಚಣಿಯ ಹಣವನ್ನು ಕೆರೆಗಳ ಪುನಶ್ಚೇತನಕ್ಕೆ ನೀಡಿದ್ದಾರೆ.
ಕೃಷಿಹೊಂಡ ತಂದ ಸಮೃದ್ಧಿ

ಕೊಳವೆಬಾವಿಗಳನ್ನು ಕೊರೆಸಿ ಕೈಸುಟ್ಟುಕೊಳ್ಳುವ ಬದಲು ರೈತರು ಕೃಷಿ ಹೊಂಡಗಳ ಮೂಲಕ ಜಲ ಸಂರಕ್ಷಣೆ ಮಾಡಿದರೆ ಯಶಸ್ವಿ ಕೃಷಿಕರಾಗಬಹುದು ಎಂಬುದಕ್ಕೆ ದಾವಣಗೆರೆ ತಾಲೂಕು ಹಾಲುವರ್ತಿ ಗ್ರಾಮದ ರೈತ ಎಚ್.ಎಂ.ದ್ಯಾಮಣ್ಣ ಉದಾಹರಣೆಯಾಗಿದ್ದಾರೆ. ದ್ಯಾಮಣ್ಣ ಯಶೋಗಾಥೆಯಿಂದ ಪ್ರೇರಣೆಗೊಂಡು ಸುತ್ತಮುತ್ತಲಿನ ಗ್ರಾಮಗಳ ಕೃಷಿಕರೂ ಈ ಕಾರ್ಯದತ್ತ ಆಸಕ್ತಿ ತೋರಿದ್ದಾರೆ.
ಬೋರ್ವೆಲ್ಗಳನ್ನೇ ನಂಬಿ 11 ಎಕರೆ ತೋಟದಲ್ಲಿ ಬೆಳೆದಿದ್ದ ಅಡಕೆ, ತೆಂಗು ಇನ್ನಿತರ ಬೆಳೆಗಳನ್ನು ಉಳಿಸಿಕೊಳ್ಳಲು ದ್ಯಾಮಣ್ಣ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. 2016 ರಿಂದ 18ರವರೆಗೆ ಕೊಳವೆಬಾವಿ ಕೊರೆಸುವುದಕ್ಕಾಗಿಯೇ ಅವರು -ಠಿ; 10-12 ಲಕ್ಷ ಖರ್ಚು ಮಾಡಿದರು. ಮಳೆ ಇಲ್ಲದೆ ಬೋರ್ಗಳು ಒಣಗಿದಾಗ, ಸಮುದಾಯ ಕೃಷಿ ಹೊಂಡದ ಆಲೋಚನೆ ಹೊಳೆಯಿತು.
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನವೂ ದೊರೆಯಿತು. 2019ರ ಜೂನ್ನಲ್ಲಿ 8.50 ಲಕ್ಷ ರೂ.ಗಳಲ್ಲಿ ಒಂದು ಎಕರೆಯಷ್ಟು ಜಾಗದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದರು. 320 ಅಡಿ ಉದ್ದ, 140 ಅಡಿ ಅಗಲ, 24 ಅಡಿ ಆಳದ ಹೊಂಡವು 2.80 ಕೋಟಿ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೃಷಿ ಹೊಂಡ ನಿರ್ವಣವಾದ ತಿಂಗಳಲ್ಲೇ ಮಳೆ ಬಂದು ಅರ್ಧ ಹೊಂಡ ಭರ್ತಿಯಾಯಿತು. 2 ತಿಂಗಳ ನಂತರ ಇನ್ನೊಂದು ಮಳೆ ಬಂದಾಗ ಪೂರ್ತಿ ತುಂಬಿಕೊಂಡಿತು. ಇಂದಿನವರೆಗೂ ಆ ಹೊಂಡ ಖಾಲಿಯಾಗಿಲ್ಲ. ಅಡಕೆ ಬೆಳೆಯುವ ಕ್ಷೇತ್ರವನ್ನು 2 ಎಕರೆ ವಿಸ್ತರಿಸಿಕೊಂಡಿದ್ದಾರೆ.
ಗುಡ್ಡದ ತುದಿಯಲ್ಲಿ ಚಮತ್ಕಾರ!
ಗುಡ್ಡದ ತುದಿಯಲ್ಲಿ 2121 ಮೀಟರ್ ಉದ್ದ-ಅಗಲ ಹಾಗೂ 4.5 ಮೀಟರ್ ಆಳವಾದ ವಿಶಾಲ ಕೆರೆ. 21 ಲಕ್ಷ ಲೀಟರ್ ಸಾಮರ್ಥ್ಯದ ಈ ಕೆರೆ ಮಳೆಗಾಲದಲ್ಲಿ ಎರಡು ಬಾರಿ ಪೂರ್ತಿ ತುಂಬಿಸಬಹುದು. ಕೆಳಭಾಗದಲ್ಲಿರುವ ತೋಟಕ್ಕೆ ಯಾವುದೇ ಇಂಧನದ ಅವಶ್ಯಕತೆ ಇಲ್ಲದೆ ಗುರುತ್ವ ಬಲದಲ್ಲಿ ನೀರುಣಿಸಬಹುದು. ಇದು ದಕ್ಷಿಣ ಕನ್ನಡ-ಕೇರಳದ ಗಡಿಭಾಗದಲ್ಲಿರುವ ಮಾಣಿಲ ಸಮೀಪದ ಮಾಣಿಮೂಲೆ ಗೋವಿಂದ ಭಟ್ಟರ ಜಲಸಂರಕ್ಷಣೆಯ ಕಥೆ.
ಗೇರುಬೀಜ ಮರಗಳ ಗುಡ್ಡದ ತುದಿಯಲ್ಲಿ ಕಳೆದ ವರ್ಷ ಬೃಹತ್ ಕೆರೆ ನಿರ್ವಿುಸಿರುವ ಭಟ್ಟರು, ಅದಕ್ಕೆ ಸಿಲ್ಪಾಲಿನ್ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದಾರೆ. ಅದು ಮಳೆಯಿಂದಲೇ ತುಂಬಬಹುದು ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಕೆಳಗಿರುವ ಕೆರೆಯಿಂದ ನೀರು ತುಂಬಿಸುವುದು ಉದ್ದೇಶವಾಗಿತ್ತು. ಗುಡ್ಡದ ಕೆರೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದು ಸೆಪ್ಟೆಂಬರ್ನಲ್ಲಿ. ಬಳಿಕ ಅದೃಷ್ಟವಶಾತ್ ಉತ್ತಮ ಮಳೆಯಾಗಿ ಕೆರೆ ಅರ್ಧ ತುಂಬಿದೆ. ಇದೇ ಮಳೆ ನೀರನ್ನೇ ಬಳಸಿಕೊಂಡು ಕೃಷಿ ಮಾಡಬಹುದು ಎನ್ನುವುದಕ್ಕೆ ಭಯವಿಲ್ಲ ಎನ್ನುತ್ತಾರೆ ಗೋವಿಂದ ಭಟ್. 18 ಎಕರೆ ಜಾಗ ಹೊಂದಿರುವ ಭಟ್ಟರ ಗುಡ್ಡ ರಸ್ತೆಯ ಮೇಲ್ಭಾಗದಲ್ಲಾದರೆ ತೋಟ ಕೆಳಭಾಗದಲ್ಲಿದೆ. 500 ಅಡಿ ಎತ್ತರದಿಂದ ನೀರು ಹರಿದು ಬಂದು ಇಡೀ ತೋಟಕ್ಕೆ ಬಳಕೆಯಾಗುತ್ತಿದೆ.
ಮಳೆ ಕೊಯ್ಲು ಎಂಬ ಸಂಜೀವಿನಿ
ಮಳೆ ಕೊಯ್ಲು ವಿಧಾನದ ಮೂಲಕ ಜಲಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾದರಹಳ್ಳಿಯ ಗೋ ಆಧರಿತ ಕೃಷಿಕ ಮರಿದೇಶಿಗೌಡ ಅವರಿಗೆ ನಾಲ್ಕು ವರ್ಷದಿಂದ ನೀರಿನ ಅಭಾವ ಎದುರಾಗಿಲ್ಲ. ಪಡ್ರೆ ಅವರ ಮಳೆ ಕೊಯ್ಲು ಪದ್ಧತಿ ಬಗ್ಗೆ ತಿಳಿದಕೊಂಡ ಮರಿದೇಶಿಗೌಡ ತಮ್ಮ ತೋಟದಲ್ಲಿ ಮಳೆ ಕೊಯ್ಲು ಅಳವಡಿಸಿಕೊಂಡರು. ತೋಟದಮನೆಯ 12 ಚದರಡಿ ಛಾವಣಿಗೆ ಬೀಳುವ ಮಳೆನೀರು ಕೊಳವೆಬಾವಿಗೆ ಹೋಗುವಂತೆ ಮಾಡಿದ್ದಾರೆ. ಇದರಿಂದಾಗಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಮನೆಯ ಪಕ್ಕದಲ್ಲಿಯೇ ಇರುವ ಅರ್ಧ ಎಕರೆ ಜಮೀನಿನಲ್ಲಿ ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ. ಇಲ್ಲಿ ತುಂತುರು ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ನೀರಿನ ವ್ಯರ್ಥ ಬಳಕೆಯಾಗದಂತೆ ನೋಡಿಕೊಂಡಿದ್ದಾರೆ.
ಬತ್ತಿಹೋಗಿದ್ದ ಕೆರೆಗೆ ಮರುಜೀವ!
ಎಲ್ಲಿ ಕೆರೆಕಟ್ಟೆಗಳು ತುಂಬಿರುತ್ತವೆಯೋ ಆ ಗ್ರಾಮ ಸಮೃದ್ಧವಾಗಿರುತ್ತದೆ…! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಬತ್ತಿಹೋಗಿದ್ದ ಕೆಲವು ಕೆರೆಗಳ ಹೂಳನ್ನು ಸ್ವಂತ ಖರ್ಚಿನಲ್ಲಿ ತೆಗಿಸಿ, ಜಲಮೂಲ ವೃದ್ಧಿಗೆ ಕಾರಣವಾಗಿರುವ ಉದ್ಯಮಿ ಹರಪಳ್ಳಿ ರವೀಂದ್ರ ಅವರ ಅನುಭವದ ನುಡಿಯಿದು.
ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಯಡೂರು ಗ್ರಾಮದಲ್ಲಿರುವ ಊರದೇವರ ಕೆರೆ ಹೂಳು ತುಂಬಿಕೊಂಡು ಬತ್ತುತ್ತಿತ್ತು. ಇದನ್ನು ಗಮನಿಸಿದ ರವೀಂದ್ರ 8 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗಿಸಿ, ಕೆರೆಗೆ ಮರುಜೀವ ನೀಡಿದ್ದಾರೆ. ಇದೀಗ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಜನ-ಜಾನುವಾರುಗಳು ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಸೋಮವಾರಪೇಟೆ ಪಟ್ಟಣದಲ್ಲಿರುವ ಆನೆಕೆರೆ ನಿರ್ವಹಣೆ ಇಲ್ಲದೆ ಬತ್ತಿ ಹೋಗಿತ್ತು. ಇದನ್ನು ಅರಿತ ರವೀಂದ್ರ 8 ತಿಂಗಳ ಹಿಂದೆ ಕೆರೆ ಹೂಳು ತೆಗೆಸಿದರು. ಈಗ ಕೆರೆಯಲ್ಲಿ ನೀರು ಸಂಗ್ರಹವಾಗಿದೆ.
ವರ್ಷದ ಮಳೆನೀರು 3 ವರ್ಷಕ್ಕೆ ಸಾಕು
‘ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲು ಇಲ್ಲಿನ ಮಳೆ ನೀರು ಸಂಗ್ರಹಿಸಿದರೆ ಸಾಕು. ಒಂದು ವರ್ಷ ಬೀಳುವ ಮಳೆ ನೀರನ್ನು ಹಿಡಿದಿಟ್ಟರೆ ಮೂರು ವರ್ಷಕ್ಕಾಗುವಷ್ಟು ಆಗುತ್ತದೆ. ಆದರೆ ಇಲ್ಲಿ ಸಮಸ್ಯೆ ಬಗೆಹರಿಯುವುದು ಯಾರಿಗೂ ಬೇಕಿಲ್ಲ’. ಇದು ಖ್ಯಾತ ಜಲ ಸಂರಕ್ಷಕ, ಜಲ ಸಾಕ್ಷರತೆ ತರಬೇತುದಾರ ಅಯ್ಯಪ್ಪ ಮಸಗಿ ಅವರ ಸ್ಪಷ್ಟ ಹಾಗೂ ನೋವಿನ ನುಡಿಗಳು.
ಮೂಲತಃ ಗದಗದವರಾದ ಅಯ್ಯಪ್ಪ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಪ್ಪತ್ಮೂರು ವರ್ಷ ಕಾರ್ಯನಿರ್ವಹಿಸಿದ ನಂತರ ಜಲ ಸಾಕ್ಷರತೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ‘ಜಲ ಸಾಕ್ಷರತಾ ಪ್ರತಿಷ್ಠಾನ’ದ ಮೂಲಕ ರಾಜ್ಯದ ಮೂಲೆಮೂಲೆಯಲ್ಲಿ ಯುವಕರು, ರೈತರಿಗೆ ಜಲ ಸಂರಕ್ಷಣೆಯ ತರಬೇತಿ ನೀಡುತ್ತಿದ್ದಾರೆ. ರೈತರು ಹೊಲದಲ್ಲಿ ಅರಣ್ಯ ಕೃಷಿ ಅನುಸರಿಸಿದರೆ ಆಗುವ ಲಾಭಗಳನ್ನು ತಿಳಿಸಿದ್ದು, ಇದೀಗ 1 ಲಕ್ಷ ಎಕರೆ ಪ್ರದೇಶದಲ್ಲಿ ಜಲಸಂರಕ್ಷಣೆ ವಿಧಾನಗಳನ್ನು ಅಳವಡಿಸಲಾಗಿದೆ. ‘ಬೆಂಗಳೂರಿನಂತಹ ನಗರಗಳ ಲೇಔಟ್ಗಳಲ್ಲಿ ಜಲ ಸ್ವಾವಲಂಬನೆಗೆ ಸಲಹೆ ಕೇಳುತ್ತಿದ್ದಾರೆ. 1 ಎಕರೆ ಪ್ರದೇಶದ ಲೇಔಟ್ನ ರಸ್ತೆಗಳ ನಡುವೆ ಜಲ ಮರುಪೂರಣ ವ್ಯವಸ್ಥೆ ಅಳವಡಿಸಿದರೆ ವರ್ಷಕ್ಕೆ 40 ಲಕ್ಷ ಲೀ. ನೀರು ಹಿಡಿಯಬಹುದು. 15-20 ಸಾವಿರ ರೂ. ವೆಚ್ಚ ಮಾಡಿದರೆ 3040 ತಾರಸಿಯ ಮನೆಯಿಂದ ವರ್ಷಕ್ಕೆ ಕನಿಷ್ಠ ಲಕ್ಷ ಲೀ. ನೀರು ಸಂಗ್ರಹಿಸಬಹುದು’ ಎನ್ನುತ್ತಾರೆ ಅಯ್ಯಪ್ಪ.
ಪ್ರಧಾನಿ ಜತೆ ಸಂವಾದ
ಕೆರೆಗಳಿಗೆ ಮರುಜೀವ ನೀಡಿದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ವಿಡಿಯೋ ಕಾನ್ಪರೆನ್ಸ್ ಸಂವಾದದಲ್ಲಿ ಭಾಗವಹಿಸಲು ಬೀದರ ಜಿಲ್ಲೆ ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನಿಕೆರೆ ಅವರಿಗೆ ಆಹ್ವಾನ ಬಂದಿದೆ. ಸೋಮವಾರ ಮಧ್ಯಾಹ್ನ 12.42ಕ್ಕೆ ಬೀದರ್ ಡಿಸಿ ಕಚೇರಿಯಲ್ಲಿ ನಡೆಯಲಿರುವ ಜಲಶಕ್ತಿ ಅಭಿಯಾನ ಮತ್ತು ವಿಡಿಯೋ ಕಾನ್ಪರೆನ್ಸ್ ಸಂವಾದದಲ್ಲಿ ಶ್ರೀನಿವಾಸ ಪ್ರಧಾನಿ ನರೇಂದ್ರ ಮೋದಿ ಜತೆ ನೀರಿನ ಸಮರ್ಪಕ ಬಳಕೆ ಕುರಿತು ಅನಿಸಿಕೆ ಹಂಚಿಕೊಳ್ಳಲಿದ್ದಾರೆ.
ಧೂಪತ್ ಮಹಾಗಾಂವ್ ಗ್ರಾಮದಲ್ಲಿ ಒತ್ತುವರಿಯಾಗಿ ಪಾಳು ಬಿದ್ದಿದ್ದ 12ನೇ ಶತಮಾನದ ಗುಗ್ಗವೆ ಕೆರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಯಕಲ್ಪ ನೀಡಿದ ಹೆಗ್ಗಳಿಕೆ ಶ್ರೀನಿವಾಸ ಜೊನ್ನಿಕೆರೆ ಅವರದ್ದು. ಕರೊನಾ ಸಂಕಷ್ಟದ ಸಮಯದಲ್ಲಿ 10 ಲಕ್ಷ ಅನುದಾನ ಖರ್ಚು ಮಾಡಿ ಜನರಿಗೆ ಉದ್ಯೋಗ ನೀಡಿ ಕೆರೆ ಹೂಳೆತ್ತುವ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಮಳೆಯಾಗಿದ್ದರಿಂದ ಕೆರೆಯಲ್ಲಿ ನೀರಿನ ಮಟ್ಟವೂ ಹೆಚ್ಚಾಗಿದೆ. ಇದರಿಂದ ಊರಿನ 4000 ಜನರ ಜತೆಗೆ ಜಾನುವಾರುಗಳ ದಾಹವನ್ನು ಈ ಕೆರೆ ನೀಗಿಸುತ್ತಿದೆ. ಕೆರೆ ಹೂಳೆತ್ತುವುದರ ಜತೆಗೆ ಸಮರ್ಪಕ ನಿರ್ವಹಣೆಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿರುವುದು ಶ್ರೀನಿವಾಸ ಪ್ರಯತ್ನಕ್ಕೆ ಸಾರ್ಥಕತೆ ತಂದುಕೊಟ್ಟಿದೆ.