More

    ವರ್ಷಪೂರ್ತಿ ಇಳುವರಿ, ನಿರಂತರ ಆದಾಯ; ಹೂವ ಬೆಳೆಯೋಣ ಬನ್ನಿ 

    ಹೂವುಗಳ ಕೃಷಿಯು ವರ್ಷ ಪೂರ್ತಿ ಇಳುವರಿ ಸಿಗುವ, ಕೆಲಸಗಾರರ ಅವಶ್ಯಕತೆ ಕಡಿಮೆ ಇರುವ ಮತ್ತು ನಿರಂತರವಾಗಿ ಹೆಚ್ಚು ಆದಾಯ ತರುವ ವ್ಯವಸಾಯ.

    ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಬಳೂತಿ ಗ್ರಾಮದ ಯುವ ರೈತ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೊದಲ ಬಾರಿಗೆ ಹೂ ಬೆಳೆಯನ್ನು ಬೆಳೆದು ಅದರಲ್ಲಿ ಯಶಸ್ಸು ಕಂಡು ಸೈ ಎನಿಸಿಕೊಂಡಿದ್ದಾರೆ.

    ಮಹಾಂತೇಶ್ ಚೌಧರಿ ಧಾರವಾಡ ಜೆಎಸ್​ಎಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿಕೊಂಡು ಸದ್ಯ ಕೃಷಿಯತ್ತ ಗಮನ ಹರಿಸಿದ್ದಾರೆ. ಇವರದು ಮೂಲತಃ ಅವಿಭಕ್ತ ಕುಟುಂಬ. ಅಂದಾಜು 60ಕ್ಕೂ ಹೆಚ್ಚು ಜನರು ಒಂದೇ ಮನೆಯಲ್ಲಿ ವಾಸಿಸುತ್ತಾರೆ. 120 ಎಕರೆ ಜಮೀನಿದೆ. ಅದರಲ್ಲಿ ಸುಮಾರು ನಾಲ್ಕೈದು ಎಕರೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಳದಿ ಮತ್ತು ಬಿಳಿ ಸೇವಂತಿಗೆ ಹೂ ಬೆಳೆದಿದ್ದಾರೆ.

    ಈ ತಳಿ ಮೂಲತಃ ತಮಿಳುನಾಡಿನದು. ಇದಕ್ಕೆ ಯೆಲ್ಲೋ ಪೇಪರ್ ಎಂಬ ಇನ್ನೊಂದು ಹೆಸರೂ ಇದೆ. ಇದರಲ್ಲಿ ಹಳದಿ ಮತ್ತು ಕೆಂಪು ಎರಡು ವಿಧಗಳಿವೆ. ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಗ್ರಾಮದಲ್ಲಿ ತಲಾ 2 ರೂ. ದರದಲ್ಲಿ ಅಂದಾಜು 50 ಸಾವಿರ ಸಸಿಗಳನ್ನು ಖರೀದಿಸಿ ತಂದು ತಮ್ಮ 4 ಎಕರೆಯಲ್ಲಿ ನಾಟಿ ಮಾಡಿದ್ದಾರೆ. ಸಸಿ ಸಂರಕ್ಷಣೆ, ಕ್ರಿಮಿನಾಶಕ ಸಿಂಪರಣೆ, ರಾಸಾಯನಿಕ ಗೊಬ್ಬರ ಹೀಗೆ ಒಟ್ಟಾರೆ ಎಲ್ಲವೂ ಸೇರಿ 1 ಲಕ್ಷ ರೂ. ಖರ್ಚಾಗಿದೆ. ಸಸಿ ನಾಟಿ ಮಾಡಿದ ಮೂರು ತಿಂಗಳ ನಂತರ ಹೂ ಬಿಡಲು ಆರಂಭಿಸಿವೆ.

    ಹೂಗಳನ್ನು ಸಮೀಪದ ವಿಜಯಪುರ, ಬಾಗಲಕೋಟೆ ಮಾರುಕಟ್ಟೆಗೆ ಸಾಗಿಸುತ್ತಾರೆ. ಒಂದು ಕೆಜಿ ಹೂ 80 ರೂ. ದರಕ್ಕೆ ಮಾರಾಟವಾಗುತ್ತದೆ. ಆಪ್ತರೊಬ್ಬರ ಸಲಹೆಯಂತೆ ಪುಣೆ, ಮುಂಬೈ ಮಾರುಕಟ್ಟೆಗೂ ಹೂ ಸಾಗಿಸಲು ಆರಂಭಿಸಿದ್ದಾರೆ. ನಮ್ಮಲ್ಲಿಗಿಂತ ಅಲ್ಲಿ ಹೆಚ್ಚಿನ ದರಕ್ಕೆ ಹೂವು ಮಾರಾಟವಾಗುತ್ತದೆ. ಸ್ಥಳೀಯ ನಿಡಗುಂದಿ, ಕೋಲ್ಹಾರ, ತಡಲಗಿ ಗ್ರಾಮಗಳಲ್ಲೂ ಈ ರೈತನ ಹೂ ಹೆಸರುವಾಸಿಯಾಗಿದೆ. ಇವರನ್ನು ನೋಡಿ ಈ ಭಾಗದಲ್ಲಿ ಅನೇಕ ರೈತರು ಈಗ ಪುಷ್ಪ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

    ಮಹಾಂತೇಶ್ ಉತ್ತಮ ಇಳುವರಿ ಬರುವ ಸೇವಂತಿಗೆ, ಚೆಂಡು ಹೂಗಳನ್ನು ಬೇಡಿಕೆ ಹೆಚ್ಚಾಗಿರುವ ಸಮಯದಲ್ಲಿ ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಾರೆ. ಈ ಯುವ ರೈತ ಶಿಕ್ಷಣದಲ್ಲಿ ಮುಂದುವರೆದು ನಿಗದಿತ ಆದಾಯ ತರುವ ಕೆಲಸಕ್ಕೆ ಹೋಗದೆ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಿರುವುದು ವಿಶೇಷ. ಇದೆಲ್ಲದಕ್ಕೂ ಇವರ ತಂದೆ ನಂದಬಸಪ್ಪ ಚೌಧರಿ ಮಾರ್ಗದರ್ಶಕರಾಗಿದ್ದಾರೆ. ಹೂವಿನ ಬೆಳೆಯ 4 ಎಕರೆ ಮಾತ್ರವಲ್ಲದೆ, ಇವರ ಕುಟುಂಬದ ಇತರ ಸದಸ್ಯರು 10 ಎಕರೆಯಲ್ಲಿ ಪೇರು, 4 ಎಕರೆಯಲ್ಲಿ ದಾಳಿಂಬೆ, ಹೆಬ್ಬೇವು, ಮಾವು ಹೀಗೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ.

    ರೈತ ನಂದಬಸಪ್ಪ 2008ರಲ್ಲಿ ಸರ್ಕಾರದಿಂದ ಕೃಷಿ ಅಧ್ಯಯನ ಪ್ರವಾಸಕ್ಕೆ ಚೀನಾ ದೇಶಕ್ಕೆ ಹೋಗಿದ್ದರು. ಅಲ್ಲಿನ ಕೃಷಿಯ ಕೆಲವು ಉತ್ತಮ ಅಂಶಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ಅವರಿಗೆ ಕೃಷಿ ಕೇತ್ರದಲ್ಲಿ 40ಕ್ಕೂ ಅಧಿಕ ಪ್ರಶಸ್ತಿಗಳು ಬಂದಿವೆ. (ಸಂಪರ್ಕಕ್ಕೆ 9663337090)

    ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವುದು ನನ್ನ ಕನಸು. ಹೀಗಾಗಿ ನಾನು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದು ಲಾಭ ಕಂಡಿದ್ದೇನೆ. ಸದ್ಯ ಹೂ ಬೆಳೆ ಇದ್ದು ಇದು ಮುಗಿಯುವ ಸಮಯಕ್ಕೆ ಪೇರು ಸೀಬೆ ಬೆಳೆಗಳು ಕಾಯಿ ಬಿಡಲು ಆರಂಭಿಸುತ್ತವೆ. ಅದರಲ್ಲಿ ವರ್ಷಕ್ಕೆ 20 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ಪೇರು ಕೃಷಿಯಿಂದ 10 ವರ್ಷ ನಿರಂತರ ಆದಾಯ ಪಡೆಯಬಹುದಾಗಿದೆ.

    | ಮಹಾಂತೇಶ್ ಚೌಧರಿ ಯುವ ರೈತ  

    | ಪ್ರಶಾಂತ ಜಿ ಹೂಗಾರ ಬಾಗಲಕೋಟೆ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts