ಬತ್ತದ ಭಾಗೀರಥಿ ಎಸ್.ಎಲ್.ಭೈರಪ್ಪನವರ ಸರಸ್ವತಿ…

ಮೈಸೂರಿನ ಕಲಾಮಂದಿರದಲ್ಲಿ ಜನವರಿ 19 ಮತ್ತು 20ರಂದು ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ ನಡೆಯಲಿದ್ದು, 2 ದಿನಗಳ ಕಾಲ ಭೈರಪ್ಪನವರ ಕೃತಿಗಳ ಬಗ್ಗೆ ಚರ್ಚೆ, ಸಂವಾದ ನಡೆಯಲಿದೆ. ತನ್ನಿಮಿತ್ತ ಈ ವಿಶೇಷ ಲೇಖನ.

ವಾಲ್ಮೀಕಿಮುನಿಗಳ ಶ್ರೀಮದ್ರಾಮಾಯಣ, ವ್ಯಾಸ ಮಹರ್ಷಿಗಳ ಶ್ರೀಮನ್ಮಹಾಭಾರತ, ಹೋಮರ್​ನ ಇಲಿಯಡ್ ಮತ್ತು ಒಡಿಸ್ಸಿ, ವರ್ಜಿಲ್​ನ ಈನಿಯಡ್, ಡಾಂಟೆಯ ಡಿವೈನ್ ಕಾಮಿಡಿ, ಮಿಲ್ಟನ್​ನ ಪ್ಯಾರಡೈಸ್ ಲಾಸ್ಟ್ ಮುಂತಾದ ವಿಶ್ವದ ಮಹಾಕಾವ್ಯಗಳು ಯುಗಯುಗಗಳಲ್ಲಿಯೂ ಪುನರ್ಮನನ, ಪುನರ್ವಿಮರ್ಶೆ ಮತ್ತು ಪುನಮೌಲ್ಯಮಾಪನಗಳಿಗೆ ಒಳಪಡುತ್ತಿರುವುದು ಸರ್ವವಿದಿತ. ಈ ಮಹಾಕೃತಿಗಳನ್ನಾಧರಿಸಿ ಬಗೆಬಗೆಯ ವಿಮರ್ಶೆಗಳು, ಟೀಕೆ-ಟಿಪ್ಪಣಿಗಳು, ವ್ಯಾಖ್ಯಾನ- ವಿವರಣೆಗಳು ಹಾಗೂ ಹೊಸಬಗೆಯ ಸಾಹಿತ್ಯರಚನೆಗಳು ಬೇರೆ ಬೇರೆ ನಿಟ್ಟುಗಳಿಂದ ಈಗಲೂ ಸೃಷ್ಟಿಯಾಗುತ್ತಿವೆ.

ಇದೇ ರೀತಿ ನಮ್ಮ ಜೀವಮಾನದಲ್ಲಿ, ನಮ್ಮದೇ ನುಡಿಯಲ್ಲಿ, ನಾವು ಕಂಡಿರುವ ಶ್ರೇಷ್ಠಸಾಹಿತಿಗಳ ಸಾಹಿತ್ಯವನ್ನು ಕುರಿತೂ ಹತ್ತಿಪ್ಪತ್ತು ವರ್ಷಗಳಿಗೊಮ್ಮೆಯಾದರೂ ಇಂಥ ಪುನರಾವಲೋಕನ ಆವಶ್ಯಕವೆನಿಸುತ್ತದೆ. ಸಾಹಿತ್ಯಕೃತಿಯೊಂದು ರಚಿತವಾಗಿ ನೂರು ವರ್ಷ ಕಳೆದರೂ ಅದರ ಜನಪ್ರಿಯತೆ ಮತ್ತು ಪ್ರಸ್ತುತತೆ ಉಳಿದಾಗ ಅದು ಸಾರ್ವಕಾಲಿಕವಾದ ಅಭಿಜಾತಕೃತಿಯೆನಿಸುವುದೆಂದು ಅನೇಕರ ಅಭಿಪ್ರಾಯ. ನಮ್ಮ ಕನ್ನಡನಾಡಿನಲ್ಲಿ ಇಂಥ ಅಭಿಜಾತಕೃತಿಗಳನ್ನು ನಿರ್ವಿುಸಿದ ಎಷ್ಟೋ ಲೇಖಕರಿದ್ದಾರೆ. ಇಂಥವರ ಪೈಕಿ ಡಾ.ಎಸ್. ಎಲ್. ಭೈರಪ್ಪನವರೂ ಒಬ್ಬರು.

ಭೈರಪ್ಪನವರು ಕೃತಿರಚನೆಗೆ ತೊಡಗಿದ ಆರಂಭದ ದಿನಗಳಿಂದಲೂ ಅವರ ಮತ್ತವರ ಸಾಹಿತ್ಯಸೃಷ್ಟಿಯ ವಿರುದ್ಧ ಪ್ರಬಲವಾದ ಧ್ವನಿಗಳೆದ್ದಿದ್ದವು. ಇವುಗಳಲ್ಲಿ ಸಾಹಿತ್ಯೇತರವಾದುವೇ ಹೆಚ್ಚು. ಕಾಲದ ಅಂತರದಲ್ಲಿ ಈ ಗದ್ದಲ ಕಡಿಮೆಯಾಗಿದೆ. ಜೊತೆಗೆ, ಅವರ ಸಾಹಿತ್ಯಕೃಷಿ ಮೊದಲಾಗಿ ಷಷ್ಟಿಪೂರ್ತಿಯೇ ಕಳೆಯುತ್ತ ಬಂದಿದೆ. ಆದುದರಿಂದ ಭೈರಪ್ಪನವರ ವಾಙ್ಮಯದಲ್ಲಿ ಹಾಸು-ಹೊಕ್ಕಾಗಿರುವ ರಚನಾವಿನ್ಯಾಸ ಮತ್ತು ಕಲಾತ್ಮಕತೆಗಳ ಮೌಲ್ಯಮೀಮಾಂಸೆಗೆ ಇದು ಯುಕ್ತಕಾಲವೆನಿಸುತ್ತದೆ.

ವಿಶ್ವಜೀವನ ಮತ್ತದನ್ನು ಅನುಸರಿಸಿ ಬರುವ ವಿಶ್ವಸಾಹಿತ್ಯದ ಮಹಾಕೃತಿಗಳೆಲ್ಲ ಹುಟ್ಟು-ಸಾವು, ಅರ್ಥ-ಕಾಮ, ಒಳಿತು-ಕೆಡುಕು ಮುಂತಾದ ಹಲವು ಮೂಲಭೂತಸಂಗತಿಗಳ ಮೌಲ್ಯಮೀಮಾಂಸೆಯನ್ನು ದಣಿವಿಲ್ಲದೆ ಮಾಡುತ್ತ ಬಂದಿವೆ. ಭೈರಪ್ಪನವರ ಕಾದಂಬರಿಗಳಲ್ಲಿ ಈ ಎಲ್ಲ ಮೌಲ್ಯಗಳ ವ್ಯಾಪಕವಾದ ಪ್ರಗಲ್ಭಮೀಮಾಂಸೆಯಿದೆ. ಮಾತ್ರವಲ್ಲ, ಇವುಗಳಿಗಂಟಿ ಬರುವ ಮತ್ತೆಷ್ಟೋ ಉಪಮೌಲ್ಯಗಳ, ಸಂಘರ್ಷಗಳ ವಿವೇಚನೆಯೂ ಇದೆ. ಇವೆಲ್ಲ ತುಂಬ ಸಾಂದ್ರವಾದ ರಸಾನುಭವದ ಪರಿಪಾಕವನ್ನು ಮುಟ್ಟುವುದು ಗಮನಾರ್ಹ. ಈ ಮಟ್ಟದ ಆಳ-ಅಗಲಗಳಲ್ಲಿ ನಾವರಿತಂತೆ ಮತ್ತಾವ ಭಾರತೀಯಲೇಖಕರೂ ಸಾಹಿತ್ಯವನ್ನು ನಿರ್ವಿುಸಿಲ್ಲ.

ದಿಗ್ದರ್ಶಕವಾಗಿ ಭೈರಪ್ಪನವರ ಕಾದಂಬರಿಗಳ ಕೇಂದ್ರಸಂಗತಿಗಳನ್ನು ಗಮನಿಸಬಹುದು: ಹುಟ್ಟು-ಸಾವುಗಳ ವ್ಯಾಪಕಮೀಮಾಂಸೆ ಮುಖ್ಯವಾಗಿ ‘ವಂಶವೃಕ್ಷ’, ‘ಪರ್ವ’ ಮತ್ತು ‘ನೆಲೆ’ಗಳಲ್ಲಿ ಬರುತ್ತದೆ. ಇವುಗಳಲ್ಲಿ ವಂಶಪ್ರಜ್ಞೆ, ವಂಶದ ಪಾವಿತ್ರ್ಯ, ಹುಟ್ಟಿನಿಂದಾಗಿ ತೀರ್ವನವಾಗುವ ವರ್ಣ-ಜಾತಿ, ಹುಟ್ಟಿಗೆ ಅನಿವಾರ್ಯಪೂರ್ವಭಿತ್ತಿಯಾದ ಸ್ತ್ರೀ-ಪುರುಷಸಂಬಂಧಗಳ ಅನೇಕಪ್ರಕಾರಗಳು, ಇಂಥ ಸಂಬಂಧಕ್ಕೆ ಅಧಿಕೃತತೆಯನ್ನು ತಂದುಕೊಡುವ ವಿವಾಹ ಮತ್ತದರ ಆಚೆ-ಈಚಿನ ತೊಡಕುಗಳು, ಜನ್ಮದಾತರಿಗೂ ಸಂತತಿಗೂ ನಡುವಿರುವ ಸಂಬಂಧ ಮತ್ತದನ್ನು ಅನುಸರಿಸಿ ಬರುವ ತಲ್ಲಣಗಳು ಮುಂತಾದ ಅಸಂಖ್ಯಸಂಗತಿಗಳು ಪರಾಮೃಷ್ಟವಾಗಿವೆ. ಇವುಗಳಲ್ಲಿ ಹಲವು ಮಿಕ್ಕ ಕೃತಿಗಳಿಗೂ ವಿಸ್ತರಿಸಿಕೊಳ್ಳುತ್ತವೆ. ಉದಾಹರಣೆಗೆ ಅಂಚು, ಮಂದ್ರ, ಕವಲು, ಯಾನ, ಉತ್ತರಕಾಂಡ ಇತ್ಯಾದಿ.

ನಮ್ಮ ದೇಶದಲ್ಲಿ ಹುಟ್ಟಿನೊಡನೆ ಅಂಟಿ ಬರುವ ಮತ್ತೊಂದು ಸಂಗತಿ ವರ್ಣ-ಜಾತಿಗಳ ಒಳಿತು-ಕೆಡುಕುಗಳು. ಈ ಅಂಶಗಳು ಹೆಚ್ಚು-ಕಡಿಮೆ ವರ್ಗಸಂಘರ್ಷರೂಪದಲ್ಲಿ ಜಗದಾದ್ಯಂತ ಇವೆಯಾದರೂ ವರ್ಣ-ಜಾತಿಗಳ ಸಂಕೀರ್ಣತೆ ಮತ್ತೂ ಹೆಚ್ಚಿನದು. ಈ ಎಲ್ಲ ಅಂಶಗಳ ಕಲಾತ್ಮಕಚಿಂತನೆ ‘ದಾಟು’ ಕಾದಂಬರಿಯ ಕೇಂದ್ರಬಿಂದು. ಇದೇ ರೀತಿ ಪುನರ್ಜನ್ಮವೂ ಭಾರತೀಯಸಂಸ್ಕೃತಿಯ ವಿಶಿಷ್ಟವಾದ ಹೆಗ್ಗುರುತುಗಳಲ್ಲೊಂದು. ಇದರ ರಸಮಯವಿವೇಚನೆಯೇ ‘ನಾಯಿ ನೆರಳು’ ಕೃತಿಯ ಹೂರಣ.

ಹುಟ್ಟು-ಸಾವುಗಳ ನಡುವಿನ ಬದುಕು ಮತ್ತಷ್ಟು ಸಂಘರ್ಷಮಯ. ಇಂಥ ಬದುಕಿನ ದುರ್ಭರತೆಯ ಮಿಗಿಲಾದ ಆಯಾಮವೇ ಬಡತನ ಹಾಗೂ ಅವಿವೇಕ. ಇವುಗಳೊಟ್ಟಿಗೇ ಬದುಕಲು ಬಯಸುವ ಹೋರಾಟ ಅವಿರತವಾಗಿ ಸಾಗುತ್ತದೆ. ಅದು ಯಾವುದೇ ಜೀವಿಯ ಮೂಲಭೂತವಾದ ತುಡಿತ. ಇವುಗಳ ಹೃದಯವಿದ್ರಾವಕಚಿತ್ರಣವೇ ‘ಗೃಹಭಂಗ’ದ ಅಧಿಕರಣ. ಈ ಅಂಶಗಳು ‘ಅನ್ವೇಷಣ’ವೂ ಸೇರಿದಂತೆ ಭೈರಪ್ಪನವರ ಅನೇಕ ಕಾದಂಬರಿಗಳಲ್ಲಿವೆ. ಅಲ್ಲವೇ ಮತ್ತೆ? ಬದುಕೇ ಸಾಹಿತ್ಯದ ಸಾಮಗ್ರಿ!

ಹುಟ್ಟಿಗೆ ಮೂಲವಾದ ಕಾಮ-ಪ್ರೇಮಗಳ ಪ್ರಪಂಚ ಭೌತಪ್ರಪಂಚಕ್ಕಿಂತಲೂ ಅದೆಷ್ಟೋ ಪಾಲು ಮಿಗಿಲು. ಇದು ಜೀವಿಯ ಮೂಲಾಸ್ತಿತ್ವವಾದ ‘ನಾನು’ ಎಂಬ ಭಾವವನ್ನೇ ಹಿಡಿದು ಅಲ್ಲಾಡಿಸುತ್ತದೆ. ಈ ಭಾವದ ಮೀಮಾಂಸೆಯಂತೂ ಭೈರಪ್ಪನವರ ಅನೇಕಕೃತಿಗಳ ಜೀವಧಾತು. ಆದರೂ ‘ದೂರ ಸರಿದರು’, ‘ಸಾಕ್ಷಿ’, ‘ಅಂಚು’, ‘ಅನ್ವೇಷಣ’, ‘ಸಾರ್ಥ’, ‘ಮಂದ್ರ’, ‘ಕವಲು’, ‘ಯಾನ’, ‘ಉತ್ತರಕಾಂಡ’ಗಳು ಈ ನಿಟ್ಟಿನಲ್ಲಿ ಗಮನಾರ್ಹ. ವಸ್ತುತಃ ಇಡಿಯ ಜಗತ್ತನ್ನು ಹುಟ್ಟು, ಸಾವು ಮತ್ತು ಅರ್ಥ-ಕಾಮಗಳ ನಡುವೆ ಹಿಡಿದಿಡಬಹುದು. ಇಂಥ ಜಟಿಲವಾಸ್ತವದ ಕಠೋರವ್ಯವಹಾರದಲ್ಲಿ ಒಂದಿಷ್ಟಾದರೂ ನೆಮ್ಮದಿಯನ್ನು ಪಡೆಯಲು ಧರ್ಮ-ರಸ-ಮೋಕ್ಷ(ಬ್ರಹ್ಮ)ಗಳ ನೆರವು ಬೇಕೇ ಬೇಕು. ಇದರತ್ತ ಮತ್ತೆ ಮತ್ತೆ ಧ್ವನಿಪೂರ್ಣವಾಗಿ ತೋರ್ಬೆರಳನ್ನು ಚಾಚುವುದು ಭೈರಪ್ಪನವರ ಕೃತಿಗಳ ಮೌಲ್ಯಮಹತ್ತ್ವ.

ಕಾಮಕ್ಕೆ ಒದಗಿಬರುವ ಸಾಧನಮೌಲ್ಯ ಅರ್ಥ. ಇದು ವಾಣಿಜ್ಯ ಮತ್ತು ರಾಜಕೀಯಗಳ ಮಾಧ್ಯಮಗಳಲ್ಲಿ ಮಿಗಿಲಾಗಿ ವಿಜೃಂಭಿಸುತ್ತದೆ. ಅಂದರೆ, ಸಂಪತ್ತಿ-ಅಧಿಕಾರಗಳೇ ಅರ್ಥದ ಆಯತನ. ಆದರೆ ಅರ್ಥವು ತಂದೊಡ್ಡುವ ಅನರ್ಥ ಊಹಾತೀತ. ಇಂಥ ಅನರ್ಥದ ಪದರಗಳನ್ನು ತೆರೆದು ತೋರಿಸುವಲ್ಲಿ ‘ತಂತು’ವು ಅಪ್ರತಿಮವಾದರೆ, ಅದರ ರಾಜಕೀಯಮುಖಕ್ಕೊಂದು ಪುಟ್ಟ ಕೀಲಿಕೈ ‘ಮತದಾನ’. ‘ಸಾಕ್ಷಿ’ಯಲ್ಲಿಯೂ ಅರ್ಥದ ಅಪಾಯ ತತ್ತ್ವದ ಮಟ್ಟಕ್ಕೇರಿದೆ.

ವರ್ಗದಂತೆಯೇ ಮತವೂ ಒಂದು ಪ್ರಖರಮೌಲ್ಯವಾಗಿ ಮಾನವತೆಯನ್ನು ಕಾಡಿದೆ. ಇದರಲ್ಲಿ ತೋರಿಕೊಳ್ಳುವ ಒಳಿತು-ಕೆಡುಕುಗಳ ಪ್ರಮಾಣ ಅಪಾರ. ಮುಖ್ಯವಾಗಿ ಮತವೊಂದು ಉನ್ಮಾದವಾಗಿ, ರಾಜಕೀಯವಿಸ್ತರಣವಾಗಿ, ಶೋಷಣೆಯ ಸಾಧನವಾಗಿ ತೋರಿಕೊಳ್ಳುವ ಸೆಮೆಟಿಕ್ ಶ್ರದ್ಧೆಗಳಿಗೂ ಇಂತಲ್ಲದ ಸನಾತನಧರ್ಮದ ಶ್ರದ್ಧೆಗಳಿಗೂ ಇರುವ ಅಂತರ ಅಮೇಯ. ಈ ಸಂಘರ್ಷದೊಟ್ಟಿಗೆ ಅರ್ಥ-ಕಾಮಗಳ ಆಳದ ಕಳವಳಗಳೂ ಅಸ್ತಿತ್ವದ ತೊಳಲಾಟಗಳೂ ಸೇರಿದರೆ ಹೇಳುವುದೇನಿದೆ? ಇವುಗಳ ಮಾರ್ವಿುಕಚಿತ್ರಣವನ್ನು ‘ಧರ್ಮಶ್ರೀ’, ‘ಸಾರ್ಥ’ ಮತ್ತು ‘ಆವರಣ’ಗಳಲ್ಲಿ ಮುಖ್ಯವಾಗಿ ಕಾಣುತ್ತೇವೆ. ಸಾಂಸ್ಕೃತಿಕವಾಗಿ ಈ ಸಂಘರ್ಷವು ಮೆಯ್ವೆತ್ತು ಜಾನಪದ-ನಾಗರಕದ್ವಂದ್ವಗಳ ವಲಯಕ್ಕೆ ಸೇರಿದಾಗ, ಪೌರಸ್ತ್ಯ-ಪಾಶ್ಚಾತ್ಯಜೀವನಕ್ರಮಗಳಿಗೆ ವಿಸ್ತರಿಸಿಕೊಂಡಾಗ ಉಂಟಾಗುವ ಕ್ಷೋಭೆಯನ್ನು ‘ತಬ್ಬಲಿಯು ನೀನಾದೆ ಮಗನೆ’ ನಿರುಪಮವಾಗಿ ಚಿತ್ರಿಸುತ್ತದೆ. ಈ ಅಂಶಗಳನ್ನೇ ಆರ್ಥಿಕತೆ-ವಾಣಿಜ್ಯ, ಕಲಾಸ್ವಾತಂತ್ರ್ಯ-ಸೃಷ್ಟಿಶೀಲತೆ, ಗ್ರಾಮಜೀವನ-ನಗರಜೀವನಗಳ ಭಿತ್ತಿಯಲ್ಲಿ ರ್ಚಚಿಸುವ ಅಪೂರ್ವಕಲಾಖಂಡ ಜಲಪಾತ. ಈ ಸಂಗತಿಗಳೆಷ್ಟೋ ‘ತಂತು’-‘ಮಂದ್ರ’ಗಳಲ್ಲಿಯೂ ವಿಸ್ತರಿಸಿಕೊಂಡಿವೆ. ಪ್ರವೃತ್ತಿಯಂತೆಯೇ ನಿವೃತ್ತಿಯೂ ನಮ್ಮ ಮೌಲ್ಯಪ್ರಪಂಚದಲ್ಲಿ ಮುಖ್ಯ. ಈ ಬಗೆಯ ನಿವೃತ್ತಿಧರ್ಮ-ಧರ್ವಭಾಸಗಳ ಮೀಮಾಂಸೆಯನ್ನು ಮುಖ್ಯವಾಗಿ ‘ನಿರಾಕರಣ’, ‘ಗ್ರಹಣ’ ಮತ್ತು ‘ಸಾರ್ಥ’ ಕಾದಂಬರಿಗಳಲ್ಲಿ ಕಾಣಬಹುದು. ಈ ಅಂಶವು ‘ನಾಯಿ ನೆರಳು’, ‘ನೆಲೆ’, ‘ಸಾಕ್ಷಿ’, ‘ಗೃಹಭಂಗ’, ‘ಅನ್ವೇಷಣ’, ‘ಯಾನ’ಗಳಲ್ಲಿಯೂ ಕಂಡುಬರುವುದು ಗಮನಾರ್ಹ.

ಹೀಗೆ ಭೈರಪ್ಪನವರ ಕೃತಿಗಳಲ್ಲಿ ಅಸಂಖ್ಯಮೌಲ್ಯಗಳ ತಲರ್ಸ³ಚಿಂತನವು ಉಸಿರುಗಟ್ಟಿಸುವಂಥ ಕಲಾತ್ಮಕವಿಸ್ತರದಲ್ಲಿ ಹೆಪ್ಪುಗಟ್ಟುತ್ತದೆ. ಹಾಗೆಂದು ಅವರು ಯಾವೊಂದು ಮೌಲ್ಯವನ್ನೂ ಕೃತಿಯೊಂದರಲ್ಲಿ ಪ್ರತ್ಯೇಕವಾಗಿ ವಿವೇಚಿಸುವ ದುಡುಕನ್ನು ತೋರುವುದಿಲ್ಲ. ಅದೇನಿದ್ದರೂ ಚರ್ಚಾಪಟುಗಳ, ಸುಧಾರಣವಾದಿಗಳ, ರಸೇತರಮೌಲ್ಯಗಳಿಗಾಗಿ ಕಲೆಯನ್ನು ದುಡಿಸಿಕೊಳ್ಳುವ ಪ್ರಯೋಜನಕೃಪಣರ ಕಾಪಥ. ಪ್ರಥಮಶ್ರೇಣಿಯ ಕಲಾವಿದರಾದ ಕಾರಣ ಭೈರಪ್ಪನವರಲ್ಲಿ ಇವೆಲ್ಲ ಪ್ರತ್ಯೇಕಿಸಲಾಗದಂಥ ಸಂಕೀರ್ಣ-ಸಮವಾಯರೂಪದಲ್ಲಿ ಆವಿರ್ಭವಿಸುತ್ತವೆ. ಇದಕ್ಕೆ ಮಿಗಿಲಾದ ಸಾಕ್ಷಿಯಾಗಿ ‘ತಂತು’ವನ್ನು ಹೆಸರಿಸಬಹುದು. ಆಧುನಿಕಮಹಾಭಾರತವೆನ್ನಬಹುದಾದ ಈ ಕೃತಿ ಮುಟ್ಟದ ಮೌಲ್ಯವಿಲ್ಲ, ತಟ್ಟದ ಭಾವವಿಲ್ಲ. ಇಂಥ ಮಹಾಕಾವ್ಯಾತ್ಮಕವಿಸ್ತರವನ್ನು ‘ವಂಶವೃಕ್ಷ’, ‘ದಾಟು’, ‘ಪರ್ವ’, ‘ಸಾಕ್ಷಿ’, ‘ಮಂದ್ರ’ಗಳಂಥ ಉದ್ಘಕೃತಿಗಳಲ್ಲಿಯೂ ಕಾಣಬಹುದು.

ಈವರೆಗೆ ನಿರೂಪಿಸಿದ ಸೂಚನಮಾತ್ರದ ಸಂಗತಿಗಳ ಸಮಗ್ರಾಭಿವ್ಯಕ್ತಿ ಭೈರಪ್ಪನವರ ಕಾದಂಬರಿಗಳಲ್ಲಿ ಹೇಗೆ ಆವಿರ್ಭವಿಸುವುದೆಂಬುದಕ್ಕೆ ಒಂದೆರಡು ನಿದರ್ಶನಗಳನ್ನು ಕಂಡರೆ ಅವರ ರಸಸಿದ್ಧಿ ಯಾವ ಮಟ್ಟದ್ದೆಂದು ತಿಳಿಯುತ್ತದೆ. ಕೇವಲ ಹುಟ್ಟೊಂದನ್ನೇ ಗಮನಿಸುವುದಾದರೆ:

ಪಾಂಡು-ಧೃತರಾಷ್ಟ್ರರಲ್ಲದೆ ಪಾಂಡವರೂ ನಿಯೋಗಕ್ಕೆ ಜನಿಸಿದವರು. ಶಾಸ್ತ್ರೀಯವಾಗಿ ಹೇಳುವುದಾದರೆ, ವಿಧವೆಯರ ಮಕ್ಕಳಾದ ಪಾಂಡು-ಧೃತರಾಷ್ಟ್ರರು ಗೋಳಕರು; ಪಾಂಡುವಿನ ಅನುಮತಿಯಿಂದಲೇ ನಿಯೋಗದ ಮೂಲಕ ಜನಿಸಿದ ಪಾಂಡವರು ಕುಂಡಕರು. ಇಂತಿದ್ದೂ ಇವರ ಹುಟ್ಟನ್ನು ಹೇಯವಾಗಿ ಕಾಣುವ ಪದ್ಧತಿ ಬೆಳೆದದ್ದು ವಿಪರ್ಯಾಸ. ಇದೇ ರೀತಿ ಅವಿವಾಹಿತೆಯಾದ ಕನ್ಯೆಗೆ ಕಾನೀನರಾಗಿ ಹುಟ್ಟಿದವರು ವ್ಯಾಸ ಮತ್ತು ಕರ್ಣ. ಆದರೆ ವ್ಯಾಸರಿಗೆ ಸಿಕ್ಕಿದ ಗೌರವ ಕರ್ಣನಿಗೆ ದಕ್ಕಲಿಲ್ಲ. ದ್ರುಮಿಲನ ಅಕ್ರಮಸಂತಾನವಾಗಿ ಜನಿಸಿದ ಕಂಸ ಉಗ್ರಸೇನನ ಉಪೇಕ್ಷೆಗೆ ತುತ್ತಾಗಿ ಕಡೆಗೆ ಲೋಕಕಂಟಕನೇ ಆದ. ಆದರೆ ನರಕಾಸುರನ ಅತ್ಯಾಚಾರಕ್ಕೆ ತುತ್ತಾಗಿ ಹುಟ್ಟಿದ ಕ್ರತುವಿನಂಥ ಎಷ್ಟೋ ಮಕ್ಕಳು ಶ್ರೀಕೃಷ್ಣನಿಂದ ಸ್ವೀಕೃತರಾಗಿ ಒಳ್ಳೆಯ ಬದುಕನ್ನು ಕಂಡದ್ದಲ್ಲದೆ ಜಗತ್ತಿಗೂ ಒಳಿತನ್ನು ಹಬ್ಬಿಸಿದರು (ಪರ್ವ). ಇದು ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಜೀವನದ ಬಗೆಗೆ ಭೈರಪ್ಪನವರ ಭಾಷ್ಯ.

ನಮ್ಮ ಇತಿಹಾಸದ ಅಭಿಜಾತಯುಗದಲ್ಲಿ ಮುಸ್ಲಿಮರ ಅತ್ಯಾಚಾರಕ್ಕೆ ಸಿಲುಕಿದ ಚಂದ್ರಿಕೆ ತನ್ನ ಗರ್ಭಕ್ಕೆ ಸನಾತನಧರ್ಮದ ಸಂಸ್ಕಾರವನ್ನು ಕೊಡಿಸುವ ಮೂಲಕ ಬಲಾತ್ಕಾರದ ಸಂತಾನಕ್ಕೊಂದು ಆಧ್ಯಾತ್ಮಿಕಪರಿಹಾರವನ್ನು ಕಾಣುತ್ತಾಳೆ (ಸಾರ್ಥ). ಮಧ್ಯಕಾಲದ ಮುಸ್ಲಿಂ ಯುಗದಲ್ಲಿ ಇಂಥದ್ದೇ ಅತ್ಯಾಚಾರಕ್ಕೆ ಸಿಲುಕಿ ಮತಾಂತರಗೊಂಡಿದ್ದ ಪತ್ನಿಯ ಸಂತತಿಯನ್ನು ತನ್ನದನ್ನಾಗಿ ಸ್ವೀಕರಿಸುವವನು ದೇವಗಡದ ರಾಜಕುಮಾರ (ಇದೀಗ ಬರ್ಬರವಾಗಿ ನಪುಂಸಕತೆಯನ್ನು ಪಡೆದು ಬಲವಂತದ ಮತಾಂತರಕ್ಕೆ ತುತ್ತಾದ ಖ್ವಾಜಾ ಜಹಾನ್; ಆವರಣ). ಇವರಿಗೆ ದಕ್ಕಿದ ಧೀರತೆಯೇ ಶ್ರೀನಿವಾಸಶ್ರೋತ್ರಿಯರಿಗೂ ಕಡೆಗಾಲದಲ್ಲಿ ಸಿಕ್ಕಿತು; ಆದರೆ ಆಸ್ತಿಯ ಆಸೆಯಿಂದ ತನ್ನ ಹೆಂಡತಿಯನ್ನೇ ಹಾದರಕ್ಕೆ ದೂಡಿದ ನಂಜುಂಡಶ್ರೋತ್ರಿಯಲ್ಲಿ ಇಂಥ ಯಾವುದೇ ಪ್ರಬುದ್ಧತೆಯನ್ನು ಕಾಣುವುದಿಲ್ಲ (ವಂಶವೃಕ್ಷ). ವಿಶ್ವೇಶ್ವರನ ಪುನರ್ಜನ್ಮವಾಗಿ ಬಂದನೆನ್ನಲಾದ ಕ್ಷೇತ್ರಪಾಲನ ಮೂಲಕ ವೆಂಕಮ್ಮನು ನಿಶ್ಶಂಕೆಯಿಂದ ಸಂತಾನವನ್ನು ಪಡೆದರೆ, ಆಕೆಯ ಮೊದಲ ಮಗ ಅಚ್ಯುತನಿಗೆ ಇದು ಜುಗುಪ್ಸಾವಹವಾದ ಅಕ್ರಮಸಂಬಂಧವಾಗುತ್ತದೆ (ನಾಯಿ ನೆರಳು). ನಿರ್ಲಜ್ಜೆಯಿಂದ ಅಕ್ರಮಸಂಬಂಧದ ಮೂಲಕ ತೇಜುವನ್ನು ಹೆರುವ ಮಂಗಳೆ ಅತ್ಯಾಧುನಿಕಕಾಲದಲ್ಲಿಯೂ ಅಶಾಂತಿಗೆ ತುತ್ತಾಗುತ್ತಾಳೆ (ಕವಲು). ಈಚೆಗಷ್ಟೇ ತಲೆದೋರುತ್ತಿರುವ ಕನ್ಯಾಮಾತೃತ್ವ ಹಾಗೂ ಏಕಪಿತೃತ್ವಗಳ (ಖಜ್ಞಿಜ್ಝಛಿ ಕಚ್ಟಛ್ಞಿಠಿ) ಪರಿಸ್ಥಿತಿಯನ್ನು ಬಯಸಿ ಪಡೆಯುವ ಪಾರ್ವತಿ ನಮಗೆ ಊಹಾತೀತವಾದ ಬೆಳೆವಣಿಗೆಯೆನಿಸಿದರೆ (ನೆಲೆ), ಅದೇ ಕಾದಂಬರಿಯ ಕುಮಾರ್ ತನ್ನ ತಂದೆ ಜವರಾಯಿಯ ಸಾವಿಗೆ ಮುನ್ನ ಹೆಂಡತಿಯ ಅಪ್ಪಣೆಯಂತೆ ಸಂತಾನನಿರೋಧಕವನ್ನು ಬಳಸುತ್ತಿದ್ದವನು ವರ್ಷದೊಳಗೆ ತಂದೆಯಾಗಬೇಕೆಂದು ಪಣ ತೊಡುತ್ತಾನೆ. ಇವನೇ ಕಾದಂಬರಿಯ ಮೊದಲಿಗೆ ತನ್ನ ತಂದೆಯನ್ನು ತಾನೇನೂ ಅವನನ್ನು ಬೇಡಿಕೊಂಡು ಹುಟ್ಟಲಿಲ್ಲವೆಂದೂ ಅವನ ಕಾಮಬಾಧೆಯ ಫಲವಾಗಿ ತಾನು ಹುಟ್ಟಿದೆನೆಂದೂ ದಬಾಯಿಸಿದ್ದನೆಂದರೆ ಬೆರಗಾಗದಿರದು.

ಕೃತಘ್ನನಾದ ಮಗ ಅನೂಪನಿಗೇ ತನ್ನೆಲ್ಲ ಆಸ್ತಿಯನ್ನು ಬರೆದಿಟ್ಟು ಸಾಯುವ ದೆಹಲಿಯ ವಿಮೋಚಿತಮಹಿಳೆ ಕಾಂತಿ ಒಂದು ತುದಿಯಾದರೆ (ತಂತು), ತನ್ನ ಮೌಲ್ಯಗಳಿಗೆ ಬದ್ಧನಾಗದ ಮಗನಿಂದ ಅಂತ್ಯಸಂಸ್ಕಾರವನ್ನೂ ಮಾಡಿಸಿಕೊಳ್ಳದೆ ಆಸ್ತಿಯನ್ನೆಲ್ಲ ದಾನ ಮಾಡಿ ಸಾಯುವ ಹಳ್ಳಿಯ ಹುಟ್ಟುಮೂಕಿ ತಾಯವ್ವ ಮತ್ತೊಂದು ತುದಿ (ತಬ್ಬಲಿಯು ನೀನಾದೆ ಮಗನೆ). ಆರೋಗ್ಯಕಾರಿಯಾದ ಸಂತತಿಯೊಂದೇ ಬಾಳಬೇಕೆಂದು ಹಠ ಹಿಡಿಯುವ ಡಾಕ್ಟರ್ ನಾಡಗೌಡರ ವಿಕ್ಷಿಪ್ತತೆ ಒಂದು ದಿಕ್ಕಾದರೆ, ಆರೋಗ್ಯವಂತರಾದ ಶ್ರೀಪತಿ-ವಸುಂಧರೆ ದಂಪತಿಗಳ ಬಲವದ್ಬ›ಹ್ಮಚರ್ಯದ ಅನಿವಾರ್ಯತೆ ಮತ್ತೊಂದು ದಿಕ್ಕು (ಜಲಪಾತ). ಅದೆಷ್ಟೋ ಪ್ರಯತ್ನಗಳ ಬಳಿಕವೂ ಪ್ರಿನ್ಸಿಪಾಲರ ಪತ್ನಿಗೆ ಕಟ್ಟಿದ್ದು ಹುಸಿಯಾದ ಗರ್ಭ; ಒಂದೇ ಸಂಭೋಗಕ್ಕೆ ಬೇಡದ ಬಸಿರು ಬಂದದ್ದು ಡಾಕ್ಟರ್ ಸರೋಜಾಗೆ (ಗ್ರಹಣ). ಬಾಹ್ಯಾಕಾಶದಲ್ಲಿ ಕೃತಕಫಲೀಕರಣದ (ಐಊ) ಮೂಲಕ ಹುಟ್ಟಿ ಅದೆಷ್ಟೋ ಹೊಯ್ದಾಟದ ಬಳಿಕ ಮತ್ತೊಂದು ಹುಟ್ಟಿಗೆ ಕಾರಣವಾಗುವ ದಾಂಪತ್ಯದ ನೆಲೆಗೆ ಬಂದವರು ಆಕಾಶ್ ಮತ್ತು ಮೇದಿನಿ (ಯಾನ).

ಕೇವಲ ತಂದೆಯರ ಪಾತ್ರಗಳನ್ನೇ ಗಮನಿಸುವುದಾದರೆ, ಆಸ್ತಿಗಾಗಿ ತಂದೆತನ ಗಳಿಸಲು ಹೆಂಡತಿಗೆ ಹಾದರ ಮಾಡಿಸುವ ನಂಜುಂಡಶ್ರೋತ್ರಿ (ವಂಶವೃಕ್ಷ), ವೈರಾಗ್ಯಾಭಾಸಕ್ಕಾಗಿ ತಂದೆತನದ ಬಾಧ್ಯತೆಯನ್ನೇ ಬಿಡುವ ನರಹರಿ (ನಿರಾಕರಣ), ಬಾಧ್ಯತಾರಹಿತತೆಯ ಪರಮಾವತಾರವಾಗಿ ವಿಶ್ವಸಾಹಿತ್ಯದಲ್ಲಿಯೇ ನಿಲ್ಲಬಲ್ಲ ಚೆನ್ನಿಗರಾಯ (ಗೃಹಭಂಗ), ಮಗಳ ಸಂಸಾರಕ್ಕಾಗಿ ತನ್ನ ಬಾಳಿನ ಒಂದೇ ಸುಳ್ಳನ್ನು ಹೇಳಿ ಅದರ ಪ್ರಾಯಶ್ಚಿತ್ತವೆಂಬಂತೆ ಆತ್ಮಹತ್ಯೆ ಮಾಡಿಕೊಂಡ ಸತ್ಯನಿಷ್ಠ ಪರಮೇಶ್ವರಯ್ಯ (ಸಾಕ್ಷಿ), ಸ್ವಯಂ ಸತ್ತೊ್ವೕನ್ನತಿಯಿಂದ ಅತ್ಯಾಚಾರದ ಪಿಂಡವನ್ನೂ ಔರಸಸಂತತಿಯೆಂಬಂತೆ ಸ್ವೀಕರಿಸುವ ನಾಗಭಟ್ಟ (ಸಾರ್ಥ) ಮತ್ತು ಖ್ವಾಜಾ ಜಹಾನ್ (ಆವರಣ) ಮುಂತಾದ ಅವೆಷ್ಟೋ ಮಾದರಿಗಳು ನಮ್ಮೆದುರು ಮುನ್ನುಗ್ಗುತ್ತವೆ. ಇದು ಕಾಮನಬಿಲ್ಲಿನ ಬಣ್ಣಗಳಿಗಿಂತಲೂ ವಿಪುಲ, ಸಂಗೀತದ ಸ್ವರಗಳಿಗಿಂತಲೂ ಸೂಕ್ಷ್ಮ.

ಹೀಗೆ ಭೈರಪ್ಪನವರ ಕಲಾಸೃಷ್ಟಿಯ ಹರಹು ಊಹಾತೀತ; ಪ್ರತಿಯೊಂದು ಅಂಶದಲ್ಲಿಯೂ ನವನವೀನ. ವೈವಿಧ್ಯ ಮತ್ತು ಗಾಂಭೀರ್ಯ, ಪ್ರಬುದ್ಧತೆ ಮತ್ತು ಪರಿಣಾಮಕಾರಿತೆ, ನಿರ್ಲಿಪ್ತಿ ಮತ್ತು ನಿರ್ಭರತೆಗಳು ಅವರ ಎಲ್ಲ ಕೃತಿಗಳ ಸಾಮಾನ್ಯಲಕ್ಷಣ. ಇದು ಮಹಾಕೃತಿಗಳ ಅಸಾಮಾನ್ಯಲಕ್ಷಣವೂ ಹೌದು. ಒಂದು ಮಾತಿನಲ್ಲಿ ಹೇಳುವುದಾದರೆ. ಭೈರಪ್ಪನವರ ಕಾದಂಬರಿಗಳಲ್ಲಿ ಮಾನವಜೀವನದ ಭೌತಿಕ ಮತ್ತು ಭಾವುಕದ್ವಂದ್ವಗಳೆಲ್ಲ ಕಥನರೂಪದಲ್ಲಿ ಸಾಕಾರವಾಗುತ್ತ ಸಜೀವಪಾತ್ರಗಳಿಂದ, ಸಮೃದ್ಧಸನ್ನಿವೇಶಗಳಿಂದ ಪುಷ್ಟಿಗೊಂಡು, ಸಹಜವೂ ಸಮರ್ಥವೂ ಆದ ನುಡಿಗಾರಿಕೆಯಲ್ಲಿ ಆವಿರ್ಭವಿಸಿ ನಮ್ಮೊಳಗೆ ನಾವೇ ಸಮನ್ವಯವನ್ನು ಕಂಡುಕೊಳ್ಳುವಂತೆ ಮಾಡುತ್ತವೆ. ಇದು ಅವರ ರಸಸಿದ್ಧಿಯ ಸ್ವರೂಪಲಕ್ಷಣ. ಹೆಚ್ಚೇನು, ವ್ಯಾಸರ ಮಹಾಭಾರತಕ್ಕೆ ಅನ್ವಯಿಸುವ ಮಾತನ್ನು ಭೈರಪ್ಪನವರ ಕೃತಿಗಳಿಗೂ ಅತಿಶಯೋಕ್ತಿಯ ಅಂಜಿಕೆಯಿಲ್ಲದೆ ಹೇಳಬಹುದು-‘ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್’ (ಮೌಲ್ಯಗಳ ಕಲಾತ್ಮಕ ಅಭಿವ್ಯಕ್ತಿಯನ್ನು ಕುರಿತು ಹೇಳುವುದಾದರೆ, ಇಲ್ಲಿ್ಲ್ಲ್ದು ಬೇರೆಲ್ಲಿಯೂ ಇಲ್ಲ; ಇಲ್ಲಿರುವುದೇ ಮಿಕ್ಕೆಡೆಯೆಲ್ಲ).

ಇಂಥ ಶಾಶ್ವತಸಾಹಿತ್ಯದ ಕಡೆಗೆ ಮತ್ತೊಮ್ಮೆ ಆಸಕ್ತರೆಲ್ಲ ಗಂಭೀರವಾಗಿ ತೊಡಗಿಸಿಕೊಳ್ಳುವ ಸಮಷ್ಟಿರೂಪದ ಒಂದು ನಮ್ರಯತ್ನ ಮೈಸೂರಿನಲ್ಲಿ ಆಯೋಜಿತವಾಗಿರುವುದು ಸ್ತುತ್ಯರ್ಹ. ಇಲ್ಲಿ ಭೈರಪ್ಪನವರ ಸಾರಸ್ವತಲೋಕವನ್ನು ಹೊಸಕಣ್ಣುಗಳಿಂದ, ಹೊಸ ಅನುಭವಗಳಿಂದ, ವಿಭಿನ್ನಸ್ತರಗಳ ಸಾಹಿತ್ಯ ಜಿಜ್ಞಾಸುಗಳು ನೋಡುವಂತಾಗಲಿ. ನಮ್ಮ ನುಡಿಗೆ ಮತ್ತೂ ಹೆಚ್ಚಿನ ಮನ್ನಣೆ ಸಿಗುವಂತಾಗಲಿ.