More

    ಚೆಂಗ್ಡೂ ಎಂಬ ಜಲವಿಸ್ಮಯ ಹಾಗೂ ಗಂಗೆ ತಂದ ಭಗೀರಥ

    ಚೆಂಗ್ಡೂ ಎಂಬ ಜಲವಿಸ್ಮಯ ಹಾಗೂ ಗಂಗೆ ತಂದ ಭಗೀರಥಪ್ರಪಂಚದ ಅತಿ ಹಳೆಯ ಚೆಂಗ್ಡೂ ಜಲಾಶಯ ಇಂದಿಗೂ ಹೂಳು ಮುಕ್ತವಾಗಿದ್ದು, ಕೃಷಿಗೆ ನೀರುಣಿಸುತ್ತಿದ್ದರೆ, ಸ್ವಾತಂತ್ರಾ್ಯ ನಂತರ ನಿರ್ವಣವಾದ ಕರ್ನಾಟಕದ ಕೆಲ ಜಲಾಶಯಗಳು ಹೂಳು ತುಂಬಿ ಪರ್ಯಾಯ ಯೋಜನೆಗಳನ್ನು ಬಯಸುತ್ತಿವೆ. ಹಾಗಾದರೆ ನಾವು ಎಡವಿದ್ದೆಲ್ಲಿ?

    ಇದೊಂದು ವಿಸ್ಮಯಕಾರಿ ಹಾಗೂ ಪ್ರೇರಣಾದಾಯಕ ಕಥನ. 2017ರಲ್ಲಿ ನಾನು ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡ ಪುರಾತನ ಹಾಗೂ ಅಷ್ಟೇ ಅದ್ಭುತವಾದ ಜಲವಿಸ್ಮಯದ ಕಥೆ. ‘ಭಾರತೀಯ ಸಂಸ್ಕೃತಿಯ ಕುರುಹು’ ಹುಡುಕುತ್ತ 2017ರಲ್ಲಿ ಭಾರತದಿಂದ ಲಂಡನ್​ವರೆಗೆ ಭೂಮಾರ್ಗದಲ್ಲಿ ನಡೆಸಿದ ಪ್ರಯಾಣದ ಸಂದರ್ಭದಲ್ಲಿ ಚೀನಾದಲ್ಲಿ ಕೆಲ ದಿನ ಉಳಿದುಕೊಂಡಿದ್ದೆ. ಅದು ಮಧ್ಯ ಚೀನಾದ ಚೆಂಗ್ಡೂ ಪ್ರಾಂತ್ಯ. ಈ ಪ್ರದೇಶದ ವಿಶೇಷತೆಗಳೇನು ಎಂದು ಸ್ಥಳೀಯರನ್ನು ಕೇಳಿದಾಗ ಅಲ್ಲಿನ ಜಲಾಶಯದ ಬಗ್ಗೆ ತಿಳಿಸಿದರು. ಚೀನಾಕ್ಕೆ ಭೇಟಿಕೊಟ್ಟ ಪ್ರತಿಯೊಬ್ಬರು ಈ ಜಲಾಶಯ ನೋಡಲೇಬೇಕು. ಇಲ್ಲವಾದರೆ ಅವರು ಪ್ರವಾಸದ ಮುಖ್ಯಘಟ್ಟ ನೋಡದೇ ಬಿಟ್ಟು ಹೋದಂತೆ ಎಂದು ವಿವರಿಸಿದರು. ಹೀಗಾಗಿ ಸಹಪ್ರವಾಸಿಗರ ಜತೆಗೆ ನಾನು ಆ ಜಲಾಶಯಕ್ಕೆ ಭೇಟಿಕೊಟ್ಟೆ. ಸ್ಥಳೀಯರು ಹೇಳಿದಂತೆ ಅದು ಅದ್ಭುತವಾಗಿತ್ತು. ನಿರ್ವಹಣೆಯೂ ಚೆನ್ನಾಗಿತ್ತು.

    ಈ ಚೆಂಗ್ಡೂ ಡ್ಯಾಂ ನಿರ್ವಣವಾಗಿದ್ದು ಕ್ರಿ.ಪೂ. 256ರಲ್ಲಿ. ಅಂದರೆ 2348 ವರ್ಷಗಳ ಹಿಂದೆ. ಇದು ವಿಶ್ವದ ಹಳೆಯ ನೀರಾವರಿ ಯೋಜನೆ. ಚೀನಾದಲ್ಲಿ ಕ್ವಿನ್ ರಾಜವಂಶಸ್ಥ ಕಿಂಗ್ ಝಾಹೋ ಎಂಬಾತ ಈ ಯೋಜನೆಗೆ ಬೇಕಾದ ಧನಸಹಾಯ ಮಾಡಿದ್ದರೂ, ಇದರ ಕಾರಣಿಕರ್ತ ಚೆಂಗ್ಡೂ ಪ್ರದೇಶಕ್ಕೆ ನಿಯೋಜನೆಗೊಂಡ ಆ ಕಾಲದ ಪ್ರಾಂತೀಯ ಆಯುಕ್ತ ಹಾಗೂ ಜಲ ತಜ್ಞ ಲೀ ಪೆಂಗ್.

    ಈ ಜಲಾಶಯ ನಿರ್ವಣವಾಗುವುದಕ್ಕೆ ಮುನ್ನ ಚೆಂಗ್ಡೂ ಪ್ರದೇಶ ವರ್ಷಪೂರ್ತಿ ನೆರೆ ಹಾಗೂ ಬರ ಎರಡನ್ನೂ ಅನುಭವಿಸುತ್ತಿತ್ತು. ಅಲ್ಲಿನ ಕ್ವಿಂಗ್ ಚೆಂಗ್ ಪರ್ವತ ಪ್ರದೇಶದಲ್ಲಿ ಹುಟ್ಟಿ ಹರಿಯುವ ನದಿಗಳ ಪೈಕಿ ಒಂದಾದ ಮಿನ್ ಜಿಯಾಂಗ್ ಆ ಭಾಗದ ಜನರನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ಅಪಾರ ಕಷ್ಟ-ನಷ್ಟಗಳಿಗೆ ಕಾರಣವಾಗುತ್ತಿತ್ತು. ಮಳೆಗಾಲದಲ್ಲಿ ಪರ್ವತ ಸಾಲುಗಳಿಂದ ರಭಸವಾಗಿ ಹರಿಯುವ ನದಿ ಪ್ರವಾಹದ ಜತೆಗೆ ನದಿಮುಖಜ ಪ್ರದೇಶಗಳು ಹೂಳು ತುಂಬುವಂತೆ ಮಾಡುತ್ತಿತ್ತು. ಹೀಗಾಗಿ ಆ ಸ್ಥಳಗಳು ಕೃಷಿಗೆ ಅಯೋಗ್ಯವಾಗುತ್ತಿದ್ದವು. ರೈತರ ಶ್ರಮಕ್ಕೆ ಒಂದು ವರ್ಷವೂ ಫಲ ದೊರೆಯುತ್ತಿರಲಿಲ್ಲ. ಈ ಬಗ್ಗೆ ಜನರು ದೊರೆಗೆ ದೂರು ಕೊಟ್ಟಾಗ ಜಲ ತಜ್ಞ ಲೀ ಪೆಂಗ್​ನನ್ನು ಅಲ್ಲಿನ ಪ್ರಾಂತೀಯ ಆಯುಕ್ತನನ್ನಾಗಿ ನೇಮಿಸಿ ಸಮಸ್ಯೆಗೆ ಪರಿಹಾರ ಹುಡುಕುವಂತೆ ಸೂಚಿಸಿದ.

    ಚೆಂಗ್ಡೂಗೆ ಬಂದ ಪೆಂಗ್ ಮಿನ್ ಜಿಯಾಂಗ ನದಿಯ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುದೀರ್ಘ ಕಾಲ ಮೀಸಲಿಟ್ಟ. ನೀರಿರುವ ಕಡೆಯಲ್ಲ ಜಲಾಶಯ ನಿರ್ವಿುಸುವ ‘ಆಧುನಿಕ ಜಲತಜ್ಞ’ ಆತನಾಗಿರಲಿಲ್ಲ. ಮಳೆಗಾಲದಲ್ಲಿ ನದಿ ಹೇಗೆ ವರ್ತಿಸುತ್ತದೆ? ಬೇಸಿಗೆಯಲ್ಲಿ ಅದರ ಸ್ವಭಾವವೇನು? ಪ್ರವಾಹ ಸಂದರ್ಭದಲ್ಲಿ ನದಿ ತನ್ನ ಒಡಲಿನಲ್ಲಿ ತುಂಬಿಕೊಂಡು ಬರುವ ಹೂಳುಗಳನ್ನು ಹೇಗೆ ನಿರ್ವಹಣೆ ಮಾಡಬೇಕು? ನದಿಯ ಸಹಜ ಗತಿಯೇನು? ಎಂಬುದನ್ನೆಲ್ಲ ಪತ್ತೆ ಹಚ್ಚಿದ. ಅಷ್ಟಾದ ಮೇಲೂ ಆತ ಜಲಾಶಯ ನಿರ್ವಿುಸುವ ಸಾಹಸಕ್ಕೆ ಮೊದಲು ಕೈ ಹಾಕಲಿಲ್ಲ. ಬದಲಾಗಿ ನೀರಿನ ಹರಿವನ್ನು ವಿಭಜಿಸುವ ತಂತ್ರಕ್ಕೆ ಮುಂದಾದ. ಪರ್ವತ ಶ್ರೇಣಿಯಿಂದ ತಪ್ಪಲು ಪ್ರದೇಶದವರಗೆ ಮೂರು ಹಂತದಲ್ಲಿ ನೀರನ್ನು ವಿಭಜಿಸುವ ಜತೆಗೆ ಹೂಳನ್ನು ಸೋಸುವುದು ಹೇಗೆ ಎಂಬ ಬಗ್ಗೆ ಯೋಜನೆ ರೂಪಿಸಿದ. ಆತನ ಈ ಯೋಜನೆಗೆ ಚೀನಿ ಅರಸನಿಂದ ಸಕಾರಾತ್ಮಕವಾಗಿ ಧನಸಹಾಯ ದೊರೆತರೆ ಜನರೂ ತಮ್ಮೆಲ್ಲ ಶ್ರಮವನ್ನು ಧಾರೆ ಎರೆದರು. ಪರ್ವತಕ್ಕೆ ಬೆಂಕಿ ಇಟ್ಟು ಕಾಯಿಸಿ, ನೀರೆರುದು ತಂಪಾಗಿಸಿ 66 ಅಡಿ ಉದ್ದದ ಕಾಲುವೆ ತೋಡುವುದಕ್ಕೆ ಎಂಟು ವರ್ಷಗಳು ಬೇಕಾಯಿತು. ಪ್ರತಿ ವರ್ಷದ ಮಳೆಗಾಲದಲ್ಲಿ ಈ ಶ್ರಮದ ಕೆಲ ಭಾಗ ತೊಳೆದು ಹೋದರೂ ಧೃತಿಗೆಡದೆ ಯೋಜನೆ ಮುಂದುವರಿಸಲಾಯಿತು.

    ಈಗಿನ ಬೈಪಾಸ್ ರಸ್ತೆಗಳ ರೀತಿ ಈ ಕಾಲುವೆ ಮೂರು ಹಂತದಲ್ಲಿ ನೀರನ್ನು ವಿಭಜಿಸುತ್ತಿತ್ತು. ಜತೆಗೆ ನೀರು ಸಂಗ್ರಹವಾಗುವ ಸ್ಥಳಕ್ಕಿಂತ ತುಸು ಹಿಂಭಾಗದಲ್ಲಿ ಹೂಳು ದಡಕ್ಕೆ ಬಂದು ಬಡಿದು ನಿಲ್ಲುವಂತೆ ಮಾಡಿ ತಾನಾಗಿಯೇ ಸೋಸಿ ಇನ್ನೊಂದು ಭಾಗದಿಂದ ಹೊರ ಹೋಗುವಂತೆ ಮಾಡಲಾಯಿತು. ಈ ರೀತಿ ಮೂರು ಕಡೆ ವಿಭಜನೆಗೊಂಡ ನೀರು ತಪ್ಪಲು ಸೇರುವ ಸ್ಥಳದಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು. ಇದರಿಂದ ಚೆಂಗ್ಡೂ ಪ್ರದೇಶ ಹಸಿರಿನಿಂದ ನಳನಳಿಸುವಂತಾಯಿತು. ಪ್ರವಾಹಪೀಡಿತ ಪ್ರದೇಶಗಳೆಲ್ಲ ಸಂಪದ್ಭರಿತವಾದವು. ಈಗಲೂ ಈ ಜಲಾಶಯದ ಮೂಲಕ ಚೀನಾದಲ್ಲಿ 5300 ಕಿ.ಮೀ.ಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದದಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ ಎಂದರೆ ಇದೊಂದು ವಿಸ್ಮಯವಲ್ಲವೇ?

    2000ನೇ ಇಸ್ವಿಯಲ್ಲಿ ಈ ಜಲಾಶಯ ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಸಂರಕ್ಷಣೆಗೆ ಚೀನಾ ಸರ್ಕಾರ ಎಲ್ಲಿಲ್ಲದ ಒತ್ತು ನೀಡುತ್ತಿದೆ. ತಮ್ಮಲ್ಲಿರುವ ಎಲ್ಲ ವಸ್ತುಗಳಿಂದಲೂ ಜಗತ್ತನ್ನು ಸೆಳೆಯುವುದರಲ್ಲಿ ಎತ್ತಿದ ಕೈ ಹೊಂದಿರುವ ಚೀನಾ ಈಗ ಚೆಂಗ್ಡೂ ಜಲಾಶಯವನ್ನು ಪ್ರವಾಸೋದ್ಯಮ ಹೆಸರಿನಲ್ಲೂ ಜಾಣ್ಮೆಯಿಂದ ಬಳಸಿಕೊಳ್ಳುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. 2008ರಲ್ಲಿ ಚೀನಾದಲ್ಲಿ ಸಂಭವಿಸಿದ ಭೂಕಂಪನ ಈ ಜಲಾಶಯಕ್ಕೆ ತುಸು ಧಕ್ಕೆಯುಂಟು ಮಾಡಿದೆಯಾದರೂ ಒಟ್ಟಾರೆ ಸ್ವರೂಪಕ್ಕೆ ಹಾನಿಯಾಗಿಲ್ಲ. ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಚೆಂಗ್ಡೂ ಜಲಾಶಯದ ಕೊಡುಗೆ ಮಹತ್ವದ್ದು.

    ಅಂದ ಹಾಗೆ ಭಾರತೀಯ ಸಂಸ್ಕೃತಿಯ ಕುರುಹು ಹುಡುಕುತ್ತ ಹೊರಟ ನಾವು ಚೀನಿ ಜಲಾಶಯವನ್ನು ನೋಡಿ ತೃಪ್ತರಾದರೆ ಸಾಕೆ? ಇದರಿಂದ ನಮ್ಮ ಪ್ರವಾಸದ ಉದ್ದೇಶ ಈಡೇರಲು ಸಾಧ್ಯವೇ? ಹೀಗಾಗಿ ಹುಡುಕಾಟ ಮುಂದುವರಿಯಿತು. ಅಲ್ಲಿಂದ ನಮ್ಮ ಪ್ರಯಾಣ ಸಾಗಿದ್ದು ‘ಧಾನ್ ಹಾ’ ನಗರದ ಕಡೆ. ಇದು ಗೋಬಿ ಮರುಭೂಮಿಯ ಆಚೆಗಿನ ಪ್ರದೇಶ. ರಸ್ತೆಯ ಮೂಲಕ ಈ ಮರುಭೂಮಿ ದಾಟುವಷ್ಟರಲ್ಲಿ ಹಲವು ಬಾರಿ ಸುಧಾರಿಸಿಕೊಳ್ಳಬೇಕು. ಬಿಸಿಗಾಳಿ, ಸುಡುಬಿಸಿಲು ಹೆಜ್ಜೆಹೆಜ್ಜೆಗೂ ಹಿಮ್ಮೆಟಿಸಿ ಬಿಡುತ್ತದೆ. ನಾವು ಈ ನಗರದಲ್ಲಿ ಒಂದು ದಿನ ಉಳಿದುಕೊಂಡಾಗ ಮತ್ತೊಂದು ಸೋಜಿಗ ಎದುರಾಯಿತು. ಚೀನಾ ಎಂದರೆ ಬೌದ್ಧ ಧರ್ಮದ ಮಹಾತಾಣ ಎಂದಷ್ಟೇ ಭಾವಿಸಿದ್ದ ನಮಗೆ ಹಿಂದೂ ಸಂಸ್ಕೃತಿಯ ಬೇರುಗಳು ಅಲ್ಲಿ ಕಂಡು ಅಚ್ಚರಿಯನ್ನುಂಟು ಮಾಡಿತು. ಆ ನಗರದಲ್ಲಿ ನಮ್ಮ ಅಜಂತಾ-ಎಲ್ಲೋರಾ ಮಾದರಿಯ 1000ಕ್ಕೂ ಹೆಚ್ಚು ಗುಹಾಂತರಗಳಿವೆ. ಅಲ್ಲಿ ಕಾಲಿಟ್ಟ ತಕ್ಷಣ ನನ್ನ ಬದುಕಿನ ದೊಡ್ಡ ಅಚ್ಚರಿಯೊಂದು ತೆರೆದುಕೊಂಡಿತು. ಏಕೆಂದರೆ ಆ ಗುಹಾಂತರಗಳಲ್ಲಿ ಕೆತ್ತಲ್ಪಟ್ಟ ಚಿತ್ರಗಳು ಹಿಂದೂಗಳ ಪೂಜನೀಯ ಗ್ರಂಥವಾದ ರಾಮಾಯಣದ ಘಟನಾವಳಿಗಳು! ಹೀಗಾಗಿ ಸಹಸ್ರಾರು ವರ್ಷಗಳ ಹಿಂದೆ, ಬೌದ್ಧಧರ್ಮ ಪ್ರವೇಶಕ್ಕೂ ಪೂರ್ವದಲ್ಲಿ ಹಿಂದೂ ಸಂಸ್ಕೃತಿಯ ಜಾಡುಗಳು ಚೀನಾದಲ್ಲಿ ಗಟ್ಟಿಯಾಗಿದ್ದವು ಎಂಬುದಕ್ಕೆ ಸಾಕ್ಷಿ ದೊರಕಿತು. ಗುಹಾಂತರಗಳು ಅಜಂತಾ-ಎಲ್ಲೋರಾ ಮಾದರಿಯಲ್ಲಿ ಇವೆಯಾದರೂ ಸಂರಕ್ಷಣೆ ವಿಚಾರದಲ್ಲಿ ಚೀನಾ ಸರ್ಕಾರ ನೀಡುವ ಆದ್ಯತೆ ನಮಗಿಂತ ಹಲವು ಪಟ್ಟು ಹೆಚ್ಚು.

    ಈಗ ಮತ್ತೆ ನೀರಾವರಿಯ ವಿಷಯಕ್ಕೆ ಬರೋಣ. ಜಲಸಂರಕ್ಷಣೆ ಹಾಗೂ ಜಲಾಶಯಗಳ ನಿರ್ಮಾಣ ವಿಚಾರದಲ್ಲಿ ಕರ್ನಾಟಕದಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಕೆಆರ್​ಎಸ್, ತುಂಗ-ಭದ್ರಾ, ನಾರಾಯಣಪುರ, ಶರಾವತಿ ಸೇರಿ ಹತ್ತಾರು ಜಲಯೋಜನೆಗಳು ನಮ್ಮಲ್ಲಿವೆ. ಇವುಗಳಿಂದ ರಾಜ್ಯದ ಕೃಷಿಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಯೂ ಲಭಿಸಿದೆ. ಆದರೆ ನಿರ್ವಹಣೆ ವಿಚಾರಕ್ಕೆ ಬಂದಾಗ ನಾವು ಚೀನಿಯರಿಂದ ಕಲಿಯಬೇಕಿರುವುದು ಬಹಳಷ್ಟಿದೆ. ಪ್ರಪಂಚದ ಅತಿ ಹಳೆಯ ಚೆಂಗ್ಡೂ ಜಲಾಶಯ ಇಂದಿಗೂ ಹೂಳು ಮುಕ್ತವಾಗಿದ್ದು, ಕೃಷಿಗೆ ನೀರುಣಿಸುತ್ತಿದ್ದರೆ, ಸ್ವಾತಂತ್ರಾ್ಯ ನಂತರ ನಿರ್ವಣವಾದ ರಾಜ್ಯದ ಕೆಲ ಜಲಾಶಯಗಳು ಹೂಳು ತುಂಬಿ ಪರ್ಯಾಯ ಯೋಜನೆಗಳನ್ನು ಬಯಸುತ್ತಿವೆ. ಹಾಗಾದರೆ ನಾವು ಎಡವಿದ್ದೆಲ್ಲಿ?

    ಚೆಂಗ್ಡೂ ಜಲಸಾಹಸ ಮಾಡಿದ ಲೀ ಪೆಂಗ್​ನ ನೆನಪಿನಲ್ಲೇ ಭಾರತಕ್ಕೆ ಬಂದಾಗ ನನ್ನನ್ನು ಬಹುವಾಗಿ ಕಾಡಿದ್ದು ಭಗೀರಥ. ದೇವಗಂಗೆಯನ್ನು ಧರೆಗಿಳಿಸಿದ ಭಗೀರಥ ಲೀ ಪೆಂಗ್​ನ ರೀತಿ ಇಂಜಿನಿಯರ್ ಆಗಿದ್ದಿರಬೇಕೆಂದು ನನಗೆ ಅನಿಸುತ್ತಿತ್ತು. ಒಮ್ಮೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ‘ವಾಲ್ಮೀ’ ನಿರ್ದೇಶಕರಾಗಿದ್ದ ರಾಜೇಂದ್ರ ಪೋದ್ದಾರ್ ಹಾಗೂ ರಾಜಸ್ಥಾನದಂಥ ಮರಳುಗಾಡಿನಲ್ಲಿ ಜಲಸಾಕ್ಷರತೆ ಆರಂಭಿಸಿದ ರಾಜೇಂದ್ರ ಸಿಂಗ್ ಅವರೊಂದಿಗೆ ಚರ್ಚೆ ನಡೆಸುವ ಅವಕಾಶ ಲಭಿಸಿತ್ತು. ಆ ಸಂದರ್ಭದಲ್ಲಿ ಲೀ ಪೆಂಗ್ ಹಾಗೂ ಭಗೀರಥನ ಹೆಸರು ಪ್ರಸ್ತಾಪಿಸಿದೆ. ‘ಭಗೀರಥ ಭಾರತದ ಪುರಾತನ ಇಂಜಿನಿಯರ್ ಇರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇದಕ್ಕೆ ಕಿರುನಗೆಯಿಂದ ಉತ್ತರಿಸಿದ ರಾಜೇಂದ್ರ ಸಿಂಗ್, ‘ಭಗೀರಥನ್ನೊಬ್ಬ ಇಂಜಿನಿಯರ್’ ಎಂದು ತಾವು ಪುಸ್ತಕ ಬರೆದಿರುವುದಾಗಿ ತಿಳಿಸಿದರು. ಗಂಗೆಯನ್ನೇ ಧರೆಗಿಳಿಸಿದ ಆ ಮೇಧಾವಿ ಇಂಜಿನಿಯರ್ ಭಗೀರಥನಿಗೆ ಮನದಲ್ಲೇ ನಮಿಸಿದೆ.

    (ಲೇಖಕರು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts