ಇನ್ನಾ ವಿಶೇಷ ಕೃಷಿ ಆಂದೋಲನ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
ಕೃಷಿಕರು ಹಲವಾರು ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿದ್ದು, ಅದರಲ್ಲೂ ಕಾರ್ಮಿಕರ ಸಮಸ್ಯೆಯಿಂದ ತಮ್ಮ ಫಲವತ್ತಾದ ಕೃಷಿಭೂಮಿಗಳನ್ನು ಹಡೀಲು ಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಾ ಗ್ರಾಪಂ ಸ್ಥಳೀಯ ವಿಕಾಸ ಭಾರತ ಟ್ರಸ್ಟ್‌ನ ಸಹಕಾರದೊಂದಿಗೆ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ರಿಯಾಯಿತಿ ದರದಲ್ಲಿ ಗದ್ದೆ ಉಳುಮೆ ಮಾಡಿಕೊಡುವ ಯೋಜನೆ ಅನುಷ್ಠಾನಗೊಳಿಸಿದೆ.

ಇನ್ನಾ ಗ್ರಾಪಂ ವ್ಯಾಪ್ತಿಯ ಎಲ್ಲ ಕೃಷಿಕರು ಕೃಷಿಯತ್ತ ಆಕರ್ಷಿತರಾಗಬೇಕೆಂಬ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದ್ದು, ರೈತರು ಗಂಟೆಗೆ 500 ರೂ. ಪಾವತಿಸಿ ಈ ಟ್ರ್ಯಾಕ್ಟರ್ ಸೇವೆ ಬಳಸಿಕೊಳ್ಳಬಹುದಾಗಿದೆ ಎಂದು ಸಂಯೋಜಕರಲ್ಲೋರ್ವರಾದ ಇನ್ನಾ ದೀಪಕ್ ಕೋಟ್ಯಾನ್ ತಿಳಿಸಿದ್ದಾರೆ. ಉಳಿದ ಹಣವನ್ನು ಟ್ರಸ್ಟ್ ಭರಿಸಲಿದ್ದು, ಜಮೀನನ್ನು ಬಂಜರು ಬಿಟ್ಟ ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದು ತಿಳಿಸಿದ್ದಾರೆ.

ದಾವಣಗೆರೆ, ಶಿವಮೊಗ್ಗ ಕಡೆಗಳಿಂದ ಬಂದಿರುವ ಟ್ರ್ಯಾಕ್ಟರ್‌ನವರು ಪ್ರತೀ ಗಂಟೆಗೆ 900ರಿಂದ 1200 ರೂ. ವರೆಗೆ ಹಣ ಪಡೆಯುತ್ತಿದ್ದು, ಕೃಷಿಕರಿಗೆ ಇದು ಹೊರೆಯಾಗಲಿದೆ. ಆದರೆ ಈ ವಿನೂತನ ಕೃಷಿಗೆ ಉತ್ತೇಜನ ನೀಡುವ ಈ ಯೋಜನೆಯು ಇಡೀ ಗ್ರಾಮದ ಕೃಷಿಕರಿಗೆ ಅನುಕೂಲಕರವಾಗಲಿದೆ. ಕೃಷಿಯಿಂದ ರೈತರು ವಿಮುಖರಾಗಿರುವ ಈ ಕಾಲಘಟ್ಟದಲ್ಲಿ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಇಂತಹ ಯೋಜನೆಗಳು ಪ್ರತಿಯೊಂದು ಗ್ರಾಮದಲ್ಲೂ ಸಂಘ ಸಂಸ್ಥೆಗಳ ಮೂಲಕ ನಡೆದಾಗ ಇನ್ನಷ್ಟು ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಹಸಿರಾಗಿರಿಸುವುದರಲ್ಲಿ ಸಂದೇಹವಿಲ್ಲ ಎಂಬುದು ಬಹುತೇಕ ಕೃಷಿಕರ ಮಾತು.
ಈ ಯೋಜನೆ ಪ್ರಸ್ತುತ ಇನ್ನಾ ಗ್ರಾಪಂ ವ್ಯಾಪ್ತಿಗೆ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಅವಶ್ಯ ಬಿದ್ದರೆ ಹತ್ತಿರದ ಪಂಚಾಯಿತಿ ವ್ಯಾಪ್ತಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ದೀಪಕ್ ಕೋಟ್ಯಾನ್ ತಿಳಿಸಿದ್ದು, ಆಸಕ್ತರು ದೂ. ಸಂಖ್ಯೆ 9632893328 ಸಂಖ್ಯೆ ಸಂಪರ್ಕಿಸಬಹುದಾಗಿದೆ.

ವಿಕಾಸ ಭಾರತ ಟ್ರಸ್ಟ್‌ನ ಸಹಕಾರದೊಂದಿಗೆ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ರಿಯಾಯಿತಿ ದರದಲ್ಲಿ ಗದ್ದೆ ಉಳುಮೆ ಮಾಡಿಕೊಡುವ ಈ ಯೋಜನೆ ನಿಜಕ್ಕೂ ಈ ಭಾಗದ ಕೃಷಿಕರಿಗೆ ಸಂತಸ ತಂದಿದೆ. ಜತೆಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ.
– ದೀಪಕ್ ಕಾಮತ್, ಸಾಮಾಜಿಕ ಕಾರ್ಯಕರ್ತ

ರಿಯಾಯಿತಿ ದರದಲ್ಲಿ ಗದ್ದೆ ಉಳುಮೆ ಮಾಡಿಕೊಡುವ ಈ ಯೋಜನೆ ಕೃಷಿಕರಿಗೆ ಅನುಕೂಲಕರವಾಗಲಿ ಎಂಬ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ.
– ಪ್ರದೀಪ್ ಶೆಟ್ಟಿ, ವಿಕಾಸ್ ಭಾರತ್ ಟ್ರಸ್ಟ್

Leave a Reply

Your email address will not be published. Required fields are marked *