ನಾನು ಪಂಜರದ ಪಕ್ಷಿ, ವೆಂಕಯ್ಯನಾಯ್ಡು ಅವರಿಗಿಂತ ಭಿನ್ನವಲ್ಲ ನನ್ನ ಪರಿಸ್ಥಿತಿ…

ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಹುದ್ದೆ, ಶಿಷ್ಟಾಚಾರದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಮೇಲೆ, ವಿಧಾನ ಪರಿಷತ್​ ಸಭಾಪತಿ ಬಸವರಾಜ್​ ಹೊರಟ್ಟಿ, ನಾನು ಸಭಾಪತಿ ಆದಮೇಲೆ ಪಂಜರದ ಗಿಳಿಯಾಗಿದ್ದೇನೆ. ವೆಂಕಯ್ಯ ನಾಯ್ಡು ಹಾಗೂ ನನ್ನ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಎಂದು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಮಂತ್ರಿ ಆಗದೆ ಇರುವುದಕ್ಕೆ ಅನೇಕ ಶಿಕ್ಷಕರಿಗೆ ಬೇಸರವಿದೆ. ಹಾಗಾಗಿ ಶಿಕ್ಷಣ ಮಂತ್ರಿಗಳ ಜತೆ ಚರ್ಚಿಸಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಒತ್ತಡ ಸಹಜ. ಈ ನಡುವೆ ನನಗೆ ಕೊಟ್ಟಿರುವ ಸಭಾಪತಿ ಸ್ಥಾನ ಒಪ್ಪಿಕೊಂಡು ಮುನ್ನಡೆಯುತ್ತಿದ್ದೇನೆ ಎಂದಿದ್ದಾರೆ.

ನನಗೆ ಸರ್ಕಾರಕ್ಕೆ ಪತ್ರ ಬರೆಯಲು, ಅಧಿಕಾರಿಗಳನ್ನು ಕರೆದು ಮಾತನಾಡಿಸಲು ಅಧಿಕಾರವಿದೆ ಎನ್ನುವುದನ್ನು ಬಿಟ್ಟರೆ ವೆಂಕಯ್ಯ ನಾಯ್ಡು ಅವರ ಸ್ಥಿತಿಗಿಂತ ಭಿನ್ನವಾಗಿಲ್ಲ ಎಂದಿರುವ ಅವರು, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 50 % ಕಡಿಮೆ ಅಂಕ ಬಂದರೆ ವೇತನ ಕಡಿಮೆ ನೀಡುವುದು, ಶಿಕ್ಷಕರ ನೇಮಕಾತಿ ಅರ್ಜಿ ಹಾಕದೆ ಇರುವುದಕ್ಕೆ ಅನುಮತಿ ನೀಡದರಿವುದು ತಪ್ಪು ಎಂದು ಅಭಿಪ್ರಾಯ ಪಟ್ಟರು.

ಸರ್ಕಾರಿ ಶಾಲೆಗಳಲ್ಲಿ ಕಡಿಮೆ ಫಲಿತಾಂಶ ಬಂದರೆ ವಾರ್ನಿಂಗ್​ ಕೊಟ್ಟು ಮುಂದುವರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಖಾಸಗಿ ಸಂಸ್ಥೆಗಳಿಗೆ ಅನುದಾನ ನೀಡದೆ ಇರುವುದು ಸರಿಯಲ್ಲ. ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಡವಟ್ಟು ಆಗಿದೆ. ಸ್ನಾತಕೋತ್ತರ ಪದವಿ ಜತೆ ಬಿಎಡ್​ ಮಾಡಿರುವವರನ್ನೂ ನೇಮಕ ಮಾಡಬೇಕಿತ್ತು. ಆದರೆ ಸ್ನಾತಕೋತ್ತರ ಮಾತ್ರ ಆದವರನ್ನು ನೇಮಕ ಮಾಡಿದ್ದಾರೆ ಎಂದು ಬೇಸರಿಸಿದರು.

ಆರ್ ಟಿಇ ದುರ್ಬಳಕೆ ಆಗುತ್ತಿದೆ. ಈ ಕುರಿತು ಹಿಂದೆ ಇದ್ದ ಶಿಕ್ಷಣ ಸಚಿವ ತನ್ವೀರ್​ ಸೇಟ್​ ಜತೆ ಮಾತನಾಡಿದ್ದೆ. ಆರ್​ಟಿ ಇ ಬಂದ್​ ಮಾಡಬೇಕು. ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಬಂದ್​ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿಯಬಾರದು ಎಂದು ಹೇಳಿದರು.